ಜಿಲ್ಲಾ ಸಭಾಂಗಣದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ – ಅವರು ಮನವಿಗಳ ಸ್ವೀಕರಿಸಿದರು.

ಗದಗ ಆ.02

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ, ನಾಗಲಕ್ಷ್ಮಿ ಚೌಧರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಆಲಿಕೆ ಹಾಗೂ ಜನ ಸಂಪರ್ಕ ಸಭೆಯಲ್ಲಿ ದಲಿತ ಶೋಷಿತ ಹಾಗೂ ಶ್ರಮಿಕ ಮಹಿಳೆಯರ ದೂರುಗಳ ಸುರಿಮಳೆಯೇ ಹರಿದು ಬಂದಿದೆ. ಸಭೆಗೆ ಆಗಮಿಸಿದ್ದ ನೂರಾರು ಶ್ರಮಿಕ ಮಹಿಳೆಯರು ಆಯೋಗದ ಅಧ್ಯಕ್ಷರಿಗೆ ನೇರವಾಗಿ ಮನವಿ ಪತ್ರಗಳನ್ನು ಸಲ್ಲಿಸಿ ತಮ್ಮ ಮೇಲಾಗುತ್ತಿರುವ ಶೋಷಣೆ ಹಾಗೂ ಅನ್ಯಾಯವನ್ನು ತೋಡಿ ಕೊಂಡರು.

ಮುಖ್ಯವಾಗಿ, ಡಾ, ಬಿ.ಆರ್ ಅಂಬೇಡ್ಕರ್ ಮಹಿಳಾ ಹಮಾಲರ ಸಂಘ ಹಾಗೂ ಕಿಸಾನ್ ಜಾಗೃತಿ ಸಂಘದ ಜಂಟಿ ನೇತೃತ್ವದಲ್ಲಿ ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆಯ (APMC) ಮಹಿಳಾ ಕಾರ್ಮಿಕರು ಗಂಭೀರ ಲಿಖಿತ ದೂರು ಸಲ್ಲಿಸಿದರು.

ದಲಿತ ಹಾಗೂ ಮಾದಿಗ ಸಮುದಾಯಕ್ಕೆ ಸೇರಿದ ಈ ಮಹಿಳಾ ಹಮಾಲರನ್ನು ಕೇವಲ ರಾಶಿ ದಬ್ಬುವ ಧಾನ್ಯದ ಕೆಲಸಕ್ಕಷ್ಟೇ ಅಲ್ಲದೆ, APMC ವ್ಯಾಪಾರಸ್ಥರ ಹಾಗೂ ದಲಾಲಿಗಳ ಮನೆಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯ ವರೆಗೆ ಬಲವಂತವಾಗಿ ಅಮಾನವೀಯವಾಗಿ ಕೆಲಸ ಮಾಡಿಸಿ ಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಯಿತು.

ದಿನಕ್ಕೆ 15 ರಿಂದ 19 ಗಂಟೆಗಳ ಕಾಲ ಸುದೀರ್ಘ ದೈಹಿಕ ಶ್ರಮ ವಹಿಸಿದರೂ, ವ್ಯಾಪಾರಸ್ಥರ ಮನೆ ಕೆಲಸಕ್ಕೆ ನಿರಾಕರಿಸಿದರೆ ಅಂಗಡಿಯಲ್ಲಿ ಹಮಾಲಿ ಕೆಲಸ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಮುಂಡರಗಿ ನಗರದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳ ಮಾಜಿ ದೇವದಾಸಿಯರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಸಲ್ಲಿಸಲಾದ ಮನವಿಯಲ್ಲಿ, ಮಾಜಿ ದೇವದಾಸಿಯರಿಗೆ ಜಮೀನು ಮತ್ತು ವಸತಿ ಕಲ್ಪಿಸಿಲ್ಲ. ಸುಮಾರು 70 ರಿಂದ 80 ಜನರ ಕುಟುಂಬಗಳು ಬೀದಿಯಲ್ಲಿ ವಾಸಿಸುವ ಶೋಚನೀಯ ಸ್ಥಿತಿ ತಲುಪಿವೆ. ಅವರಿಗೆ ತಕ್ಷಣವೇ ಸರ್ಕಾರಿ ಸೌಲಭ್ಯ, ಉದ್ಯೋಗ ಮತ್ತು ಪುನರ್ವಸತಿ ಕಲ್ಪಿಸಬೇಕು’ ಎಂದು ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಕಾರ್ಯದರ್ಶಿ ಮರಿಯಮ್ಮ ಅಳವಂಡಿ ಒತ್ತಾಯಿಸಿದರು.

“ಶ್ರಮಿಕ ಮಹಿಳೆಯರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ವರ್ತಕರ ಹಾಗೂ ದಲಾಲಿಗಳ ಧೋರಣೆ ಅತ್ಯಂತ ಖಂಡನೀಯ. ಕಾನೂನು ಬಾಹಿರವಾಗಿ ಬಲವಂತದ ದುಡಿಮೆ ಮಾಡಿಸಿಕೊಳ್ಳುವವರ ವಿರುದ್ಧ ಜಿಲ್ಲಾಡಳಿತ ತಕ್ಷಣವೇ ಜಂಟಿ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವರ್ತಕರನ್ನು ಬೆಂಗಳೂರಿನ ಮಹಿಳಾ ಆಯೋಗದ ಕಚೇರಿಗೆ ಸಮ್ಮನ್ ಮಾಡಿ ವಿಚಾರಣೆ ನಡೆಸಲಾಗುವುದು.

ಬಾಕ್ಸ್ ನ್ಯೂಸ್:-

ಡಾ, ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಸಭೆಯಲ್ಲಿ ಸ್ವೀಕೃತವಾದ ಎಲ್ಲಾ ಮನವಿಗಳನ್ನು ಗಂಭೀರವಾಗಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರು, ಶೋಷಿತ ಮಹಿಳೆಯರಿಗೆ ತಕ್ಷಣ ನ್ಯಾಯ ಒದಗಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಶೋಷಿತರ ಹಾಗೂ ಕಾರ್ಮಿಕ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆದರೆ ಆಯೋಗ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಿದೆ. ಮುಂಡರಗಿಯ ಶ್ರಮಿಕ ಮಹಿಳೆಯರಿಗೆ ನ್ಯಾಯ ಸಿಗುತ್ತದೆಯೇ ಅಥವಾ ಆಡಳಿತದ ನಿರ್ಲಕ್ಷ್ಯ ಮುಂದುವರಿಯುತ್ತದೆಯೇ ಎಂಬುವದನ್ನು ಕಾಯ್ದು ನೋಡ ಬೇಕಿದೆ.

ವರದಿ:ಅಂದಪ್ಪ.ಮಾದರ.ಗದಗ ಜಿಲ್ಲಾ ವರದಿಗಾರರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button