“59 ತಿಂಗಳು ಅಭಿವೃದ್ಧಿ ಮತ್ತು ಜನಸೇವೆ, ಒಂದು ತಿಂಗಳು ಮಾತ್ರ ರಾಜಕೀಯ” – ಜನಪರ ಆಡಳಿತಕ್ಕೆ ಶಾಸಕನ ಭರವಸೆ.
ಆಲಮೇಲ ಆ.31


ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಸಬಲೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಇದೀಗ ಶಾಶ್ವತ ಪರಿಹಾರ ದೊರೆತಂತಾಗಿದೆ.
2025–26ನೇ ಸಾಲಿನ ರಾಜ್ಯ ಹೆದ್ದಾರಿ ಸೇತುವೆ ಸುಧಾರಣೆ ಯೋಜನೆಯಡಿ ಔರಾದ್–ಸದಾಶಿವಗಡ ರಾಜ್ಯ ಹೆದ್ದಾರಿ 34ರ ಕಿ.ಮೀ. 232.54ರಿಂದ 233.00ರವರೆಗೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಸಬಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಸೇತುವೆಯ ಮೇಲ್ಮೈ ರಸ್ತೆ, ಕೂಡು ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು 3 ಕೋಟಿ 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿದೆ.
ಈ ಮಹತ್ವದ ಕಾಮಗಾರಿಯ ಉದ್ಘಾಟನೆಯನ್ನು ಸಿಂದಗಿ ಮತಕ್ಷೇತ್ರದ ಜನಪ್ರಿಯ ಶಾಸಕ ಸನ್ಮಾನ್ಯ ಶ್ರೀ ಅಶೋಕ್ ಎಂ. ಮನಗೂಳಿ ಅವರು ನೆರವೇರಿಸಿದರು.
ಪ್ರವಾಹದ ವೇಳೆ ಜನರ ಸಮಸ್ಯೆ ಕಂಡು ಕಾಮಗಾರಿಗೆ ಸಂಕಲ್ಪ:-
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಎಂ. ಮನಗೂಳಿ ಅವರು, ಈ ಸೇತುವೆಯ ಕಾಮಗಾರಿ ಕೇವಲ ಒಂದು ಅಭಿವೃದ್ಧಿ ಕಾಮಗಾರಿಯಲ್ಲ. ಇದರ ಹಿಂದೆ ಜನರ ಸಮಸ್ಯೆಯನ್ನು ಅರಿತು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದ ಹಿನ್ನೆಲೆ ಇದೆ ಎಂದು ಹೇಳಿದರು.
“ಕಳೆದ ವರ್ಷ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ನಾನು ದೇವಣಗಾಂವ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಬಂದಿದ್ದೆ. ಆಗ ಸ್ಥಳೀಯ ಜನರು ಭೀಮಾ ನದಿ ಸೇತುವೆಯ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದರು. ಸೇತುವೆಯ ಸ್ಥಿತಿ ಹಾಗೂ ಮಳೆಗಾಲದಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳನ್ನು ಸ್ವತಃ ಗಮನಿಸಿದೆ. ಆಗಲೇ ಈ ಸೇತುವೆಯ ಅಭಿವೃದ್ಧಿ ಮಾಡಿಸಬೇಕು ಎಂಬ ಸಂಕಲ್ಪ ಮಾಡಿದ್ದೆ” ಎಂದು ಶಾಸಕರು ಹೇಳಿದರು.
ಜನರ ಸಮಸ್ಯೆಯನ್ನು ಗಮನಿಸಿದ ಬಳಿಕ ಈ ವಿಷಯವನ್ನು ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತರಲಾಯಿತು. ಜೊತೆಗೆ ಸಚಿವರಾದ ಶ್ರೀ ಎಂ.ಬಿ. ಪಾಟೀಲ ಅವರ ಗಮನಕ್ಕೂ ಸಮಸ್ಯೆಯನ್ನು ತಿಳಿಸಲಾಯಿತು.
