21 ನೇ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ – ಸರ್ವಾಧ್ಯಕ್ಷ ಹ.ಮ ಪೂಜಾರ.
ಆಲಮೇಲ ಜು.21

ಬನ್ನಿ ನಮ್ಮ ಮಕ್ಕಳಿಗೆ ಜೀವಿಸಿ ಎಂಬ ಶಿಕ್ಷಣ ತಜ್ಞ ಪ್ರೊಬೆಲರ ಮಾತಿನಂತೆ ತಮ್ಮ ಇಡೀ ಜೀವನವನ್ನು ಮಕ್ಕಳ ಸೇವೆಗಾಗಿ ಮುಡುಪಾಗಿಟ್ಟ ಸಿಂದಗಿಯ ಚಾಚಾ ನೆಹರು ಎಂದೇ ಖ್ಯಾತರಾದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಗುರುಗಳು ವೃತ್ತಿಯಿಂದ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಆದರ್ಶ ಶಿಕ್ಷಕರಾಗಿ ಪ್ರವೃತ್ತಿಯಿಂದ ಮಕ್ಕಳ ಸಾಹಿತಿಗಳಾಗಿ ಅನುಕರಣೀಯ, ಆದರ್ಶ ಮತ್ತು ಮೌಲ್ಯಯುತ ಬದುಕನ್ನು ಬದುಕಿದವರು. ‘ಮಕ್ಕಳ ಸಾಹಿತಿಗಳ ತೊಟ್ಟಿಲು’ ಎಂದು ಕರೆಸಿ ಕೊಳ್ಳುವ ವಿಜಯಪುರ ಜಿಲ್ಲೆಯ ಮಕ್ಕಳ ಸಾಹಿತಿಗಳಲ್ಲಿ ಎದ್ದು ಕಾಣುವಂತ ಆಕರ್ಷಕ ವ್ಯಕ್ತಿತ್ವ ಹ. ಮ. ಪೂಜಾರ ಗುರುಗಳದು.
ಇದೇ ಜುಲೈ 21 ಮತ್ತು 22 ರಂದು ಸಿಂದಗಿಯ ಎಚ್.ಜಿ ಕಾಲೇಜಿನ ಆವರಣದಲ್ಲಿ ಜರುಗಲಿರುವ 21 ನೇ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಸ್ಥಾನ ಲಭಿಸಿದ್ದು ಜಿಲ್ಲೆಯ ಸಾಹಿತ್ಯ ಬಳಗದಲ್ಲಿ ಹರ್ಷವನ್ನುಂಟು ಮಾಡಿದೆ.
ಇದೇ ವರ್ಷವೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರಿಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಬಯಸದೇ ಬಂದ ಭಾಗ್ಯ ಹಾಗೂ ಅವರ ಮಕ್ಕಳ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.
ಅತ್ಯಂತ ಸೂಕ್ತ ಅರ್ಹ ಸಮರ್ಥ ವ್ಯಕ್ತಿಗಳನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಅವರ ಶಿಷ್ಯ ಬಳಗ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅಭಿನಂದನಾರ್ಹರಾಗಿದ್ದಾರೆ. ತನ್ನಿಮಿತ್ಯ ಹ.ಮ. ಪೂಜಾರ ಗುರುಗಳನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ.
ಹ.ಮ ಪೂಜಾರ ಗುರುಗಳ ಪೂರ್ಣ ಹೆಸರು ಹಣಮಂತರಾಯ ಮನ್ನಪ್ಪ ಪೂಜಾರ. ಅವರು 3 ನೇ. ಮಾರ್ಚ್ 1943 ರಲ್ಲಿ ಸಿಂದಗಿಯ ಮನ್ನಪ್ಪ ಮತ್ತು ಗುರುಬಾಯಿ ಅವರ ಪುಣ್ಯ ಉದರದಲ್ಲಿ ಬೊಮ್ಮನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಮನ್ನಪ್ಪ ಮಾಸ್ತರ ಅವರು ಆಲಮೇಲದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಾಗಿದ್ದರಿಂದ ಹ.ಮ ಪೂಜಾರ ಗುರುಗಳ ಪ್ರಾಥಮಿಕ ಶಿಕ್ಷಣ ಆಲಮೇಲದಲ್ಲಿಯೇ ಆಯಿತು.
