13 ವರ್ಷ ಕಳೆದರೂ ಒಂದು ಹನಿ ನೀರಿಲ್ಲ! ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆ ಪೂರ್ಣ ಗೊಳಿಸಲು – ರೈತರ ಅಂತಿಮ ಎಚ್ಚರಿಕೆ.
ತೊದಲಬಾಗಿ ಜು.18

ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಕಾಮಗಾರಿ ತಕ್ಷಣ ಪೂರ್ಣ ಗೊಳಿಸಿ ಜುಲೈ 21 ರಿಂದ ಉಗ್ರ ಹೋರಾಟದ ಎಚ್ಚರಿಕೆ 2013 ರಲ್ಲಿ ಆರಂಭವಾದ ಯೋಜನೆ ಇನ್ನೂ ಅಪೂರ್ಣ ರೈತರ ಆಕ್ರೋಶ, ಅಧಿಕಾರಿಗಳಿಗೆ ಎರಡು ದಿನಗಳ ಗಡುವು ‘ನೀರು ಕೊಡಿ, ಇಲ್ಲವೇ ಹೋರಾಟ ಎದುರಿಸಿ’ – ಚಿಕ್ಕಲಕಿ ಕ್ರಾಸ್‌ನಲ್ಲಿ ಪ್ರತಿಭಟನೆಗೆ ರೈತರ ಕರೆ13 ವರ್ಷ ಕಳೆದರೂ ಒಂದು ಹನಿ ನೀರಿಲ್ಲ! ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆ ಪೂರ್ಣ ಗೊಳಿಸಲು ರೈತರ ಅಂತಿಮ ಎಚ್ಚರಿಕೆ.
ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆ ಕುರಿತು ರೈತರ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಕರ್ಜಗಿ ಮಾತನಾಡಿ, 2013ರಲ್ಲಿ ಆರಂಭಗೊಂಡ ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆ ಇಂದಿಗೂ ಪೂರ್ಣ ಗೊಳ್ಳದಿರುವುದು ಅತ್ಯಂತ ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಯಡಿ ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶ ಹೊಂದಿದ್ದರೂ, ವಿಜಯಪುರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಇಲ್ಲಿಯವರೆಗೆ ಒಂದು ಹನಿ ನೀರೂ ರೈತರ ಜಮೀನುಗಳಿಗೆ ತಲುಪಿಲ್ಲ.
ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದು ಹೇಳಿದರು.
ಇನ್ನೆರಡು ದಿನಗಳೊಳಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ, ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಯೋಜನೆಯನ್ನು ಕಾರ್ಯಾರಂಭ ಗೊಳಿಸ ಬೇಕು. ಇಲ್ಲವಾದಲ್ಲಿ 2026 ರ ಜುಲೈ 21 ರಂದು (ಮಂಗಳವಾರ) ಚಿಕ್ಕಲಕಿ ಕ್ರಾಸ್‌ನಲ್ಲಿ ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು. ಪ್ರತಿಭಟನೆಯ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸದಾನಂದ ಎಸ್. ಪಾಟೀಲ್ ಮಾತನಾಡಿ, ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆ ಅಪೂರ್ಣವಾಗಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ಯೋಜನೆ ಪೂರ್ಣ ಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ರಾಜಕೀಯ ಭೇದ ಮರೆತು ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆಯನ್ನು ತಕ್ಷಣ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.
ರೈತ ಮುಖಂಡ ಸಿದರಾಯ ಸನಸಿದ್ಧ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ತೆರಳಲಿ. ರೈತ ಈ ದೇಶದ ಬೆನ್ನೆಲುಬಾಗಿದ್ದು, ರೈತರನ್ನು ಉಳಿಸುವ ಜವಾಬ್ದಾರಿ ಸರ್ಕಾರ ಮತ್ತು ಅಧಿಕಾರಿಗಳ ಮೇಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಪ್ಪಶಿ ಸೂರ್ಯವಂಶಿ, ಮುದುಕಪ್ಪ ಸಾಯಗೊಂಡ, ಮುದುಕಪ್ಪ ಸೊನ್ನದ, ಬಸಪ್ಪ ಹೆಗ್ಗೊಡ, ಕಾಡಪ್ಪ ಜಮಖಂಡಿ, ಮಾಂತೇಶ ಬಸರಗಿ, ಗಂಗಪ್ಪ ಸೂರಗೊಂಡ, ರಾಯಪ್ಪ ಸೂರಗೊಂಡ, ಹನುಮಂತ ಸೊನ್ನದ, ಶಂಕರ ಹೊಸಮನಿ, ಬಸಪ್ಪ ಕರ್ಜಗಿ, ಶಿವಪ್ಪ ಬಿದರಿ, ಹನುಮಂತ ಕಕಮರಿ ಸೇರಿದಂತೆ ಅನೇಕ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