“ನಾನು ಪಿಡಬ್ಲ್ಯೂಡಿ ಸಚಿವರಾದ ಸತೀಶ್ ಜಾರಕಿಹೊಳಿ ಸಾಹೇಬರ ಬಳಿ ಈ ಸೇತುವೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಅವರು ‘ಈ ಕಾಮಗಾರಿಯನ್ನು ಮಾಡಿಸಿ ಕೊಡುತ್ತೇನೆ, ಸ್ವಲ್ಪ ಸಮಯ ಬೇಕು’ ಎಂದು ಭರವಸೆ ನೀಡಿದ್ದರು. ಅವರು ನೀಡಿದ ಮಾತಿನಂತೆ ಇದೀಗ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಂಡು ಅಭಿವೃದ್ಧಿ ಕಾರ್ಯವನ್ನು ಮಾಡಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ಸತೀಶ್ ಜಾರಕಿಹೊಳಿ ಸಾಹೇಬರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಅಶೋಕ್ ಎಂ. ಮನಗೂಳಿ ಹೇಳಿದರು.
ಜನರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ:-

ಸೇತುವೆಯ ಸಬಲೀಕರಣ, ಮೇಲ್ಮೈ ರಸ್ತೆ, ಕೂಡು ರಸ್ತೆ ಹಾಗೂ ತಡೆ ಗೋಡೆ ನಿರ್ಮಾಣದಿಂದ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಭೀಮಾ ನದಿ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸೇತುವೆಯ ಬಲ ವರ್ಧನೆಯು ಮಹತ್ವದ ಪಾತ್ರ ವಹಿಸಲಿದೆ.
ಈ ಕಾಮಗಾರಿಗೆ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ದೊರೆತಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದು ದೇವಣಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ತಂದೆಯವರ ಅಭಿವೃದ್ಧಿಯ ಹೆಜ್ಜೆಯಲ್ಲಿ ನನ್ನ ಹೆಜ್ಜೆ:-
ತಮ್ಮ ತಂದೆ ಹಾಗೂ ಮಾಜಿ ಸಚಿವರಾದ ಎಂ.ಸಿ. ಮನಗೂಳಿ ಅವರ ಜನಪರ ಕಾರ್ಯಗಳನ್ನು ಸ್ಮರಿಸಿದ ಶಾಸಕ ಅಶೋಕ್ ಎಂ. ಮನಗೂಳಿ ಅವರು, ತಂದೆಯವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗದಲ್ಲೇ ತಾವು ಸಾಗುತ್ತಿರುವುದಾಗಿ ಹೇಳಿದರು.
“ನನ್ನ ತಂದೆಯವರಾದ ಎಂ.ಸಿ. ಮನಗೂಳಿ ಅವರು ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಕಾರ್ಯಗಳು ಬಹಳಷ್ಟಿವೆ. ಅವರ ಮಗನಾಗಿ, ಅವರು ಹಾಕಿದ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತೇನೆ. ಅವರ ವಂಶದ ಕುಡಿಯಾಗಿ ಅವರು ಆರಂಭಿಸಿದ ಜನಪರ ಹಾಗೂ ಅಭಿವೃದ್ಧಿಪರ ಕಾರ್ಯಗಳಲ್ಲಿ ಭಾಗಿಯಾಗಿ, ಅವುಗಳನ್ನು ಮುಂದುವರಿಸುವುದು ನನ್ನ ಕರ್ತವ್ಯ” ಎಂದು ಹೇಳಿದರು.
ನಮ್ಮ ಭಾಗಕ್ಕೆ ನೀರು ಬರಬೇಕು, ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ದೊರೆಯಬೇಕು ಎಂಬುದು ತಮ್ಮ ಪ್ರಮುಖ ಆಶಯವಾಗಿದೆ. ಈ ಭಾಗದ ನೀರಿನ ಅಭಿವೃದ್ಧಿಯಲ್ಲಿ ತಮ್ಮ ತಂದೆ ಎಂ.ಸಿ. ಮನಗೂಳಿ ಅವರ ಪಾತ್ರವೂ ಮಹತ್ವದ್ದಾಗಿದೆ. ಅವರು ಕಂಡ ಕನಸುಗಳನ್ನು ನನಸಾಗಿಸಲು ನಿರಂತರ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
59 ತಿಂಗಳು ಅಭಿವೃದ್ಧಿಗೆ, ಒಂದು ತಿಂಗಳು ರಾಜಕೀಯಕ್ಕೆ:-
ತಮ್ಮ ಕಾರ್ಯ ವೈಖರಿಯ ಕುರಿತು ಸ್ಪಷ್ಟವಾಗಿ ಮಾತನಾಡಿದ ಶಾಸಕ ಅಶೋಕ್ ಎಂ. ಮನಗೂಳಿ ಅವರು, “ನಾವು ಮಾಡುವ ಕೆಲಸ 59 ತಿಂಗಳು ಅಭಿವೃದ್ಧಿಗಾಗಿ ಮತ್ತು ಜನರ ಸೇವೆಗಾಗಿ, ಒಂದು ತಿಂಗಳು ಮಾತ್ರ ರಾಜಕೀಯಕ್ಕಾಗಿ. ಜನರು ನಮ್ಮನ್ನು ಆಯ್ಕೆ ಮಾಡಿರುವುದು ಅಭಿವೃದ್ಧಿ ಮಾಡಲು. ಆದ್ದರಿಂದ ಅಧಿಕಾರದ ಬಹುಪಾಲು ಅವಧಿಯನ್ನು ಜನರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಬೇಕು ಎಂಬುದು ನನ್ನ ನಿಲುವು” ಎಂದು ಹೇಳಿದರು.
