ಪ್ರಯಾಣಿಕರನ್ನು ಭಯಪಡಿಸಿದ ಸ್ಪೈಸ್ ಜೆಟ್ ವಿಮಾನ ಹೈಜಾಕ್ ಟ್ವೀಟ್ ; ವ್ಯಕ್ತಿಯ ಬಂಧನ…!
ನವದೆಹಲಿ(ಜ.27):
ದುಬೈಯಿಂದ- ಜೈಪುರ್ ಗೆ ತೆರಳುತ್ತಿದ್ದ ಸ್ಪೇಸ್ ಜೆಟ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿ ಬಂಧನಕ್ಕೀಡಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ಮೋತಿ ಸಿಂಗ್ ಎಂಬ ವ್ಯಕ್ತಿ ಟ್ವಿಟ್ ಮಾಡಿ ಪಜೀತಿಗೆ ಸಿಲುಕಿರುವ ಪ್ರಯಾಣಿಕನಾಗಿದ್ದಾನೆ. ಈತ ವಿಮಾನದಲ್ಲಿ ಕುಳಿತು ಟ್ವಿಟ್ ಮಾಡಿದ್ದಲ್ಲದೆ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿದ್ದಾನೆ. ಏರ್ಲೈನ್ಸ್ ಸಿಬ್ಬಂದಿಯೊಂದಿಗೆ ಕೆಲವು ಪ್ರಯಾಣಿಕರು ಜಗಳವಾಡುತ್ತಿರುವ ವಿಡಿಯೋವನ್ನು ಕೂಡ ರಾಥೋಡ್ ಫೋಸ್ಟ್ ಮಾಡಿದ್ದ .
ಪೊಲೀಸ್ ಉಪ ಕಮಿಷನರ್ (ವಿಮಾನ ನಿಲ್ದಾಣ) ರವಿಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ರಾಜಸ್ಥಾನದ ನಾಗೌರ್ ನಿವಾಸಿ ಮೋತಿ ಸಿಂಗ್ ರಾಥೋಡ್ ಅವರು ದುಬೈ-ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ವಿಮಾನವು ಇಂದಿರಾಗಾಂಧಿ ಏರ್ಪೋರ್ಟ್ಗೆ ತಲುಪಿತ್ತು.
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬೆಳಗ್ಗೆ 9:45 ಕ್ಕೆ ನಿಲ್ದಾಣ ತಲುಪಿತ್ತು ಮತ್ತು ಮಧ್ಯಾಹ್ನ 1:40 ಕ್ಕೆ ಟೇಕ್ ಆಫ್ ಮಾಡಲು ಅನುಮತಿಯನ್ನು ನೀಡಲಾಗಿತ್ತು.ಪೊಲೀಸರ ಪ್ರಕಾರ, ವಿಮಾನ ವಿಳಂಬದಿಂದ ಬೇಸರಗೊಂಡು ಟ್ವೀಟ್ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೊನೆಗೆ ತನ್ನ ತಪ್ಪಿನ ಅರಿವಾಗಿದ್ದು ಟ್ವಿಟರ್ ನಲ್ಲಿಯೆ ತನ್ನ ತಪ್ಪಾಗಿದೆಯೆಂದು ಕ್ಷಮೆ ಯಾಚಿಸಿದ್ದಾನೆ. ವಿಮಾನ ವಿಳಂಬದಿಂದ ಆಕ್ರೋಶಗೊಂಡು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರು ಮೋತಿ ಸಿಂಗ್ ನನ್ನು ಬಂಧಿಸಿದ್ದಾರೆ .