ಪ್ರೌಢ ಶಾಲೆಯನ್ನು ಸಿಂದಗಿ ಎಚ್.ಜಿ ಪ್ರೌಢ ಶಾಲೆಯಲ್ಲಿ ಕಲಿತು ನಂತರ ಬಿ.ಎ. ಬಿ.ಎಡ್ ಪದವಿ ಮುಗಿಸಿ, 1961 ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. 1993 ರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ನಂತರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ತಮ್ಮ ಅಮೂಲ್ಯ ಸೇವೆಯನ್ನು ಗೈದಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಿದ ಹ.ಮ. ಪೂಜಾರ ಗುರುಗಳು ಶಿಕ್ಷಕ ವೃತ್ತಿ ನಿರತ ನಮ್ಮೆಲ್ಲರಿಗೆ ಆದರ್ಶ ಪ್ರಾಯರಾಗಿದ್ದಾರೆ.
ಶಿಕ್ಷಕರಿಗೆ ಕಲಿಸುವ ವಿಷಯದಲ್ಲಿ ಪ್ರಭುತ್ವ, ವೃತ್ತಿಯ ಬಗ್ಗೆ ಬದ್ಧತೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಅಗತ್ಯ ಎನ್ನುವ ಹ.ಮ. ಪೂಜಾರ ಗುರುಗಳು ಈ ಮೂರು ಗುಣಗಳನ್ನು ಹೊಂದಿ ತಮ್ಮ ವೃತ್ತಿ ಜೀವನದ ಉದ್ದಕ್ಕೂ ಅನುಸರಿಸಿಕೊಂಡು ಬದುಕಿದವರು. ” ಮಕ್ಕಳೇ ದೇವರು, ಶಾಲೆಯೇ ದೇವಾಲಯ, ಶಿಕ್ಷಕರೇ ಪೂಜಾರಿ” ಗಳೆಂಬ ಬಂಥ ನಾಳ ಶಿವಯೋಗಿಗಳ ವಾಣಿಯನ್ನು ಅಕ್ಷರಶಃ ಅರಿತು ಮಕ್ಕಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ.
ತಮ್ಮ ಬೋಧನೆಯಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಂಡು ಸೃಜನಾತ್ಮಕವಾಗಿ ಸಮರ್ಥ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ವೃತ್ತಿ ಜೀವನದ ಉದ್ದಕ್ಕೂ ನಿರಂತರ ವ್ಯಾಪಕ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕಾ ದೋಷಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಿದ್ದಾರೆ.
ಅವರು ಮುಖ್ಯ ಅಧ್ಯಾಪಕರಾಗಿದ್ದಾಗ ಪಾಠೋಪಕರಣಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧನೆ ಮಾಡುವಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ .ಪ್ರತಿ ತಿಂಗಳ ಕೊನೆಯ ದಿನ ಶಿಕ್ಷಕರಿಂದ ಮಾದರಿ ಪಾಠ ಕೊಡಿಸಿ ಬೋಧನೆಯನ್ನು ಪುನಶ್ಚೇತನ ಗೊಳಿಸಿದ್ದಾರೆ.
ತಮ್ಮ ವೃತ್ತಿ ಜೀವನ ಉದ್ದಕ್ಕೂ ನಿರಂತರವಾಗಿ ಮಕ್ಕಳ ಪ್ರತಿಭಾ ಪ್ರದರ್ಶನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿನ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಓದಿ ಕಲಿ, ಹಾಡಿನಲಿ ಎಂಬ ಕಾರ್ಯಕ್ರಮದ ಮೂಲಕ ಕೃತಿಯ ಲೇಖಕರೊಂದಿಗೆ ಮುಕ್ತ ಸಂವಾದಕ್ಕೆ ಅವಕಾಶ ನೀಡಿ.
