ಅದ್ಧೂರಿ ವಿರಾಟ್ ವಿಶ್ವಕರ್ಮ ಪೂಜಾ ಮಹೋತ್ಸವ – ಎಸ್/ಟಿ ಮೀಸಲಾತಿಗೆ ಆಗ್ರಹ, ಶಿಕ್ಷಣಕ್ಕೆ ಒತ್ತು.
ಸಂಗಾಪುರ ಸೆ.21

ಮಾನ್ವಿ ತಾಲೂಕಿನ ಶಿಲಾ ಶಿಲ್ಪಿಗಳ ತವರೂರಾದ ಸಂಗಾಪುರ ಗ್ರಾಮದಲ್ಲಿ 3ನೇ ವರ್ಷದ ವಿರಾಟ್ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಸಮಾಜದ ಬಾಂಧವರು ಅತ್ಯಂತ ಸಡಗರ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಿದರು.
ಪೂಜೆ, ವಿಶೇಷ ಅರ್ಚನೆ ಹಾಗೂ ಧಾರ್ಮಿಕ ಸಮಾಗಮ ದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಭಿವೃದ್ಧಿ, ಒಗ್ಗಟ್ಟು, ಶಿಕ್ಷಣ ಹಾಗೂ ಮೀಸಲಾತಿ ಕುರಿತು ವಿವಿಧ ಮುಖಂಡರು ಮಾತನಾಡಿದರು.ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ವಿಶ್ವಕರ್ಮರ ಭಾವ ಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ ಪುರವಂತರು ಆಗಮಿಸಿ ಪುರವಂತಿಕೆ ಸೇವೆ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಭಗವಧ್ವಜ ಹಾಗೂ ‘ಶ್ರೀ ವಿಶ್ವಕರ್ಮ’ ಎಂಬ ಕನ್ನಡದ ಬಾವುಟಗಳು ರಾರಾಜಿಸಿದವು.
ಡೊಳ್ಳು ಕುಣಿತ, ವೀರಭದ್ರನ ವೇಷಧಾರಿಗಳ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.ಗ್ರಾಮದ ಕಲ್ಯಾಣಿ ಬಳಿ ಗ್ರಾಮದ ಮಹಿಳೆಯರೆಲ್ಲರೂ ಒಗ್ಗೂಡಿ ಸಾಂಪ್ರದಾಯಿಕವಾಗಿ ಗಂಗಾಪೂಜೆ ನೆರವೇರಿಸಿದರು. ಬಳಿಕ ಭವ್ಯ ಮೆರವಣಿಗೆಯು ಬನ್ನಿ ಮಹಾಕಾಳಿ ದೇವಿ ದೇವಸ್ಥಾನಕ್ಕೆ ತಲುಪಿದ್ದು, ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಂಪ್ರದಾಯಿಕ ಆಚರಣೆಗಳು, ಜಾನಪದ ಕಲಾ ಪ್ರದರ್ಶನಗಳು ಹಾಗೂ ಭಕ್ತಿಭಾವದ ವಾತಾವರಣದೊಂದಿಗೆ ನಡೆದ ಮೆರವಣಿಗೆ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಜಿಲ್ಲಾ ವಿಶ್ವಕರ್ಮ ಪ್ರಧಾನ ಕಾರ್ಯದರ್ಶಿ ರಾಮು ಗಾನದಾಳ್, ರಾಯಚೂರು ಮಾತನಾಡಿ, ಶಿಲಾ ಶಿಲ್ಪಿಗಳ ತವರೂರಾದ ಸಂಗಾಪುರದಲ್ಲಿ ಹಳ್ಳಿ ಮಟ್ಟದಲ್ಲಿಯೇ ಸಾವಿರಾರು ಜನರು ಸೇರಿ ಜಯಂತಿ ಆಚರಿಸುತ್ತಿರುವುದು ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು.

ಶ್ರೀ ಕೆ.ಪಿ. ನಂಜುಂಡಿ ಅವರ 25 ವರ್ಷಗಳ ಸತತ ಹೋರಾಟದ ಫಲವಾಗಿ 2016 ರಿಂದ ಸೆಪ್ಟೆಂಬರ್ 17 ರಂದು ಸರ್ಕಾರವೇ ಅಧಿಕೃತವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿದೆ ಎಂದು ತಿಳಿಸಿದರು.
ಡಾ, ಬಿ.ಆರ್ ಅಂಬೇಡ್ಕರ್ ಅವರ “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ತತ್ವಗಳ ಆಧಾರದ ಮೇಲೆ ವಿಶ್ವಕರ್ಮ ಸಮಾಜವು ಮುನ್ನಡೆಯ ಬೇಕು. ಕುಟುಂಬ ಸಮೇತರಾಗಿ ಒಗ್ಗಟ್ಟಾಗಿ ನಿಂತು ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಅಮರನಾಥ್ ಕೆ., ಮಾನ್ವಿ ಮಾತನಾಡಿ, ಸಂಗಾಪುರ ಗ್ರಾಮದಲ್ಲಿ 3 ನೇ. ವರ್ಷದ ವಿರಾಟ್ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಶಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ ಎಂದರು.
ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಸೃಜನ ಶೀಲತೆಯ ಆದಿ ದೇವತೆಯಾದ ವಿಶ್ವಕರ್ಮ ದೇವರನ್ನು ಪೂಜಿಸಿ, ಸಮಾಜದ ಸುಖ, ಶಾಂತಿ, ಸಮೃದ್ಧಿ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು ಎಂದು ಹೇಳಿದರು.
ಧಾರ್ಮಿಕ ಸಮಾಗಮದ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸಹಕಾರವನ್ನು ಬೆಳೆಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಈ ಮಹೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಮುಖಂಡ ಮನೋಹರ್ ಬಡಿಗೇರ್, ಜಿಲ್ಲಾಧ್ಯಕ್ಷ ಸುರೇಶ್ ವಿಶ್ವಕರ್ಮ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ. ವೀರೇಶ್ ಆಚಾರಿ, ತಾಲೂಕು ಉಪಾಧ್ಯಕ್ಷ ಸುರೇಶ್ ಬಿ.ಎಡ್, ಮನೋಹರ ಹುಲಗುಂಚಿ, ದೇವರಾಜ ಆಚಾರಿ, ಜಕಣಚಾರಿ ಮಾನ್ವಿ, ಪಾಂಡುರಂಗ ಆಚಾರಿ ಮಾನ್ವಿ, ದೇವರಾಜ ಆಚಾರಿ ಸಂಗಾಪುರ, ಮನೋಹರ್ ವಿಶ್ವಕರ್ಮ, ಮೌನೇಶ್ ವಲ್ಕಂದಿನ್ನಿ, ಬ್ರಹ್ಮಯ್ಯ ಕೊಟ್ನೆಕಲ್, ನರಸಣ್ಣ ಕಪಗಲ್, ಚಾಮರಾಜ್ ಬೊಮ್ಮನಾಳ ಹಾಗೂ ಈರಣ್ಣಾಚಾರಿ ಹರವಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಂಡು ವಿರಾಟ್ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
