ತಂಬಾಕು, ಗುಟ್ಕಾ, ಮದ್ಯಪಾನದಿಂದ ದೂರವಿದ್ದು ಆರೋಗ್ಯದ ಬಗ್ಗೆ – ಕಾಳಜಿ ವಹಿಸಲು ಸಾರ್ವಜನಿಕರಿಗೆ ಕರೆ ನೀಡಿದರು.
ದೇವಣಗಾಂವ ಸೆ.08


ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಬೆಂಗಳೂರು, ಕರ್ನಾಟಕ ಇವರ ವತಿಯಿಂದ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕ್ಯಾನ್ಸರ್ ಅರಿವು ಹಾಗೂ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಅಗತ್ಯ ಆರೋಗ್ಯ ತಪಾಸಣೆಗಳನ್ನು ನಡೆಸಿ, ಯಾವುದೇ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಸಿಬ್ಬಂದಿ ಸಾರ್ವಜನಿಕರಿಗೆ ಕರೆ ನೀಡಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರೆಜಿನಲ್ ಕೋ-ಆರ್ಡಿನೇಟರ್ ಶ್ರೀನಿಧಿ ನಾಯ್ಕಲ್ ಅವರು ಮಾತನಾಡಿ, ವಿಶೇಷವಾಗಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಮಹಿಳೆಯರಲ್ಲಿ ಕಾಣಿಸಿ ಕೊಳ್ಳಬಹುದಾದ ಸ್ತನ ಹಾಗೂ ಗರ್ಭ ಕಂಠದ ಕ್ಯಾನ್ಸರ್ ಕುರಿತು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ದೇಹದಲ್ಲಿ ಯಾವುದೇ ಅಸಾಮಾನ್ಯ ಬದಲಾವಣೆ ಕಂಡು ಬಂದರೆ ಮುಜುಗರ ಪಡದೆ ತಕ್ಷಣ ಆರೋಗ್ಯ ಕೇಂದ್ರ ಅಥವಾ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಕ್ಯಾನ್ಸರ್ ಕುರಿತು ಅರಿವು, ಮುನ್ನೆಚ್ಚರಿಕೆ ಮತ್ತು ಆರಂಭಿಕ ತಪಾಸಣೆ ಅತ್ಯಂತ ಮುಖ್ಯವಾಗಿದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ನಿಯಮಿತವಾಗಿ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
30 ವರ್ಷ ಮೇಲ್ಪಟ್ಟವರು ಬಿಪಿ, ಶುಗರ್ ಪರೀಕ್ಷಿಸಿ ಕೊಳ್ಳಿ:-
ದೇವಣಗಾಂವ್ ಆಯುಷ್ಮಾನ್ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಶ್ರೀಮತಿ ಭಾಗ್ಯಶ್ರೀ ವಾಲಿಕಾರ್ ಅವರು ಮಾತನಾಡಿ, 30 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಯಾವುದೇ ಆರೋಗ್ಯ ಸಮಸ್ಯೆಯ ಲಕ್ಷಣಗಳಿಲ್ಲದಿದ್ದರೂ ನಿಯಮಿತವಾಗಿ ರಕ್ತ ದೊತ್ತಡ (ಬಿಪಿ) ಮತ್ತು ರಕ್ತದಲ್ಲಿನ ಸಕ್ಕರೆ (ಶುಗರ್) ಪರೀಕ್ಷಿಸಿ ಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಅವುಗಳನ್ನು ನಿಯಂತ್ರಿಸಲು ಹಾಗೂ ಮುಂದಿನ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯ ಕೇಂದ್ರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಗುಟ್ಕಾ, ತಂಬಾಕು ಸೇವನೆಯಿಂದ ದೂರವಿರಿ:-
ಪ್ರಾಥಮಿಕ ಸುರಕ್ಷಣಾಧಿಕಾರಿ ಶ್ರೀಮತಿ ಸುಹಾಸಿನಿ ಕಲಶೆಟ್ಟಿ ಅವರು ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯ ಬಗ್ಗೆ ಜಾಗೃತರಾಗಬೇಕು. ಗುಟ್ಕಾ, ತಂಬಾಕು ಸೇರಿದಂತೆ ವ್ಯಸನಕಾರಿ ಪದಾರ್ಥಗಳ ಸೇವನೆಯಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಸಲಹೆ ನೀಡಿದರು.
ಯುವಕರು ಸೇರಿದಂತೆ ಯಾರೂ ಯಾವುದೇ ರೀತಿಯ ವ್ಯಸನಕ್ಕೆ ಒಳಗಾಗಬಾರದು. ಆರೋಗ್ಯವೇ ಜೀವನದ ದೊಡ್ಡ ಸಂಪತ್ತು. ಆದ್ದರಿಂದ ಉತ್ತಮ ಆಹಾರ ಪದ್ಧತಿ, ಸ್ವಚ್ಛತೆ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ರೋಗಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿ ವಹಿಸಿರಿ:-

ಶಿಬಿರದಲ್ಲಿ ಮಹಿಳೆಯರಿಗೆ ಸ್ತನ ಮತ್ತು ಗರ್ಭಕಂಠದ ಆರೋಗ್ಯದ ಕುರಿತು ವಿಶೇಷ ಅರಿವು ಮೂಡಿಸಲಾಯಿತು. ಸ್ತನದಲ್ಲಿ ಹೊಸದಾಗಿ ಗಡ್ಡೆ ಕಂಡುಬರುವುದು, ಸ್ತನದ ಆಕಾರದಲ್ಲಿ ಅಸಹಜ ಬದಲಾವಣೆ, ಅಸಾಮಾನ್ಯ ಸೋರಿಕೆ ಮುಂತಾದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಯಿತು.
