ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲಿ ಎಂದು ಆಗ್ರಹ ಪಡಿಸಿದ – ಬಸವರಾಜ ಹಡಪದ ಸುಗೂರ ಎನ್.
ಕಲಬುರಗಿ ಆ.30


ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಇಡೀ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ಬದಲು ರಾಜ್ಯ ಸರ್ಕಾರವು 101 ತಾಲೂಕುಗಳನ್ನು ಮಾತ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಆದರೆ ಕಲಬುರಗಿ ಜಿಲ್ಲೆಯ 11 ತಾಲೂಕುಗಳ ಪೈಕಿ ಒಂದೇ ಒಂದು ತಾಲೂಕನ್ನೂ ಬರಗಾಲ ಪೀಡಿತವೆಂದು ಘೋಷಿಸದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆಯ ಕಲಬುರಗಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಬಸವರಾಜ ಹಡಪದ ಸುಗೂರ ಎನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನೆರೆಯ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ, ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸದಿರುವುದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಸವರಿದಂತಾಗಿದೆ ಎಂದು ದೂರಿದ್ದಾರೆ.
ಈಗಾಗಲೇ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿ, ಜಿಲ್ಲಾದ್ಯಂತ ಬರಗಾಲ ಘೋಷಿಸುವ ಕುರಿತು ಭರವಸೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕನ್ನು ಬರ ಪೀಡಿತವೆಂದು ಘೋಷಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮುಂಗಾರು ಬೆಳೆಗಳಲ್ಲಿ ಯಾವ ಬೆಳೆಗಳು ಉತ್ತಮವಾಗಿವೆ ಎಂಬುದನ್ನು ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ 11 ತಾಲೂಕುಗಳನ್ನೂ ಬರಗಾಲ ಪೀಡಿತ ಪ್ರದೇಶವೆಂದು ತಕ್ಷಣ ಘೋಷಿಸಬೇಕು ಎಂದು ಬಸವರಾಜ ಹಡಪದ ಸುಗೂರ ಎನ್ ಅವರು ಆಗ್ರಹಿಸಿದ್ದಾರೆ.
ಮಳೆಯ ಅಭಾವದಿಂದ ಜಿಲ್ಲೆಯಾದ್ಯಂತ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಆದ್ದರಿಂದ ರೈತರ ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ, ಸೂಕ್ತ ಬೆಳೆ ಪರಿಹಾರವನ್ನು ತಕ್ಷಣವೇ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ಕೃಷಿಗಾಗಿ ರೈತರು ಸಹಕಾರಿ ಸಂಘಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಜಾನುವಾರುಗಳ ರಕ್ಷಣೆಗೆ ಪ್ರತಿ ತಾಲೂಕಿನಲ್ಲೂ ಅಗತ್ಯ ಪ್ರಮಾಣದ ಮೇವು ಬ್ಯಾಂಕ್‌ಗಳನ್ನು ಆರಂಭಿಸ ಬೇಕು ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯದ ಅನೇಕ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಬರದ ಪರಿಣಾಮ ತೀವ್ರವಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ರೈತರು ಮತ್ತು ಜನ ಸಾಮಾನ್ಯರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪ್ರತಿ ಎಕರೆ ಗೇ ೫೦ ಸಾವಿರ ರೂಪಾಯಿ ರೈತರಿಗೆ ಪರಿಹಾರ ಹಣ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು.
ಇಲ್ಲವಾದಲ್ಲಿ ರೈತರು ಮತ್ತು ಜನ ಸಾಮಾನ್ಯರ ಪರವಾಗಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆಯ ಕಲಬುರಗಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಬಸವರಾಜ ಹಡಪದ ಸುಗೂರ ಎನ್ ಅವರು ಎಚ್ಚರಿಕೆ ನೀಡಿದ್ದಾರೆ.
