ಸಾಮಾಜಿಕ ಭದ್ರತಾ ಮಾಸಾಶನ ಬಿಡುಗಡೆಗೆ – ಆಗ್ರಹಿಸಿ ಸಿ.ಎಂಗೆ ಮನವಿ.

ಮಾನ್ವಿ ಜು.21

ವಿಕಲ ಚೇತನರು, ಹಿರಿಯ ನಾಗರಿಕರು ಹಾಗೂ ವಿಧವೆಯರ ಸಾಮಾಜಿಕ ಭದ್ರತಾ ಮಾಸಾಶನವನ್ನು ತಕ್ಷಣ ಬಿಡುಗಡೆ ಗೊಳಿಸುವುದು, ವಾರ್ಷಿಕ ₹ 32,000 ಆದಾಯ ಮಿತಿಯನ್ನು ರದ್ದು ಪಡಿಸುವುದು, ಮಾಸಾಶನದ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಕಲ್ಪ ವಿಕಲ ಚೇತನರ ಒಕ್ಕೂಟ, ರಾಯಚೂರು ಜಿಲ್ಲೆ ವತಿಯಿಂದ ಸೋಮವಾರ ಮಾನ್ವಿ ತಹಸೀಲ್ದಾರ್ ಭೀಮರಾವ್ ಬಿ ರಾಮಸಮುದ್ರ ರವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ‌ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ಅವರು, ಸಾಮಾಜಿಕ ಭದ್ರತಾ ಮಾಸಾಶನವು ಸರ್ಕಾರದ ದಾನವಲ್ಲ, ಸಂವಿಧಾನ ನೀಡಿರುವ ಘನತೆಯಿಂದ ಬದುಕುವ ಹಕ್ಕಿನ ಭಾಗವಾಗಿದೆ. ವಾರ್ಷಿಕ ₹32,000 ಆದಾಯ ಮಿತಿಯಿಂದ ಸಾವಿರಾರು ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ವಿಧವೆಯರ ಮಾಸಾಶನ ಸ್ಥಗಿತ ಗೊಂಡಿದ್ದು, ಅವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಈ ಆದಾಯ ಮಿತಿ ಅವೈಜ್ಞಾನಿಕವಾಗಿದ್ದು, ಸರ್ಕಾರ ಕೂಡಲೇ ಅದನ್ನು ರದ್ದು ಪಡಿಸಬೇಕು ಅಥವಾ ಮರು ಪರಿಶೀಲನೆ ನಡೆಸಬೇಕು. ಬಾಕಿ ಉಳಿದಿರುವ ಎಲ್ಲಾ ಮಾಸಾಶನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ, ಮಾಸಾಶನದ ಮೊತ್ತವನ್ನು ಜೀವನ ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ ಮಾತನಾಡಿ, ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ವಿಧವೆಯರಿಗೆ ಸಾಮಾಜಿಕ ಭದ್ರತಾ ಯೋಜನೆಗಳು ಬದುಕಿನ ಏಕೈಕ ಆಧಾರವಾಗಿವೆ. ಯಾವುದೇ ಪೂರ್ವ ಮಾಹಿತಿ ಅಥವಾ ಸಮರ್ಪಕ ಪರಿಶೀಲನೆಯಿಲ್ಲದೆ ಮಾಸಾಶನ ಸ್ಥಗಿತ ಗೊಳಿಸುವುದು ಮಾನವೀಯತೆಗೂ ಹಾಗೂ ಸಂವಿಧಾನದ ಆಶಯಕ್ಕೂ ವಿರುದ್ಧವಾಗಿದೆ.

ಅಂಗವೈಕಲ್ಯ ಹೊಂದಿದ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ರ ಆಶಯದಂತೆ ಸರ್ಕಾರವು ಸಾಮಾಜಿಕ ಭದ್ರತೆಯನ್ನು ಖಚಿತ ಪಡಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಯಾಗದಂತೆ ಶಾಶ್ವತ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಮನವಿಯಲ್ಲಿ ಸ್ಥಗಿತ ಗೊಂಡಿರುವ ಎಲ್ಲಾ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡುವುದು, ವಾರ್ಷಿಕ ₹ 32,000 ಆದಾಯ ಮಿತಿಯನ್ನು ರದ್ದು ಪಡಿಸುವುದು ಅಥವಾ ಪರಿಷ್ಕರಿಸುವುದು, ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವುದು, ಮಾಸಾಶನದ ಮೊತ್ತವನ್ನು ಹೆಚ್ಚಿಸುವುದು ಹಾಗೂ ಯಾವುದೇ ಅರ್ಹ ಫಲಾನುಭವಿಯ ಮಾಸಾಶನವನ್ನು ಪೂರ್ವ ಮಾಹಿತಿ ಇಲ್ಲದೆ ಸ್ಥಗಿತ ಗೊಳಿಸದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸಾವಿತ್ರಮ್ಮ, ಮೌನೇಶ್, ಅನಿಲ್ ಕುಮಾರ್, ಬಿ.ಸುರೇಶ್, ಮಹಾದೇವಪ್ಪ ಹೂಗಾರ, ಮಂಜುನಾಥ, ಚಂದ್ರಶೇಖರ, ಅಯೂಬ್, ಬಸವರಾಜ್ ಆರೋಲಿ, ಚನ್ನಪ್ಪ ಸೇರಿದಂತೆ ಇನ್ನಿತರರು ಇದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button