ಅದೇ ರೀತಿ ಅಸಾಮಾನ್ಯ ಯೋನಿ ರಕ್ತಸ್ರಾವ, ಋತುಸ್ರಾವದ ನಡುವೆ ರಕ್ತಸ್ರಾವ, ಅಸಹಜ ಸ್ರಾವ ಅಥವಾ ನಿರಂತರ ಶ್ರೋಣಿಭಾಗದ ನೋವು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಆರೋಗ್ಯ ಸಿಬ್ಬಂದಿ ತಿಳಿಸಿದರು. ವಯಸ್ಸು ಮತ್ತು ವೈದ್ಯಕೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ HPV ಪರೀಕ್ಷೆ, ಪ್ಯಾಪ್ ಸ್ಮಿಯರ್ ಹಾಗೂ ಇತರೆ ಸೂಕ್ತ ತಪಾಸಣೆಗಳನ್ನು ಮಾಡಿಸಿ ಕೊಳ್ಳುವಂತೆ ಸಲಹೆ ನೀಡಲಾಯಿತು.
ಆರೋಗ್ಯಕರ ಸಮಾಜ ನಿರ್ಮಾಣವೇ ಶಿಬಿರದ ಉದ್ದೇಶ:-
ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಿ, “ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆ” ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡು, ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಬೇಕು. ಯಾವುದೇ ರೀತಿಯ ವ್ಯಸನಕ್ಕೆ ಒಳಗಾಗದೆ ಆರೋಗ್ಯಕರ ಜೀವನ ನಡೆಸಬೇಕು ಎಂಬ ಸಂದೇಶವನ್ನು ಶಿಬಿರದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಣಗಾಂವ ಗ್ರಾಮದ ಪರವಾಗಿ ವರದಿಗಾರರಾದ ಸಿಹಿ ಕಹಿ ವರದಿಗಾರ ಗಾಲಿಬಸಾಹೇಬ ನಾಗಾವಿ ಅವರು ಇಂಡಿಯನ್ ಕ್ಯಾನ್ಸರ್ ಸೊಸೈಟಿಯವರು ದೇವಣಗಾಂವ್ ಗ್ರಾಮಕ್ಕೆ ನೀಡಿದ ಸೇವೆಯನ್ನು ಶ್ಲಾಘಿಸಿ, ಅವರ ಸೇವೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮದ ಜನರು ಹಾಗೂ ತಮ್ಮ ಪರವಾಗಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಅದೇ ರೀತಿ ಶಿಬಿರದ ಯಶಸ್ಸಿಗೆ ಶ್ರಮಿಸಿದ ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‌ಗಳು, ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ವಿಶೇಷವಾಗಿ ಆಶಾ ಕಾರ್ಯಕರ್ತೆಯರು ಶಿಬಿರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಸಾರ್ವಜನಿಕರನ್ನು ತಪಾಸಣೆಗೆ ಕರೆತರುವಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಮುಖ್ಯಸ್ಥ ಗುರುರಾಜ್ ಕುಲಕರ್ಣಿ, ರೆಜಿನಲ್ ಮ್ಯಾನೇಜರ್ ಶ್ರೀನಿಧಿ ನಾಯ್ಕಲ್, ರೆಜಿನಲ್ ಕೋ-ಆರ್ಡಿನೇಟರ್ ಡಾ. ಸುಶ್ಮಿತಾ, ಮೆಡಿಕಲ್ ಆಫೀಸರ್ ಡಾ. ಜ್ಯೋತಿ ಶೀಲವಂತ, ಆಡಳಿತ ವೈದ್ಯಾಧಿಕಾರಿ, ಆಲಮೇಲ ಡಾ. ಅರ್ಪಿತಾ, ಡೆಂಟಲ್ ಸರ್ಜನ್ ಹಾಗೂ ಸ್ಟಾಫ್ ನರ್ಸ್‌ಗಳಾದ ಕೀರ್ತಿ, ಸೌಮ್ಯ ಮತ್ತು ಸ್ನೇಹಾ ಉಪಸ್ಥಿತರಿದ್ದರು.
ಆಯುಷ್ಮಾನ್ ಆರೋಗ್ಯ ಕೇಂದ್ರ ದೇವಣಗಾಂವ್‌ನ ಆರೋಗ್ಯ ಅಧಿಕಾರಿ ಶ್ರೀಮತಿ ಭಾಗ್ಯಶ್ರೀ ವಾಲಿಕಾರ್, ಪ್ರಾಥಮಿಕ ಸುರಕ್ಷಣಾಧಿಕಾರಿ ಶ್ರೀಮತಿ ಸುಹಾಸಿನಿ ಕಲಶೆಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಸಂತೋಷಕುಮಾರ ಕೋರಿ, ಎನ್‌ಸಿಡಿ ಆಪ್ತ ಸಮಾಲೋಚಕ ಮಾರ್ತಾಂಡ ವಗ್ಗೆ ಹಾಗೂ ಆಶಾ ಕಾರ್ಯಕರ್ತೆಯರಾದ ಕವಿತಾ ಕಾಸರ, ಸಂಗೀತಾ ರಜಪೂತ, ಮಹಾದೇವಿ ಸುತಾರ, ಶಾಂತಾಬಾಯಿ ಹಿಂಚಿಗೇರಿ, ಮಹಾದೇವಿ ಗಾಣಿಗೇರ ಮತ್ತು ಗಂಗೂಬಾಯಿ ಬಾನಾಳ ಹಾಗೂ ದೇವಣಗಾಂವ್ ಗ್ರಾಮದ ಜನರು ಸೇರಿದಂತೆ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

