‘ಪಂಚಾಯಿತಿ’ ಸಿನಿಮಾದಲ್ಲಿ – ಯೂಟ್ಯೂಬರ್‌ ಗಳಿಗೂ ಅವಕಾಶ..!

ಬೆಂಗಳೂರು ಅ.08

ಯೂಟ್ಯೂಬ್‌ ನಲ್ಲಿ ತಮ್ಮದೇ ಆದ ಸಹಸ್ರಾರು ಪ್ರೇಕ್ಷಕ ಬಳಗವನ್ನು ಹೊಂದಿರುವ ಪ್ರತಿಭಾವಂತ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ನೀಡುವ ಮೂಲಕ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರು ತಮ್ಮ ಹೊಸ ಹದಿನಾಲ್ಕನೇ ಸಿನಿಮಾ ನೇಟಿವ್ ಕ್ರಿಯೆಶನ್ಸ್ ಅಡಿಯಲ್ಲಿ ತಯ್ಯಾರಾಗುತ್ತಿರುವ ‘ಪಂಚಾಯಿತಿ’ ಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಯೂಟ್ಯೂಬ್‌ನಲ್ಲಿ ಜನಪ್ರಿಯರಾದ ಕಲಾವಿದ ಗೋಕುಲ್ ರಾಜ್, ಜಗದೀಶ್ ಮೂಕಿ, ಪ್ರಕಾಶ ರಾಜಕುಮಾರ್, ಶ್ರುತಿ ಹೇಮಂತ್, ಬಿಂದು, ವೀರಣ್ಣ ಹೊಸಮನಿ ಮೊದಲಾದ ಕಲಾವಿದರಿಗೆ ‘ಪಂಚಾಯಿತಿ’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನೀಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ, ಸಿನಿಮಾದ ಎಲ್ಲ ಪಾತ್ರಗಳಿಗೂ ಉತ್ತರ ಕರ್ನಾಟಕದ ಕಲಾವಿದರನ್ನೇ ಬಳಸಿ ಕೊಂಡಿರುವುದು.

“ಉತ್ತರ ಕರ್ನಾಟಕದ ಭಾಷೆ ಮತ್ತು ಇಲ್ಲಿನ ಸೊಗಡು ನನಗೆ ಬಹಳ ಇಷ್ಟ. ಹನ್ನೆರಡು ವರ್ಷಗಳ ಹಿಂದೆ ‘ಡಿಸೆಂಬರ್-1’ ಚಿತ್ರವನ್ನು ಇಲ್ಲಿಯ ಪ್ರಾದೇಶಿಕತೆ ಅಳವಡಿಸಿ ಮಾಡಿದ್ದೆ ಆ ಚಿತ್ರ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿತ್ತು, ಇಲ್ಲಿನ ಜನರ ಆತ್ಮೀಯತೆ ನನ್ನನ್ನು ಇಲ್ಲಿಗೆ ಮತ್ತೆ ಕರೆ ತಂದಿದೆ ಎಂದು ಪಿ. ಶೇಷಾದ್ರಿ ಹೇಳಿದ್ದಾರೆ.

ಚಿತ್ರದ ಮತ್ತೊಂದು ವಿಶೇಷವೆಂದರೆ ಪ್ರಮುಖ ಪಾತ್ರವೊಂದರಲ್ಲಿ ನಿಜ ಜೀವನದ ಜೋಗತಿ ‘ದೀಪಾ ಜೋಗತಿ’ ಅಭಿನಯಿಸಿರುವುದು.

ಮೂಲತಃ ರಾಯಚೂರಿನವರಾದ ‘ದೀಪಾ ಜೋಗತಿ’ ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಜೋಗತಿ ಸಮುದಾಯದ ಪ್ರತಿನಿಧಿಯಾಗಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.

ಜೊತೆಗೆ ಚಿತ್ರಕ್ಕಾಗಿ ಜನಪದ ಸೊಗಡಿನ ಹಾಡು ಕೂಡ ಹಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಶಿವಳ್ಳಿ, ಕುಂದಗೋಳ, ಹೆಬ್ಬಳ್ಳಿ, ಬೂದನಗುಡ್ಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ.

ಸದ್ಯ ಚಿತ್ರದ ಸಂಕಲನ ಕಾರ್ಯ ಪೂರ್ಣ ಗೊಂಡಿದ್ದು, ಸಂಗೀತದ ಜೋಡಣೆ ಹಾಗೂ ಶಬ್ದವಿನ್ಯಾಸದ ಜೊತೆಗೆ ಉಳಿದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಚಿತ್ರ ತಂಡ ನಡೆಸಿದೆ.

ಶ್ರುತಿ ಬಿಸರಹಳ್ಳಿ, ಬಸವರಾಜ್ ತಿರ್ಲಾಪುರ ಮೊದಲಾದವರೂ ಅಭಿನಯಿಸಿರುವ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು, ಕಥೆ ಅರವಿಂದ ಮಿತ್ರ, ಛಾಯಾಗ್ರಹಣ ಗುರುಪ್ರಸಾದ್ ಕಾಶಿ. ಶಿವಾ ಸಂಗೀತ, ಬಿ.ಎಸ್. ಕೆಂಪರಾಜ್ ಸಂಕಲನ, ಪಿ.ಆರ್.ಓ. ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ, ಸಹ ನಿರ್ದೇಶನ ಟಿ.ಆರ್.ಪ್ರಭು, ವಿದ್ಯಾಶ್ರೀ, ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸಿದ್ದಾರೆ. ರವಿಶಂಕರ್ ನಿರ್ಮಾಣ ನಿರ್ವಹಣೆ ಜವಾಬ್ದಾರಿ ಚಿತ್ರಕ್ಕಿದೆ. ದೊಡ್ಡ ನಾಗಯ್ಯ ನಿರ್ಮಾಪಕರಾಗಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button