ಮಕ್ಕಳಲ್ಲಿ ಸಂವಹನ ಕೌಶಲ್ಯ ವೇದಿಕೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿದ್ದಾರೆ. ಪಠ್ಯೇತರ ಚಟುವಟಿಕೆಗಳ ಮೂಲಕ ಚಟುವಟಿಕೆಗಳ ಮೂಲಕ ಮಕ್ಕಳ ಸಮಗ್ರ ವ್ಯಕ್ತಿತ್ವವನ್ನು ವಿಕಾಸ ಗೊಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸಲು “ಪುಸ್ತಕ ಸಂಸ್ಕೃತಿ” ಎಂಬ ವಿನೂತನ ಕಾರ್ಯಕ್ರಮದ ಮೂಲಕ 2015 ರಿಂದ ಪ್ರತಿ ವರ್ಷ “ಹವ್ಯಾಸಿ ಓದುಗ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ.
ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸುವುದ ಅಗತ್ಯವೆಂದು ಭಾವಿಸಿದ ಹ.ಮ. ಪೂಜಾರ ಗುರುಗಳು ಸೇವಾ ನಿರತ ಶಿಕ್ಷಕರಿಗಾಗಿ ಮತ್ತು ಭಾವಿ ಶಿಕ್ಷಕರಾಗಲಿರುವ ಬಿ.ಎಡ್. ಪ್ರಶಿಕ್ಷಣಾರ್ಥಿಗಳಿಗೆ ಶೈಕ್ಷಣಿಕ ಉಪನ್ಯಾಸ ಮಾಲೆ ಮತ್ತು ಶೈಕ್ಷಣಿಕ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ 1976 ರಲ್ಲಿ ಮಕ್ಕಳ ಬಳಗವನ್ನು ಹುಟ್ಟುಹಾಕಿದ ಹ.ಮ. ಪೂಜಾರ ಗುರುಗಳು ವೈವಿಧ್ಯಮಯ ಕಾರ್ಯಕ್ರಮಗಳಾದ ಮನೆಯಂಗಳದಲ್ಲಿ ಚಿಲಿಪಿಲಿ, ಶಾಲಾವರಣದಲ್ಲಿ ಮಕ್ಕಳ ಕಲರವ, ಚಿಣ್ಣರ ನುಡಿಸಿರಿ, ಮಕ್ಕಳ ಹಬ್ಬ, ಮಕ್ಕಳ ಮೇಳ, ವಿಜ್ಞಾನ ಮೇಳ, ಮಕ್ಕಳ ಸಮ್ಮೇಳನ, ಬಿಡುವಿನ ಮನೆ, ವ್ಯಕ್ತಿತ್ವ ವಿಕಸನ ಶಿಬಿರ ಮುಂತಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸಿದ್ದಾರೆ.
ಮಕ್ಕಳಿಂದ, ಮಕ್ಕಳ, ಮಕ್ಕಳಿಗೋಸ್ಕರ ಹಮ್ಮಿಕೊಂಡ ಅವರ ಎಲ್ಲ ಕಾರ್ಯಕ್ರಮಗಳ ಕೇಂದ್ರಬಿಂದು ಮಕ್ಕಳೇ ಎಂಬುದು ವಿಶೇಷ. ತನ್ಮೂಲಕ ಪೂಜಾರ ಗುರುಗಳು ಮಕ್ಕಳ ಭಾಗವಹಿಸುವ ಮತ್ತು ಅಭಿವ್ಯಕ್ತಿ ಪಡಿಸುವ ಹಕ್ಕಿನ ಅವಕಾಶವನ್ನು ಮಕ್ಕಳಿಗೆ ಒದಗಿಸುವುದರ ಮೂಲಕ ಮಕ್ಕಳ ಹಕ್ಕುಗಳ ಜಾಗೃತಿಯನ್ನು ಪ್ರಾಯೋಗಿಕವಾಗಿ ಮಾಡಿದ್ದಾರೆ.