ಸಿಂದಗಿ ಮತಕ್ಷೇತ್ರ ಹಾಗೂ ಆಲಮೇಲ ಬ್ಲಾಕ್ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಅವುಗಳನ್ನು ಕೂಡ ಹಂತ ಹಂತವಾಗಿ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.
ದೇವಣಗಾಂವ ಆಲಮೇಲ ರಸ್ತೆ ಅಭಿವೃದ್ಧಿಗೆ ಶೀಘ್ರ ಕ್ರಮ:-
ದೇವಣಗಾಂವ ಗ್ರಾಮದ ಜನರ ಮತ್ತೊಂದು ಪ್ರಮುಖ ಬೇಡಿಕೆಯಾಗಿರುವ ದೇವಣಗಾಂವದಿಂದ ಆಲಮೇಲವರೆಗೆ ಇರುವ ರಸ್ತೆಯನ್ನು ಆದಷ್ಟು ಬೇಗ ಡಾಂಬರೀಕರಣ ಮಾಡಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಅಶೋಕ್ ಎಂ. ಮನಗೂಳಿ ಭರವಸೆ ನೀಡಿದರು.
ಈ ರಸ್ತೆ ದೇವಣಗಾಂವ ಹಾಗೂ ಆಲಮೇಲ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ದಿನನಿತ್ಯದ ಸಂಚಾರಕ್ಕೆ ಬಹಳ ಮುಖ್ಯವಾಗಿದೆ. ರಸ್ತೆ ಅಭಿವೃದ್ಧಿಯಾದರೆ ಗ್ರಾಮೀಣ ಪ್ರದೇಶದ ಜನರ ಸಂಚಾರ ಇನ್ನಷ್ಟು ಸುಗಮವಾಗಲಿದೆ.
ದೇವಣಗಾಂವ ಬೊಮ್ಮನಹಳ್ಳಿ ರಸ್ತೆಯೂ ಡಾಂಬರೀಕರ:-
ಅದೇ ರೀತಿ ದೇವಣಗಾಂವದಿಂದ ಬೊಮ್ಮನಹಳ್ಳಿ ವರೆಗೆ ಇರುವ ರಸ್ತೆಯನ್ನು ಕೂಡ ಆದಷ್ಟು ಬೇಗ ಡಾಂಬರೀಕರಣ ಮಾಡಿಸಿ ಕೊಡಿಸುವುದಾಗಿ ಶಾಸಕ ಅಶೋಕ್ ಎಂ. ಮನಗೂಳಿ ಅವರು ಹೇಳಿದರು.
ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಯಿಂದ ದೇವಣಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ವ್ಯವಸ್ಥೆ ಬಲಪಡಲಿದ್ದು, ಕೃಷಿ ಉತ್ಪನ್ನಗಳ ಸಾಗಾಟ, ವಿದ್ಯಾರ್ಥಿಗಳ ಸಂಚಾರ ಹಾಗೂ ಸಾರ್ವಜನಿಕರ ದಿನ ನಿತ್ಯದ ಓಡಾಟಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಐದು ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ:-
ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕುರಿತು ಮಾತನಾಡಿದ ಶಾಸಕ ಅಶೋಕ್ ಎಂ. ಮನಗೂಳಿ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿವೆ ಎಂದು ಹೇಳಿದರು.

