🚨ಬ್ರೇಕಿಂಗ್ ನ್ಯೂಸ್, ಉಡುಪಿ ಜಿಲ್ಲೆಯಲ್ಲಿ ಗುಟ್ಕಾ ನಿಷೇಧದ – ಹತ್ತು ಹಲವು ಕಳ್ಳ ಮಾರ್ಗಗಳು..!🚨
ಉಡುಪಿ ಸೆ.20

ಕರ್ನಾಟಕ ಸರ್ಕಾರವು ಆರೋಗ್ಯದ ಹಿತ ದೃಷ್ಟಿಯಿಂದ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ, ಉಡುಪಿ ಜಿಲ್ಲೆಯಲ್ಲಿ ಇದು ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂಬ ಗಂಭೀರ ಸತ್ಯ ಹೊರ ಬಂದಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ, ನಿಷೇಧಿತ ಗುಟ್ಕಾ ಉತ್ಪನ್ನಗಳು ಜಿಲ್ಲೆಯಾದ್ಯಂತ ರಹಸ್ಯವಾಗಿ ಯಮ ವೇಗದಲ್ಲಿ ಮಾರಾಟವಾಗುತ್ತಿವೆ.
🛑 ಗುಟ್ಕಾ ಕಳ್ಳವ್ಯಾಪಾರ ನಡೆಯುವ ರಹಸ್ಯ ವಿಧಾನಗಳು ಹಾಗೂ ಅಂಗಡಿಗಳ ವಿವರ:-
ಕಿರು ಪಡಿತರ ಹಾಗೂ ದಿನಸಿ ಅಂಗಡಿಗಳು (Small Provision Stores):-
ಹಳ್ಳಿಗಳು ಮತ್ತು ಒಳ ರಸ್ತೆಗಳಲ್ಲಿರುವ ಸಣ್ಣಪುಟ್ಟ ದಿನಸಿ ಅಂಗಡಿಗಳಲ್ಲಿ ಮುಂಭಾಗ ಸಾಮಾನ್ಯ ವಸ್ತುಗಳನ್ನು ಇಟ್ಟುಕೊಂಡು, ಕೌಂಟರ್‌ನ ತಳ ಭಾಗದ ರಹಸ್ಯ ಡ್ರಾಯರ್‌ಗಳಲ್ಲಿ ಅಥವಾ ಗೋಣಿ ಚೀಲಗಳ ಅಡಿಯಲ್ಲಿ ಗುಟ್ಕಾ ಪಾಕೆಟ್ ಗಳನ್ನು ಬಚ್ಚಿಡಲಾಗುತ್ತದೆ. ಪರಿಚಿತ ಹಾಗೂ ನಂಬಿಕಸ್ಥ ಗಿರಾಕಿಗಳಿಗೆ ಮಾತ್ರ ಕದ್ದು ಮುಚ್ಚಿ ಇವುಗಳನ್ನು ಮಾರಾಟ ಮಾಡಲಾಗುತ್ತದೆ.
ತಂಪು ಪಾನೀಯ ಹಾಗೂ ಬೇಕರಿ ಮಳಿಗೆಗಳು (Bakery & Juice Stalls):-
ಬಸ್ ನಿಲ್ದಾಣಗಳು ಮತ್ತು ಪ್ರಮುಖ ವೃತ್ತಗಳ ಬಳಿಯಿರುವ ಬೇಕರಿಗಳಲ್ಲಿ ಸಿಗರೇಟ್ ಜೊತೆಗೆ ಗುಟ್ಕಾ ಪ್ಯಾಕೆಟ್ ಗಳನ್ನು ಸಿಗರೇಟ್ ಬಾಕ್ಸ್‌ಗಳ ಹಿಂದೆ ಅಥವಾ ಜ್ಯೂಸ್ ತಯಾರಿಸುವ ಕೌಂಟರ್ ನ ಮರೆಯಲ್ಲಿ ಅಡಗಿಸಿಡ ಲಾಗುತ್ತದೆ. ರಾತ್ರಿ ಹೊತ್ತು ಇಂತಹ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತದೆ.
ಪಾನಿಪೂರಿ ಹಾಗೂ ತಳ್ಳುವ ಗಾಡಿಗಳು (Street Vendors & Panipuri Carts):-
ಸಂಜೆ ವೇಳೆ ಬೀದಿ ಬದಿಗಳಲ್ಲಿ ಕಾಣಿಸಿಕೊಳ್ಳುವ ಪಾನಿಪೂರಿ ಗಾಡಿಗಳು ಮತ್ತು ಟೀ ಸ್ಟಾಂಡ್‌ಗಳು ಗುಟ್ಕಾ ಮಾರಾಟದ ಪ್ರಮುಖ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇವುಗಳಲ್ಲಿ ಯಾವುದೇ ಖಾಯಂ ವಿಳಾಸವಿರದೆ ಇರುವುದರಿಂದ ದಾಳಿ ನಡೆಸುವುದು ಕಷ್ಟಕರವಾಗುತ್ತದೆ.
ಪಾನ್ ಶಾಪ್ ಗಳು ಹಾಗೂ ತಂಬಾಕು ಸ್ಟಾಲ್‌ಗಳು (Pan Shops):-
ಹೊರಗಡೆಗೆ ಕೇವಲ ಚಾಕೊಲೇಟ್ ಮತ್ತು ಕಡಲೆಕಾಯಿಗಳನ್ನು ಪ್ರದರ್ಶನಕ್ಕೆ ಇಟ್ಟು, ಅಂಗಡಿಯ ಒಳಭಾಗದಲ್ಲಿ ಅಥವಾ ಗೋಡೆಯ ಸಣ್ಣ ರಂಧ್ರಗಳ ಮೂಲಕ ಗುಟ್ಕಾ ಪ್ರಿಯರಿಗೆ ಬೇಡಿಕೆಯ ವಸ್ತುಗಳನ್ನು ಪೂರೈಸಲಾಗುತ್ತದೆ.
⚠️ ಎಚ್ಚರಿಕೆ:-
ನಿಷೇಧಿತ ವಸ್ತುಗಳ ಈ ಕಳ್ಳ ಮಾರ್ಗದ ಮಾರಾಟ ದಿಂದ ಯುವ ಜನತೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸುಲಭವಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆಯ ಕಟ್ಟು ನಿಟ್ಟಿನ ನಿಗಾದ ನಡುವೆಯೂ ಈ ಅಕ್ರಮ ದಂಧೆ ಅವ್ಯಾಹತವಾಗಿ ಮುಂದುವರಿದಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ
