ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಸಾಕ್ಷಿಯಾದ – ಭವ್ಯ ಧರ್ಮ ಸಭೆ.

ದೇವಣಗಾಂವ ಸೆ.08

ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಶ್ರೀ ಬಕ್ಕೇಶ್ವರ ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಪ್ರಭು ಶಾಂತ ಮಹಾಸ್ವಾಮಿಗಳ ಪುರಪ್ರವೇಶ ಹಾಗೂ ಧರ್ಮಸಭೆ ಸೋಮವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು.

ಗವಿಸಿದ್ದೇಶ್ವರ ಸಂಸ್ಥಾನ ಮಠ, ಕೊಪ್ಪಳದ ಜಗದ್ಗುರು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾ ಆಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮದ ಗುರು ಹಿರಿಯರು, ಮುಖಂಡರು, ಯುವಕರು ಹಾಗೂ ಮಹಿಳೆಯರು ಕುಂಭ ಮೇಳದೊಂದಿಗೆ ನೂತನ ಪೀಠಾಧಿಪತಿಗಳನ್ನು ಭವ್ಯವಾಗಿ ಮೆರವಣಿಗೆಯಲ್ಲಿ ಕರೆತಂದು ಆತ್ಮೀಯವಾಗಿ ಸ್ವಾಗತಿಸಿದರು.

ಸ್ವಾಗತ ಗೀತೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಧರ್ಮ ಸಭೆಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಭಕ್ತಿ ಪೂರ್ವಕವಾಗಿ ಸನ್ಮಾನ ನೆರವೇರಿಸಲಾಯಿತು.

ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಪ್ರಭು ಶಾಂತ ಮಹಾಸ್ವಾಮಿಗಳು, ಮಠದ ಹಿರಿಯರು, ಭಕ್ತರು ಹಾಗೂ ಗ್ರಾಮಸ್ಥರ ಮಾರ್ಗದರ್ಶನ, ಸಹಕಾರ ಮತ್ತು ಆಶೀರ್ವಾದದೊಂದಿಗೆ ಶ್ರೀ ಬಕ್ಕೇಶ್ವರ ಮಠದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿ ಕೊಂಡು ಹೋಗಲು ತಾವು ಸದಾ ಸಿದ್ಧರಾಗಿರುವುದಾಗಿ ಹೇಳಿದರು. ಮಠವು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜದಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸುವ ಕೇಂದ್ರವಾಗಬೇಕು ಎಂದು ತಿಳಿಸಿದರು.

ಸಂಸ್ಥಾನ ಹಿರೇಮಠ, ಅಫಜಲಪುರದ ಶ್ರೀ ಷಟಸ್ಥಲ ಬ್ರಹ್ಮ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ದೇವಣಗಾಂವ ಗ್ರಾಮದ ಜನರು ಪ್ರತಿಯೊಂದು ಉತ್ತಮ ಕಾರ್ಯದಲ್ಲೂ ಒಗ್ಗಟ್ಟಿನಿಂದ ಭಾಗವಹಿಸುವ ಪರಂಪರೆ ಹೊಂದಿದ್ದಾರೆ. ಗ್ರಾಮದ ಜನರ ಏಕತೆ, ಸಹಕಾರ ಮತ್ತು ಧಾರ್ಮಿಕ ಭಾವನೆ ಶ್ಲಾಘನೀಯವಾಗಿದೆ ಎಂದರು.

ದೇವಣಗಾಂವ ತಮ್ಮ ತವರು ಮನೆಯಂತಿದೆ ಎಂದು ಭಾವನಾತ್ಮಕವಾಗಿ ವರ್ಣಿಸಿದ ಅವರು, ಗ್ರಾಮದ ಸುಸಂಸ್ಕೃತ ಜೀವನ ಪದ್ಧತಿ, ಉತ್ತಮ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ಕೊಂಡಾಡಿದರು. ಗ್ರಾಮದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮುಂದಾಳತ್ವ ವಹಿಸಿ ಸಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದೇವಣಗಾಂವ ಗ್ರಾಮದ ಧಾರ್ಮಿಕ ಪರಂಪರೆ ಮತ್ತು ಇಲ್ಲಿನ ಹಿರಿಯರ ಸೇವೆಯನ್ನು ಸ್ಮರಿಸಿದ ಶ್ರೀಗಳು, ಗ್ರಾಮದ ಆಧ್ಯಾತ್ಮಿಕ ವಾತಾವರಣಕ್ಕೆ ಹಿರಿಯ ಪೀಠಾಧಿಪತಿಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಮಠದ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ ಡಾ, ಗುರುಮಹಾಂತ ಮಹಾಸ್ವಾಮಿಗಳು, ಮಹಾಂತೇಶ್ವರ ಮಠ, ನರೋಣ, ಶ್ರೀ ಷಟಸ್ಥಲ ಬ್ರಹ್ಮ ಕೈಲಾಸಲಿಂಗ ಶಿವಾಚಾರ್ಯರು, ಹಿರೇಮಠ, ಗೌರ ಬಿ, ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾ ಸ್ವಾಮಿಗಳು, ವಿರಕ್ತಮಠ, ಅಕ್ಕಲಕೋಟ, ಹಾಗೂ ಪೂಜ್ಯ ಶ್ರೀ ವೀರಭದ್ರಯ್ಯ ಸ್ವಾಮಿಗಳು, ವಿರಕ್ತಮಠ, ದೇವಣಗಾಂವ್ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಆಗಮಿಸಿದ ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೆ ಶ್ರೀ ಎಸ್ ಎಸ್ ಗಂಗನಳ್ಳಿ ಪ್ರಾಚಾರ್ಯರು ಮಾಡಿದರು. ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

ಒಟ್ಟಾರೆ, ನೂತನ ಪೀಠಾಧಿಪತಿಗಳ ಪುರ ಪ್ರವೇಶ ಹಾಗೂ ಧರ್ಮಸಭೆ ದೇವಣಗಾಂವ್ ಗ್ರಾಮದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಇತಿಹಾಸದಲ್ಲಿ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿ ಬಂದಿತು.

ಗ್ರಾಮದ ಜನರ ಒಗ್ಗಟ್ಟು, ಭಕ್ತಿ ಹಾಗೂ ಧಾರ್ಮಿಕ ಶ್ರದ್ಧೆ ಕಾರ್ಯಕ್ರಮದ ವಿಶೇಷ ಆಕರ್ಷಣೆ ಯಾಗಿತ್ತು. ನಿರೂಪಣೆ ಶ್ರೀ ಆರ್ ಎಸ್ ಗಂಗನಳ್ಳಿ ಪ್ರಾಚಾರ್ಯರು ಶ್ರೀ ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡಣಿ ತಾಲೂಕ ಸಿಂದಗಿ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button