ಪತ್ರಿಕಾ ರಂಗ ಜನರ ಧ್ವನಿಯಾಗಿ ಕೆಲಸ ಮಾಡಬೇಕು – ಎ.ವಸಂತ್ ಕುಮಾರ.
ರಾಯಚೂರು ಸೆ.21

ಪತ್ರಿಕಾ ರಂಗ ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸತ್ಯವನ್ನು ವರದಿ ಮಾಡಬೇಕು. ಸಮಾಜದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವ ಹಾಗೂ ನ್ಯಾಯ ದೊರಕಿಸುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್ ಹೇಳಿದರು.
ನಗರದ ಕಾರ್ಮಿಕರ ಭವನದಲ್ಲಿ ನಡೆದ ವಿಸ್ತಾರ ವಾಣಿ ಕನ್ನಡ ದಿನಪತ್ರಿಕೆ ಉದ್ಘಾಟನೆ ಹಾಗೂ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವೂ ತನ್ನದೇ ಆದ ಗ್ರಹಿಕೆ ಹಾಗೂ ಜವಾಬ್ದಾರಿಯನ್ನು ಹೊಂದಿದೆ. ಪತ್ರಿಕಾರಂಗ ಜನಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪತ್ರಿಕಾರಂಗ ಪ್ರಮುಖ ವೇದಿಕೆಯಾಗಿದೆ. ಪತ್ರಿಕೆಗಳು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯದೆ, ಸಮಾಜದ ಶಕ್ತಿಯಾಗಿ ನಿಲ್ಲಬೇಕು. ವಂಚಿತರು ಹಾಗೂ ದುರ್ಬಲ ವರ್ಗಗಳ ಪರವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ವ್ಯಕ್ತಿ, ಸಿದ್ಧಾಂತ ಅಥವಾ ಪಕ್ಷಕ್ಕೆ ಪತ್ರಿಕೆಗಳು ಸೀಮಿತವಾಗ ಬಾರದು. ಸೈದ್ಧಾಂತಿಕ ವಿಷಯಗಳು ಬಂದಾಗ ಪಕ್ಷ ಹಾಗೂ ಜಾತಿಯನ್ನು ನೋಡದೆ ಸತ್ಯದ ಪರವಾಗಿ ನಿಲ್ಲಬೇಕು. ಪತ್ರಿಕೆಯ ಧ್ವನಿ ಮತ್ತು ಸಿದ್ಧಾಂತ ಜನರ ಪರವಾಗಿದ್ದು, ಜನರಿಗೆ ಶಕ್ತಿ ತುಂಬುವಂತಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾ ಮುಖಂಡ ವಿರೂಪಾಕ್ಷಿ, ಹಿರಿಯ ಹೋರಾಟಗಾರರು ಅಂಬಣ್ಣ ಅರೋಲಿಕರ್, ಮಾರೆಪ್ಪ ಹರವಿ, ಶರಣು ಮುದ್ದಮಗುಡ್ಡಿ, ಇನ್ನಿತರರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

