ಸಂವಿಧಾನವನ್ನು ಕೇವಲ ಪೂಜಿಸುವುದಕ್ಕಿಂತ ನಿತ್ಯ ಬದುಕಿನಲ್ಲಿ ಅನುಸರಿಸುವುದು ಮುಖ್ಯ – ಮುಖ್ಯೋಪಾಧ್ಯಾಯ ಎಸ್.ಬಿ ಗವಿ.
ಜಕ್ಕಲಿ ನ.26




ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಶಾಲಾ ಸಂಕೀರ್ಣದ ಗಾಂಧಿ ಭವನದಲ್ಲಿ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ (GMPS), ಎಚ್.ಪಿ.ಕೆ.ಜಿ.ಎಸ್ ಹಾಗೂ ಸರ್ಕಾರಿ ಉರ್ದು ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ‘ಭಾರತೀಯ ಸಂವಿಧಾನ ದಿನಾಚರಣೆಯನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷರಾದ ಶ್ರೀ ಅಂದಪ್ಪ ರಾಮಪ್ಪ ಮಾದರ್ ವಹಿಸಿದ್ದರು. ಆರಂಭದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ, ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಲಾಯಿತು.
ವಿಶೇಷ ಉಪನ್ಯಾಸ ನೀಡಿದ ಜಿ.ಎಂ.ಪಿ.ಎಸ್ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಬಿ. ಗವಿ ಅವರು ಮಾತನಾಡಿ, ಈ ಹಿಂದೆ ನವೆಂಬರ್ 26 ನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು, ಅದು ಕೇವಲ ನ್ಯಾಯಾಲಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಭಾವನೆಯಿತ್ತು.
ಆದರೆ ಸಂವಿಧಾನ ಪ್ರತಿಯೊಬ್ಬ ಪ್ರಜೆಯ ಬದುಕಿನ ನಿಯಮಾವಳಿ. ಸಂವಿಧಾನವನ್ನು ಕೇವಲ ಆರಾಧನೆ ಮಾಡುವುದಕ್ಕಿಂತ ಅದರ ಆಶಯಗಳನ್ನು ಅನುಸರಿಸಿ ಕೊಂಡು ಹೋಗುವುದು ಅತ್ಯಂತ ಶ್ರೇಷ್ಠ. ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿ, ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ SDMC ಅಧ್ಯಕ್ಷರಾದ ಶ್ರೀ ಅಂದಪ್ಪ ರಾಮಪ್ಪ ಮಾದರ್ ಅವರು ಮಾತನಾಡಿ, ಇಂದು ನಾವೆಲ್ಲರೂ ಯಾವುದೇ ಭೇದಭಾವವಿಲ್ಲದೆ ಸುರಕ್ಷಿತವಾಗಿ ಮತ್ತು ಸಮಾನರಾಗಿ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಪವಿತ್ರ ಸಂವಿಧಾನವೇ ಮೂಲ ಕಾರಣ.
ಮಕ್ಕಳಲ್ಲಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ಸಂಕೋಚ ಬಿಟ್ಟು ಮುಂದಿನ ದಿನಗಳಲ್ಲಿ ಶಾಲೆಯ ಎಲ್ಲಾ ಜಯಂತಿಗಳಲ್ಲಿ ವೇದಿಕೆ ಮೇಲೆ ಬಂದು ಧೈರ್ಯವಾಗಿ ಭಾಷಣ ಮಾಡುವ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಂವಿಧಾನದ ಕುರಿತು ಅತ್ಯುತ್ತಮ ಭಾಷಣ ಮಾಡಿ ಗಮನ ಸೆಳೆದರು.
ಎಚ್.ಪಿ.ಕೆ.ಜಿ.ಎಸ್ ಮುಖ್ಯೋಪಾಧ್ಯಾಯರಾದ ಶ್ರೀ ಹೆಚ್. ಎಸ್. ಬಿಂಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಶಿಕ್ಷಕರಾದ ಶ್ರೀ ಎಸ್. ಎ. ಪಲ್ಲೆದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಸುಮಿತ್ರಾ ಬಡಿಗೇರ್ ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಶ್ರೀ ಎಂ. ವಿ. ತಾಳಿಕೋಟಿ, ಶ್ರೀ ಎಸ್. ಘೋಡೆಸವಾರ, ಶ್ರೀ ಎ. ಎಂ. ಸೂರ್ಯಭಟ್, ಶಿಕ್ಷಕಿಯರಾದ ಶ್ರೀಮತಿ ಸಿ. ಎಸ್. ಬೆಳ್ಳಟ್ಟಿ, ಶ್ರೀಮತಿ ಯಲ್ಲರೆಡ್ಡಿ, ಶ್ರೀಮತಿ ಪಿ. ಜಿ. ಹುಯಿಲಗೋಳ, ಶ್ರೀಮತಿ ಎ. ಪಿ. ಶೆಟ್ಟರ್ ಸೇರಿದಂತೆ ಮೂರೂ ಶಾಲೆಗಳ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