“ನಮ್ಮ ಸರ್ಕಾರಕ್ಕೆ ಮೂರು ವರ್ಷ ಎರಡು ತಿಂಗಳ ಅವಧಿ ಕಳೆದಿದ್ದರೂ, ಜನರಿಗಾಗಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಲೇ ಇರುತ್ತವೆ. ಹಿಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಸಾಹೇಬರು ಆಗಿರಬಹುದು, ಈಗಿನ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ ಶಿವಕುಮಾರ್ ಸಾಹೇಬರು ಹಾಗೂ ಸರ್ಕಾರದ ನಾಯಕತ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ” ಎಂದು ಅವರು ಹೇಳಿದರು.
ಅಭಿವೃದ್ಧಿಯೇ ಜನರ ಮೇಲಿನ ನಿಜವಾದ ಗೌರವ:-
ಶಾಸಕ ಅಶೋಕ್ ಎಂ. ಮನಗೂಳಿ ಅವರು ಮಾತನಾಡುತ್ತಾ, ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದೇ ತಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
“ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದಾರೆ. ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ನಮ್ಮ ಕರ್ತವ್ಯ. ಅಭಿವೃದ್ಧಿ ಎಂದರೆ ಕೇವಲ ದೊಡ್ಡ ದೊಡ್ಡ ಯೋಜನೆಗಳಲ್ಲ. ಒಂದು ಗ್ರಾಮಕ್ಕೆ ರಸ್ತೆ ಬೇಕಿದ್ದರೆ ರಸ್ತೆ ಮಾಡಿಸುವುದು, ಸೇತುವೆ ಬೇಕಿದ್ದರೆ ಸೇತುವೆ ನಿರ್ಮಿಸುವುದು, ರೈತರಿಗೆ ನೀರು ಬೇಕಿದ್ದರೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಜನರ ಸಮಸ್ಯೆಗೆ ಸ್ಪಂದಿಸುವುದೇ ನಿಜವಾದ ಜನಸೇವೆ” ಎಂದು ಅವರು ಅಭಿಪ್ರಾಯಪಟ್ಟರು.
ದೇವಣಗಾಂವ ಭೀಮಾ ನದಿ ಸೇತುವೆ ಸಬಲೀಕರಣ ಕಾಮಗಾರಿ ಪೂರ್ಣ ಗೊಂಡಿರುವುದು ಈ ಭಾಗದ ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಜನರ ಸಮಸ್ಯೆಯನ್ನು ಸ್ಥಳದಲ್ಲೇ ಆಲಿಸಿ, ಸಂಬಂಧಿಸಿದ ಸಚಿವರ ಗಮನಕ್ಕೆ ತಂದು, ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಕಾಮಗಾರಿಯನ್ನು ಸಾಕಾರಗೊಳಿಸಿದ ಶಾಸಕ ಅಶೋಕ್ ಎಂ. ಮನಗೂಳಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಜನರ ವಿಶ್ವಾಸವೇ ನಮ್ಮ ಶಕ್ತಿ:-
ದೇವಣಗಾಂವ ಭೀಮಾ ನದಿ ಸೇತುವೆ ಕಾಮಗಾರಿಯೊಂದಿಗೆ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಮುಂದಿನ ದಿನಗಳಲ್ಲಿ ದೇವಣಗಾಂವ ಆಲಮೇಲ ಹಾಗೂ ದೇವಣಗಾಂವ ಬೊಮ್ಮನಹಳ್ಳಿ ರಸ್ತೆ ಅಭಿವೃದ್ಧಿಯ ಭರವಸೆಯೂ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
“ಜನರ ಆಶೀರ್ವಾದ ಮತ್ತು ಸಹಕಾರವೇ ನನ್ನ ಶಕ್ತಿ. ಅಭಿವೃದ್ಧಿಯ ಕೆಲಸಗಳು ನಿರಂತರವಾಗಿ ನಡೆಯಬೇಕು. ಸಿಂದಗಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂಬುದೇ ನನ್ನ ಸಂಕಲ್ಪ. ಜನರಿಗೆ ನೀಡಿದ ಮಾತುಗಳನ್ನು ಸಾಧ್ಯವಾದಷ್ಟು ಕಾರ್ಯರೂಪಕ್ಕೆ ತಂದು, ತಂದೆಯವರು ಹಾಕಿಕೊಟ್ಟ ಜನಸೇವೆಯ ಮಾರ್ಗವನ್ನು ಮುಂದುವರಿಸುತ್ತೇನೆ” ಎಂದು ಶಾಸಕ ಅಶೋಕ್ ಎಂ. ಮನಗೂಳಿ ಹೇಳಿದರು. ಪಕ್ಷಭೇದವಿಲ್ಲದೆ ಜನರ ಕೆಲಸ ಮಾಡಿಸುವುದೇ ನಮ್ಮ ಧ್ಯೇಯ.
