ಸತ್ಯ ಮತ್ತು ನಿಷ್ಕಲ್ಮಶ ಭಕ್ತಿಯಿಂದ ಭಗವಂತನನ್ನು ಒಲಿಸಿ ಕೊಂಡ ದಾಸ ಶ್ರೇಷ್ಠ ಕನಕದಾಸರು – ಮುಖ್ಯೋಪಾಧ್ಯಾಯ ಎಸ್.ಬಿ ಗವಿ.

ಜಕ್ಕಲಿ ನ.27

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಶಾಲಾ ಸಂಕೀರ್ಣದ ಗಾಂಧಿ ಭವನದಲ್ಲಿ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ (GMPS), ಎಚ್.ಪಿ.ಕೆ.ಜಿ.ಎಸ್ ಹಾಗೂ ಸರ್ಕಾರಿ ಉರ್ದು ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ‘ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು’ ಅತ್ಯಂತ ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷರಾದ ಶ್ರೀ ಅಂದಪ್ಪ ರಾಮಪ್ಪ ಮಾದರ್ ವಹಿಸಿದ್ದರು. ಆರಂಭದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಲಾಯಿತು.

ವಿಶೇಷ ಉಪನ್ಯಾಸ ನೀಡಿದ ಜಿ.ಎಂ.ಪಿ.ಎಸ್ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಬಿ. ಗವಿ ಅವರು ಮಾತನಾಡಿ, 15-16 ನೇ. ಶತಮಾನದಲ್ಲಿ ಬಾಡ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪ ನಾಯಕ, ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಾಗಿ ಜನ ಕಲ್ಯಾಣ ಮಾಡಿದರು. ತಮಗೆ ದೊರೆತ ಅಪಾರ ಸಂಪತ್ತನ್ನು ಬಡವರಿಗೆ ದಾನ ಮಾಡಿ ಕನಕರೆನಿಸಿಕೊಂಡರು. ಗುರು ವ್ಯಾಸರಾಯರ ಸನ್ನಿಧಿಯಲ್ಲಿ ಅನೇಕ ಕಠಿಣ ಪರೀಕ್ಷೆಗಳನ್ನು ಎದುರಿಸಿ, ನಾನು ಎಂಬ ಅಹಂಕಾರವನ್ನು ತ್ಯಜಿಸಿದಾಗ ಮಾತ್ರ ಸ್ವರ್ಗ ಪ್ರಾಪ್ತಿ ಎಂಬ ಸತ್ಯವನ್ನು ಜಗತ್ತಿಗೆ ಸಾರಿದರು. ಉಡುಪಿಯ ಶ್ರೀಕೃಷ್ಣನ ದರ್ಶನ, ರಾಮಧಾನ್ಯ ಚರಿತೆಯಂತಹ ಕೃತಿಗಳ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಕನಕದಾಸರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.

ಅತಿಥಿಗಳಾಗಿ ಮಾತನಾಡಿದ SDMC ಸದಸ್ಯರಾದ ಶ್ರೀ ಮುತ್ತಪ್ಪ ಮರೀಬಸಪ್ಪನವರ, ಬಸವಣ್ಣನವರಂತೆ ಸಮಾನತೆಯನ್ನು ಸಾರಿದ ಕನಕದಾಸರು, ತಾಮ್ರದ ತಂಬಿಗೆಯ ಪರೀಕ್ಷೆಯ ಮೂಲಕ ಕೇವಲ ಹೊರಗಿನ ಶುದ್ಧಿಯಲ್ಲ, ನಮ್ಮ ಅಂತರಂಗದ ಶುದ್ಧಿಯೇ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟರು. ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಓದಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ SDMC ಅಧ್ಯಕ್ಷರಾದ ಶ್ರೀ ಅಂದಪ್ಪ ರಾಮಪ್ಪ ಮಾದರ್ ಅವರು ಮಾತನಾಡಿ, ಮುಖ್ಯೋಪಾಧ್ಯಾಯ ಎಸ್.ಬಿ ಗವಿ ಅವರು ಕನಕದಾಸರ ಜೀವನ ಚರಿತ್ರೆಯನ್ನು ಅತ್ಯಂತ ಮನಮುಟ್ಟುವಂತೆ ವಿವರಿಸಿದ್ದಾರೆ. ಶಾಲೆಯ ಮಕ್ಕಳು ವೇದಿಕೆ ಏರಿ ಭಾಷಣ ಮಾಡುತ್ತಿರುವುದು ಮತ್ತು ವಚನ-ಕೀರ್ತನೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾಗಿ ಇನ್ನೂ ಹೆಚ್ಚಿನ ಸ್ಪರ್ಧೆಗಳನ್ನು ಏರ್ಪಡಿಸಿದರೆ SDMC ಸಮಿತಿ ಮತ್ತು ಪಾಲಕರು ಸದಾ ಪ್ರೋತ್ಸಾಹ ನೀಡಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕನಕದಾಸರ ಜೀವನ ಮತ್ತು ಪವಾಡಗಳ ಕುರಿತು ಭಾಷಣ ಮಾಡಿ ಗಮನ ಸೆಳೆದರು.

ಶಿಕ್ಷಕರಾದ ಶ್ರೀ ಎಂ. ವಿ. ತಾಳಿಕೋಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಕ್ಷಕರಾದ ಶ್ರೀ ಎ. ಎಂ. ಸೂರ್ಯಭಟ್ ವಂದನಾರ್ಪಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಎಚ್.ಪಿ.ಕೆ.ಜಿ.ಎಸ್ ಮುಖ್ಯೋಪಾಧ್ಯಾಯರಾದ ಶ್ರೀ ಹೆಚ್. ಎಸ್. ಬಿಂಗಿ, SDMC ಸದಸ್ಯರಾದ ಶ್ರೀ ಬಸಪ್ಪ ಬಂಡಿ, ಹಿರಿಯ ಶಿಕ್ಷಕರಾದ ಶ್ರೀ ಎಸ್. ಎ. ಪಲ್ಲೆದ್, ಶ್ರೀ ಎಸ್. ಘೋಡೆಸವಾರ, ಶಿಕ್ಷಕಿಯರಾದ ಶ್ರೀಮತಿ ಸಿ. ಎಸ್. ಬೆಳ್ಳಟ್ಟಿ, ಶ್ರೀಮತಿ ಸುಮಿತ್ರಾ ಬಡಿಗೇರ್, ಶ್ರೀಮತಿ ಯಲ್ಲರೆಡ್ಡಿ, ಶ್ರೀಮತಿ ಪಿ. ಜಿ. ಹುಯಿಲಗೋಳ, ಶ್ರೀಮತಿ ಎ. ಪಿ. ಶೆಟ್ಟರ್ ಸೇರಿದಂತೆ ಮೂರೂ ಶಾಲೆಗಳ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button