ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರಾಮಪ್ಪ ಕರ್ಜಗಿ ಅವರಿಗೆ – ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ.
ತೊದಲಬಾಗಿ ಜು.13

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ಹಾಗೂ ಪಿಕೆಪಿಎಸ್ ನಿರ್ದೇಶಕರಾದ ಶ್ರೀ ರಾಮಪ್ಪ ತಿಪ್ಪಣ್ಣ ಕರ್ಜಗಿ ಅವರಿಗೆ ಗ್ರಾಮಸ್ಥರ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಸಮಾರಂಭವನ್ನು ಪರಮ ಪೂಜ್ಯ ಆನಂದ ದೇವರ ದಿವ್ಯ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಹುಮುಖ ಪ್ರತಿಭೆ, ತಮ್ಮ ಹಾಸ್ಯಭರಿತ ಮಾತುಗಳಿಂದ ಜನಮನ ಗೆದ್ದ ಶ್ರೀ ಸಿದ್ದಪ್ಪಜ್ಜ ಬಿದರಿ (ಬೀಳಗಿ) ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ರೈತ ಸಂಘದ ಮುಖಂಡರಿಗೆ ಎಲ್ಲಾ ರೈತರು ಬೆನ್ನೆಲುಬಾಗಿ ನಿಂತು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಮುಖಂಡರಾದ ಸದಾನಂದ ಪಾಟೀಲ್ ಮಾತನಾಡಿ, ನಮ್ಮ ಭಾಗದ ರೈತರು ತಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಸಂಘಟಿತ ಹೋರಾಟವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಿಳಿಸಿದರು.
ವಿಜಯ ಹೆಗ್ಗೊಂಡ ಅವರು, “ರೈತನೇ ಈ ದೇಶಕ್ಕೆ ಅನ್ನ ನೀಡುವವನು. ಆದ್ದರಿಂದ ನಾವೆಲ್ಲರೂ ರೈತರ ಒಗ್ಗಟ್ಟಿನೊಂದಿಗೆ ಹೋರಾಟ ಮಾಡಿ ರೈತರ ಹಿತಾಸಕ್ತಿಯನ್ನು ಕಾಪಾಡೋಣ” ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿಯಾಗಿದ್ದ ಬಿಜೆಪಿ ಮುಖಂಡ ವಿಷ್ಣು ಬಿಳಿಗಿರಿ ಮಾತನಾಡಿ, ರೈತರ ಪರವಾಗಿ ನಿರಂತರ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ರೈತರ ಸಮಸ್ಯೆಗಳಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ವೈ.ಎಸ್ ಭಜಂತ್ರಿ ಅವರು ರೈತ ಸಂಘಟನೆಯ ಮಹತ್ವವನ್ನು ವಿವರಿಸಿ, ರೈತರ ಹಕ್ಕುಗಳ ರಕ್ಷಣೆಯಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಎಲ್ಲರೂ ಇದರ ಅಂಗವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸಪ್ಪ ಹೆಗ್ಗೊಂಡ, ಸಿದ್ದಪ್ಪ ಒಡೆಯರ್, ಸಹದೇವ ಕದಂ, ವೈ.ಎಸ್. ಭಜಂತ್ರಿ, ಸಂತೋಷ್ ಕುಲಕರ್ಣಿ, ವೆಂಕಟೇಶ್ ಚೌರಿ, ಶ್ರೀಶೈಲ್ ಕರಿಕಲ್ಲ, ಉಮೇಶ್ ಸಾಯಗೊಂಡ, ಮಾಂತೇಶ ಬಸರಗಿ, ಅಶೋಕ ಹಾದಿಮನಿ, ಅಪ್ಪಶ್ರೀ ಯಾದವಾಡ ತಿಪ್ಪಣ್ಣ ಕರ್ಜಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