ಶಾಸಕ ಅಶೋಕ್ ಎಂ. ಮನಗೂಳಿ ಅವರು ಮಾತನಾಡುತ್ತಾ, ತಮ್ಮ ಬಳಿಗೆ ಬರುವ ಜನರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ಅವರ ಸಮಸ್ಯೆಗಳನ್ನು ಪಕ್ಷದ ದೃಷ್ಟಿಯಿಂದ ನೋಡದೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವುದಾಗಿ ಸ್ಪಷ್ಟಪಡಿಸಿದರು.
“ನಮ್ಮ ಸರ್ಕಾರ ಜನರ ಸರ್ಕಾರ. ನಮ್ಮ ಹತ್ತಿರ ಯಾರೇ ಬರಲಿ, ಅವರು ಯಾವುದೇ ಪಕ್ಷದವರಾಗಿರಲಿ, ಅವರ ಸಮಸ್ಯೆ ನ್ಯಾಯಯುತವಾಗಿದ್ದರೆ ಅದನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಜನರು ತಮ್ಮ ಕೆಲಸಕ್ಕಾಗಿ ನಮ್ಮ ಬಳಿ ಬಂದಾಗ ಅವರು ಯಾವ ಪಕ್ಷದವರು ಎಂದು ಕೇಳುವುದಿಲ್ಲ. ಜನರ ಕೆಲಸ ಮಾಡಿ ಕೊಡುವುದೇ ನಮ್ಮ ಜವಾಬ್ದಾರಿ. ಅಧಿಕಾರ ಎನ್ನುವುದು ಎಲ್ಲರ ಸೇವೆ ಮಾಡಲು ಸಿಕ್ಕಿರುವ ಅವಕಾಶ” ಎಂದು ಶಾಸಕ ಅಶೋಕ್ ಎಂ. ಮನಗೂಳಿ ಹೇಳಿದರು.
ಟೀಕೆಗಳೇ ಇನ್ನಷ್ಟು ಅಭಿವೃದ್ಧಿಗೆ ಪ್ರೇರಣೆ:-
ತಮ್ಮ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ನಡೆಯುವ ಟೀಕೆಗಳ ಬಗ್ಗೆಯೂ ಶಾಸಕ ಅಶೋಕ್ ಎಂ. ಮನಗೂಳಿ ಅವರು ಮುಕ್ತವಾಗಿ ಮಾತನಾಡಿದರು.

“ಯಾರಾದರೂ ನಮ್ಮ ಸರ್ಕಾರದ ವಿರುದ್ಧವಾಗಲಿ, ನಮ್ಮ ವಿರುದ್ಧವಾಗಲಿ ಟೀಕೆ ಮಾಡುತ್ತಾರೆ ಎಂದರೆ ಅದನ್ನು ನಾವು ಬೇಸರದಿಂದ ನೋಡುವುದಿಲ್ಲ. ಬದಲಾಗಿ ಅದು ನಮಗೆ ಸಂತೋಷದ ಸುದ್ದಿಯೇ. ಏಕೆಂದರೆ ಟೀಕೆಗಳು ನಮ್ಮ ಕೆಲಸವನ್ನು ಮತ್ತಷ್ಟು ಪರಿಶೀಲಿಸಿ ಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವಂತೆ ಪ್ರೇರೇಪಿಸುತ್ತವೆ. ಟೀಕೆ ಮಾಡುವವರು ಇರುವುದರಿಂದ ನಾವು ಇನ್ನಷ್ಟು ವೇಗವಾಗಿ, ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ” ಎಂದು ಅವರು ಹೇಳಿದರು.
