ಶಿವನಗೌಡ ಹಾಗೂ ಹನುಮೇಶ್ ನಾಯಕ ಹತ್ಯೆ ಪ್ರಕರಣ – ಆರೋಪಿಗಳಿಗೆ ಉಗ್ರ ಶಿಕ್ಷೆಗೆ ಆಗ್ರಹ, ಸಿಎಂಗೆ ಮನವಿ.

ರಾಂಪುರ ಸೆ.21

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರಾಂಪುರ-ಭೂಪುರ ಗ್ರಾಮದ ಶಿವನಗೌಡ ನಾಯಕ ಹಾಗೂ ಮಾನ್ವಿ ತಾಲೂಕಿನ ಹನುಮೇಶ್ ನಾಯಕ ಹತ್ಯೆ ಪ್ರಕರಣಗಳ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಹಾಗೂ ಮೃತರ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಬೇಡರ ಸಮಿತಿ (ರಿ) ಹಾಗೂ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕ ರಾಯಚೂರು ಸಮಸ್ತ ವಾಲ್ಮೀಕಿ ಸಮುದಾಯದ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಮಾನ್ಯ ತಹ‌ಸಿಲ್ದಾರ್ ಭೀಮರಾಯ ರಾಮಸಮುದ್ರ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಶಿವನಗೌಡ ನಾಯಕ ಅವರು ಗಣೇಶ ವಿಗ್ರಹ ವೀಕ್ಷಣೆಗೆ ತೆರಳಿದ್ದ ವೇಳೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದಾಗಿ ಹಾಗೂ ಮೃತರ ಪತ್ನಿ ಬಾಣತಿಯಾಗಿದ್ದು, ಕುಟುಂಬ ಸಂಕಷ್ಟದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಅದೇ ರೀತಿ, ಮಾನ್ವಿ ತಾಲೂಕಿನ ಸಂಗಾಪುರ ರಸ್ತೆಯ ಅಲ್ಲಾ ಓಲಿ ಕಾಲೋನಿಯ ಹನುಮೇಶ ನಾಯಕ ಅವರನ್ನು ಅವರ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಕೃತ ವಿಡಿಯೋ ಹರಡಿರುವುದನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನ ಹಾಗೂ ಅಕ್ರಮ ಮದ್ಯ ಮಾರಾಟದಿಂದ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಮನವಿಯಲ್ಲಿ ಮೃತರ ಕುಟುಂಬಗಳಿಗೆ ತಲಾ ಒಂದು ಸರ್ಕಾರಿ ಉದ್ಯೋಗ, 5 ಎಕರೆ ಕೃಷಿ ಭೂಮಿ ಹಾಗೂ ತಲಾ 4 ಕೋಟಿ ಪರಿಹಾರ ನೀಡಬೇಕು. ಎರಡೂ ಹತ್ಯೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ.

ಬೇಡಿಕೆಗಳು ಈಡೇರದಿದ್ದರೆ ರಾಯಚೂರು ಜಿಲ್ಲೆಯಾದ್ಯಂತ ವಾಲ್ಮೀಕಿ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ (ರಿ.)ಬೆಂಗಳೂರು, ರಾಜ್ಯಾಧ್ಯಕ್ಷರಾದ ಅಂಬಣ್ಣ ನಾಯಕ ಗುಜ್ಜಲ್ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷರಾದ ರಾಮಣ್ಣ ನಾಯಕ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಕೊಂಡಯ್ಯ ನಾಯಕ, ಮಾನವ ಬಂಧುತ್ವ ವೇದಿಕೆ ಸಂಚಾಲಕರಾದ ಶಿವರಾಜ ನಾಯಕ ಹರವಿ, ಆಂಜನೇಯ ನಸಲಾಪುರ ಜೆಲ್ಲಿ ಆಂಜನೇಯ್ಯ ನೀರಮಾನ್ವಿ, ತಿಮ್ಮಯ್ಯ ನಾಯಕ ಮದ್ಲಾಪುರ, ರಮೇಶ ನಾಯಕ ಕಪಗಲ್, ಯಲ್ಲಯ್ಯ ನಾಯಕ. ರಾಜಾ ನಾಯಕ ಹನುಮೇಶ ನಾಯಕ ಇನ್ನು ಕೆಲವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button