ವೃತ್ತಿಯಿಂದ ಆದರ್ಶ ಶಿಕ್ಷಕರಾದ ಹಮ ಪೂಜಾರ ಗುರುಗಳು ಪ್ರವೃತ್ತಿಯಿಂದ ಖ್ಯಾತ ಮಕ್ಕಳ ಸಾಹಿತಿಗಳಾಗಿದ್ದಾರೆ. ವಿದ್ಯಾಚೇತನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವದಕ್ಕಾಗಿ ಅನೇಕ ಮೌಲಿಕ ಕೃತಿಗಳನ್ನು ಸ್ವತಃ ಬರೆದು ಪ್ರಕಟಿಸಿದ್ದಾರೆ. ಅವರು ಬರೆದ ಪ್ರಮುಖ ಕೃತಿಗಳೆಂದರೆ ನೀತಿಯ ಬದುಕು, ಪರೋಪಕಾರ, ತುಂಟ ಮಂಗ, ಮಕ್ಕಳ ಧಾಮ, ಯಾರು ಜಾಣರು?, ಚತುರ ಚಿಣ್ಣರು, ಮುಂತಾದವು ಅವರ ಪ್ರಮುಖ ಕಥಾ ಸಂಕಲನಗಳಾದರೆ, ಪರಿಸರ, ಗುಬ್ಬಚ್ಚಿ, ಮಕ್ಕಳ ಕವನ ಸಂಕಲನಗಳಾಗಿವೆ.
ನಮಸ್ಕಾರ ಪುನಃ ಬನ್ನಿ ಮತ್ತು ಕೆಮ್ಮಿನ ಔಷಧಿ ಉಚಿತ ಇವು ಅವರ ನಗೆ ಹನಿಗಳ ಸಂಕಲನಗಳಾಗಿವೆ . ಕಾಯಕಯೋಗಿ ಶ್ರೀ ಚನ್ನವೀರ ಸ್ವಾಮೀಜಿ ಗೋಲಗೇರಿಯ ಗೋಲ್ಲಾಳೇಶ್ವರ ಅವರು ರಚಿಸಿದ ಜೀವನ ಚರಿತ್ರೆಗಳಾಗಿವೆ . ಚಿಣ್ಣರ ಚೇತನ, ಅಜ್ಜನ ಮನೆಯ ಅಂಗಳದಲ್ಲಿ ಅವರ ಮಕ್ಕಳ ಕಾದಂಬರಿಗಳಾಗಿವೆ . ರಸ ಕಿರಣ,ವಿಜಯವಾಣಿ, ಚಿಣ್ಣ ರ ಚೇತನ, ಪಂಚಾಕ್ಷರಿ ಪ್ರಭೆ, ಪುಟ್ಟ ಕಾಣಿಕೆ,ಸುವರ್ಣ ಸಂಭ್ರಮ, ಮಕ್ಕಳ ಸಾಹಿತ್ಯ ಚಿಂತನ ಇವು ಪೂಜಾರ ಗುರುಗಳ ಸಂಪಾದಿತ ಕೃತಿಗಳಾಗಿವೆ.
ಹೀಗೆ ಹ.ಮ. ಪೂಜಾರಗುರುಗಳು ಮಕ್ಕಳಿಗಾಗಿ ಕಥೆ, ಕವನ, ಕಾದಂಬರಿ,ಹಾಸ್ಯ, ಜೀವನ ಚರಿತ್ರೆ, ಸಂಪಾದನೆಗಳಲ್ಲಿ ಮಕ್ಕಳ ಸಾಹಿತ್ಯದ ಕೃಷಿಗೈದು ಮಕ್ಕಳ ಸಾಹಿತ್ಯ ಪ್ರೌಢ ಸಾಹಿತ್ಯದಂತೆ ಸಮೃದ್ಧ ಮತ್ತು ವೈವಿಧ್ಯತೆಯನ್ನು ಹೊಂದಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಶ್ರೀಯುತರ ಅನೇಕ ಕವನಗಳು ಮತ್ತು ಮಕ್ಕಳ ಕಥೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಕನ್ನಡ ಪಠ್ಯಪುಸ್ತಕದಲ್ಲಿ ಪಠ್ಯವಾಗಿ ಪ್ರಕಟ ಗೊಂಡಿರುವುದು ಹ. ಮ.ಪೂಜಾರ ಅವರ ಗುಣಾತ್ಮಕ ಮಕ್ಕಳ ಸಾಹಿತ್ಯಕ್ಕೆ ಸಾಕ್ಷಿಯಾಗಿದೆ. ಹ. ಮ. ಪೂಜಾರ ಗುರುಗಳ ಅನುಭವ ಮತ್ತು ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರನ್ನು ಸಾಕ್ಷರತಾ ಪಠ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ಆರನೇ ತರಗತಿಯ ದ್ವಿತೀಯ ಭಾಷಾ ಕನ್ನಡ ಪಠ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಸಿಂದಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗೌರವ ವನ್ಯಜೀವಿ ಪರಿಪಾಲಕರಾಗಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ, ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮೂರು ಮಕ್ಕಳ ಧಾಮದ ಮಹಾ ಪೋಷಕರಾಗಿ ಮಕ್ಕಳ ಸೇವೆಗೈ ಯುತ್ತಿದ್ದಾರೆ.