“ನಮ್ಮ ತಪ್ಪುಗಳಿದ್ದರೆ ಅದನ್ನು ತಿದ್ದಿ ಕೊಳ್ಳುತ್ತೇವೆ. ಜನರ ಬೇಡಿಕೆಗಳಿದ್ದರೆ ಅವುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ಟೀಕೆಗಳನ್ನು ಎದುರಿಸುವ ಬದಲು ಅವುಗಳನ್ನು ಅಭಿವೃದ್ಧಿಗೆ ಪ್ರೇರಣೆಯಾಗಿ ತೆಗೆದುಕೊಂಡು ಮುಂದೆ ಸಾಗುವುದು ನಮ್ಮ ನಿಲುವು” ಎಂದು ಶಾಸಕ ಅಶೋಕ್ ಎಂ. ಮನಗೂಳಿ ಅವರು ತಿಳಿಸಿದರು.
ಪಕ್ಷಭೇದ ಮರೆತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಟೀಕೆಗಳನ್ನು ಸಹ ಅಭಿವೃದ್ಧಿಯ ಅವಕಾಶವಾಗಿ ಸ್ವೀಕರಿಸುವ ಶಾಸಕರ ಈ ನಿಲುವಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ದೀಪಾಲಂಕಾರ ದಿಂದ ಕಂಗೊಳಿಸಿದ ಸೇತುವೆ ದೇವಣಗಾಂವ ಭೀಮಾ ನದಿ ಸೇತುವೆ ಸಬಲೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೇತುವೆಯನ್ನು ವಿಶೇಷವಾಗಿ ಬೀದಿ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆ ಸೇತುವೆ ಆಕರ್ಷಕವಾಗಿ ಕಂಗೊಳಿಸುವಂತಾಗಿದೆ.
ನೂತನ ದೀಪಗಳ ಅಳವಡಿಕೆಯಿಂದ ಸಾರ್ವಜನಿಕರಿಗೆ ರಾತ್ರಿ ಸಂಚಾರಕ್ಕೂ ಅನುಕೂಲವಾಗಿದ್ದು, ಸೇತುವೆಯ ಸೌಂದರ್ಯವೂ ಹೆಚ್ಚಾಗಿದೆ. ಸೇತುವೆ ಕಾಮಗಾರಿ ಪೂರ್ಣ ಗೊಳಿಸುವಲ್ಲಿ ಶ್ರಮಿಸಿದ ಗುತ್ತಿಗೆದಾರರಾದ ಉಳ್ಳಾಗಡ್ಡಿ ಅವರನ್ನು ಶಾಸಕ ಅಶೋಕ್ ಎಂ. ಮನಗೂಳಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಕಾಮಗಾರಿ ಅನುಷ್ಠಾನದಲ್ಲಿ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಅರುಣ್ ಕುಮಾರ್ ಸರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೂ ಶಾಸಕರು ಸನ್ಮಾನಿಸಿ ಗೌರವಿಸಿದರು.
ಜನರ ಬಹು ದಿನಗಳ ಬೇಡಿಕೆಯಾಗಿದ್ದ ಸೇತುವೆ ಸಬಲೀಕರಣ ಕಾಮಗಾರಿ ಪೂರ್ಣ ಗೊಂಡಿರುವುದು ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಸಂತಸ ಮೂಡಿಸಿದೆ. ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ಅಭಿವೃದ್ಧಿ ಗೊಂಡಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು.
ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಹಾಗೂ ಟೀಕೆಗಳನ್ನು ಸಹ ಸಕಾರಾತ್ಮಕವಾಗಿ ಸ್ವೀಕರಿಸುವ ಶಾಸಕ ಅಶೋಕ್ ಎಂ. ಮನಗೂಳಿ ಅವರ ನಿಲುವಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ತಂದೆ ಎಂ.ಸಿ. ಮನಗೂಳಿ ಅವರು ಹಾಕಿಕೊಟ್ಟ ಜನ ಸೇವೆಯ ಹಾದಿಯಲ್ಲಿ ಸಾಗುತ್ತಾ, ಸಿಂದಗಿ ಮತ ಕ್ಷೇತ್ರ ಹಾಗೂ ಆಲಮೇಲ ಬ್ಲಾಕ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಅಶೋಕ್ ಎಂ. ಮನಗೂಳಿ ಅವರು ಪುನರುಚ್ಚರಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ್ ನಾಗಾವಿ ದೇವಣಗಾಂವ

