ಶ್ರೀಶಾರದಾದೇವಿಯವರ ಜಗನ್ಮಾತೃತ್ವವನ್ನು ಜಗತ್ತಿಗೆ ಸಾಬೀತು ಪಡಿಸಿದ್ದೇ ಷೋಡಶೀ ಪೂಜೆ – ಶ್ರೀಮತಿ ಎಂ.ಗೀತಾ ನಾಗರಾಜ್.
ಚಳ್ಳಕೆರೆ ಮೇ.20

ಶ್ರೀಮಾತೆ ಶಾರದಾದೇವಿಯವರ ಜಗನ್ಮಾತೃತ್ವವನ್ನು ಶ್ರೀರಾಮಕೃಷ್ಣರ ಭಾವ ಪೂರ್ಣ ಪೂಜೆಯ ಮೂಲಕ ಸಾಬೀತು ಪಡಿಸಿದ್ದೇ ಷೋಡಶೀ ಪೂಜೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷೆ ಎಂ.ಗೀತಾ ನಾಗರಾಜ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಫಲಹಾರಿಣೀ ಕಾಳೀಪೂಜೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು “ಷೋಡಶೀ ಪೂಜೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

1873 ರ ಜೂನ್ 5 ನೇ. ತಾರೀಖಿನ ವೈಶಾಖ ಬಹುಳ ಅಮಾವಾಸ್ಯೆಯ ಫಲಹಾರಿಣೀ ಕಾಳೀ ಪೂಜೆಯ ಪವಿತ್ರ ದಿನದಂದು ಅವತಾರ ವರಿಷ್ಠ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಸಹಧರ್ಮಿಣಿ ಶ್ರೀಮಾತೆ ಶಾರದಾದೇವಿಯವರನ್ನು ತಮ್ಮ ಕೋಣೆಯಲ್ಲಿ ಕುಳ್ಳಿರಿಸಿ ಅವರಿಗೆ ಹದಿನಾರು ಅಂಗಗಳನ್ನು ಒಳಗೊಂಡ “ಷೋಡಶೋಪಚಾರ” ಪೂಜೆಯನ್ನು ಮಾಡಿದರೆ ಶ್ರೀಮಾತೆಯವರು ಜಗನ್ಮಾತೆಯಾಗಿ ಈ ವಿಶಿಷ್ಟ ಪೂಜೆಯನ್ನು ಸ್ವೀಕರಿಸಿದರು.

ಬಂಗಾಳದಲ್ಲಿ ಅತ್ಯಂತ ಪ್ರಸಿದ್ಧವಾದ ಪೂಜೆಯಾದ ಷೋಡಶೀಯು ದೇವಿಯ ದಶಮಹಾವಿದ್ಯೆಯರಲ್ಲಿ ಮೂರನೆಯವಳಾಗಿ ಹದಿನಾರರ ಹರೆಯದ, ಪರಮ ಲಾವಣ್ಯವತಿಯಾದ ಈಕೆಯ ಪೂಜೆಯ ಘಟನೆಯು ಶ್ರೀರಾಮಕೃಷ್ಣ-ಶ್ರೀಶಾರದಾದೇವಿ ಇಬ್ಬರ ಜೀವನದಲ್ಲಿಯೂ ಅತ್ಯಂತ ಮಹತ್ವಪೂರ್ಣವಾದ ಘಟನೆ. ಶ್ರೀರಾಮಕೃಷ್ಣರು ತಮ್ಮ ಸಕಲ ಸಾಧನೆಗಳ ಫಲವನ್ನು ಶಾರದಾದೇವಿ ಯವರಿಗೆ ಸಮರ್ಪಿಸಿ ಶ್ರೀಮಾತೆಯವರ ದೇವಿತ್ವವನ್ನು ಜಗತ್ತಿನ ಜನರಿಗೆ ತಿಳಿಸಿದರು ಎಂದು ಷೋಡಶೀ ಪೂಜೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.

ವಿಶೇಷ ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ಮಾಕಂಸ್ ಲಕ್ಷ್ಮೀ ಬಾಲಾಜೀ, ನೇತ್ರಾ ಮಂಜುನಾಥ, ಪ್ರೇಮಲೀಲಾ ರಾಮಣ್ಣ ಅವರಿಂದ ವಿಶೇಷ ದೇವಿ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಕಿರು ಕಾಣಿಕೆಗಳ ಸಮರ್ಪಣೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ನಾಗರತ್ನಮ್ಮ, ಶೋಭಾ ರಮೇಶ್, ಪ್ರಮೀಳಾ ಜಗದೀಶ್, ಪ್ರೇಮಾ, ಅನುಸೂಯ, ರಾಘವೇಂದ್ರ, ಸುವರ್ಣ, ಸರಸ್ವತಿ, ಸೌಮ್ಯ, ಸುನೀತಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