ಹ.ಮ ಪೂಜಾರ ಗುರುಗಳು ಪ್ರಶಸ್ತಿ ಪುರಸ್ಕಾರಗಳಿಗಾಗಿ ಎಂದು ಕೆಲಸ ಮಾಡಿದವರಲ್ಲ. ಮಕ್ಕಳ ಸಾಹಿತ್ಯ ಸೇವೆ ಅವರ ಒಂದು ಸಹಜ ಹವ್ಯಾಸವಾಗಿದೆ.
ಅವರ ಅನುಪಮ ಮಕ್ಕಳ ಸಾಹಿತ್ಯ ಸೇವೆಯಿಂದಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿ ಕೊಂಡು ಬಂದಿವೆ. ಕರ್ನಾಟಕ ಸರ್ಕಾರವು 1998 ರಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಭಾರತ ಸರ್ಕಾರವು 2000 ರಲ್ಲಿ ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಕರ್ನಾಟಕ ಸರಕಾರವು 2014 ರಲ್ಲಿ ಹಿರಿಯ ನಾಗರಿಕ ಪ್ರಶಸ್ತಿ ಮತ್ತು ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿವೆ.
ಇದೇ ವರ್ಷ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು,ಸದ್ಯಕ್ಕೆ 21 ನೇ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಅವರ ಆದರ್ಶ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಯಾಗಿದೆ. ಹ.ಮ ಪೂಜಾರ ಗುರುಗಳಿಗೆ ಸದ್ಯಕ್ಕೆ 85 ವರ್ಷಗಳಾಗಿವೆ.
ಆದರೂ ಸಹ ಯಾವುದೇ ಮಕ್ಕಳ ಸಭೆ ಸಮಾರಂಭಗಳಿದ್ದರೆ ಅವರು ಯುವಕರಂತೆ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸುತ್ತಾರೆ. ಅವರ ದೇಹಕ್ಕೆ ವಯಸ್ಸಾಗಿದೆಯೇ ವಿನಃ ಅವರ ಮನಸ್ಸು ಉತ್ಸಾಹದ ಚಿಲುಮೆಯಾಗಿದೆ.
ಇಂದಿನ ಶಿಕ್ಷಕರು ಹ.ಮ ಪೂಜಾರ ಗುರುಗಳಂತೆ ಸರಳತೆಯನ್ನು ಮೈಗೂಡಿಸಿ ಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಕ ವೃತ್ತಿಯನ್ನು ಪ್ರೀತಿಯಿಂದ ಸಾರ್ಥಕ ಮಾಡಿಕೊಳ್ಳ ಬೇಕೆಂಬುದೇ ಅವರ ಜೀವನ ಸಂದೇಶವಾಗಿದೆ.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಿಂದಗಿ ಎಚ್.ಜಿ ಕಾಲೇಜಿನ ಆವರಣದಲ್ಲಿ ಜರುಗಲಿರುವ 21 ನೇ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದು ಅಖಂಡ ಬಿಜಾಪುರ ಜಿಲ್ಲೆಗೆ ಆನಂದವಾಗಿದೆ.
ಹ.ಮ ಪೂಜಾರ ಗುರುಗಳಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಅವರ ಮಕ್ಕಳ ಸಾಹಿತ್ಯ ಸೇವೆ ನಿರಂತರವಾಗಿ ಸಾಗಿ ಶತಾಯುಷ್ಯ ಪೂರೈಸಲಿ ಎಂದು ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಬಳಗವು ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ. ಎ.ಆರ್. ಹೆಗ್ಗನದೊಡ್ಡಿ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

