ಲೊಯೋಲ ಶಿಕ್ಷಣ ಸಂಸ್ಥೆಗೆ – ಬೆಳ್ಳಿ ಹಬ್ಬದ ಸಂಭ್ರಮ.
ಮಾನ್ವಿ ಜು.01

ಮಾನ್ವಿ ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಗಳ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭವು ಸೋಮವಾರ ವಿಜೃಂಭಣೆಯಿಂದ ನಡೆಯಿತು. 2002 ರಲ್ಲಿ ತಾಲೂಕಿನ ಜಾಗೀರ ಪನ್ನೂರಿನಲ್ಲಿ ಆರಂಭವಾದ ಸಂಸ್ಥೆಯು ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ಕಳೆದ 24 ವರ್ಷಗಳಿಂದ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, 2027 ರಲ್ಲಿ ತನ್ನ 25 ನೇ. ವರ್ಷದ ಸಂಭ್ರಮವನ್ನು ಆಚರಿಸಲಿದೆ. ಇದರ ಅಂಗವಾಗಿ ಸಂಸ್ಥಾಪನಾ ದಿನದಂದು ವರ್ಷಪೂರ್ತಿ ನಡೆಯಲಿರುವ ಬೆಳ್ಳಿ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಸಂತ ಅಲೋಶಿಯಸ್ ಗೊಂಝಾಗ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯರಾದ ವಂ. ಫಾ. ರೋಹನ್ ಡಿ’ ಅಲ್ಮೀಡಾ ಅವರು ಮಾತನಾಡಿ, 2002ರ ಅವಧಿಯ ಮಾನ್ವಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಬಡತನ, ಅನಕ್ಷರತೆ ಹಾಗೂ ಬಾಲ ಕಾರ್ಮಿಕತೆಯ ಸ್ಥಿತಿಯನ್ನು ಸ್ಮರಿಸಿದರು. ಲೊಯೋಲ ಶಿಕ್ಷಣ ಸಂಸ್ಥೆಯ ಸ್ಥಾಪನೆಯಿಂದ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ತರ ಬದಲಾವಣೆ ಉಂಟಾಗಿದ್ದು, ಶಿಕ್ಷಣ, ಸಮಾಜ ಸೇವೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೊಯೋಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವಂ. ಫಾ. ಸಿಪ್ರಿಯನ್ ಟೆಲ್ಲಿಸ್ ಅವರು ಮಾತನಾಡಿ, ಲೊಯೋಲ ಸಂಸ್ಥೆಯು ಈ ಭಾಗದ ಜನರ ಶೈಕ್ಷಣಿಕ ಹಾಗೂ ಆರ್ಥಿಕ ಸವಾಲುಗಳಿಗೆ ಪರಿಹಾರವಾಗಿ ರೂಪು ಗೊಂಡಿದೆ. ಶಿಕ್ಷಣದ ಜೊತೆಗೆ ಪ್ರಾಂತೀಯ ಅಸಮಾನತೆ ಹಾಗೂ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಜಾಗೃತಿ ಮೂಡಿಸಿ, ಸಮಾಜದ ಪರ ಧ್ವನಿ ಎತ್ತುವ ಯುವ ಸಮುದಾಯವನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಲೊಯೋಲ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಚಾರ್ಯರಾದ ವಂ. ಫಾ. ವಿನೋದ್ ಪಾಲ್, ವಂ. ಫಾ. ವಿಲ್ಸನ್ ಬೆನ್ನಿಸ್, ವಂ. ಫಾ. ಅವಿನಾಶ್, ಶ್ರೀಮತಿ ಶ್ರುತಿ ಖಾಸಿಮ್, ಸಿಸ್ಟರ್ ಜೂಲಿಯಟ್ ಮೊಂತೇರೋ ಹಾಗೂ ಸಿಸ್ಟರ್ ಸೆಲೀನಾ ಮೇರಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನಗೆದ್ದವು. “ಶಿಕ್ಷಣದ ಮೂಲಕ ಸೇವೆ; ಸೇವೆಯ ಮೂಲಕ ಪರಿವರ್ತನೆ” ಎಂಬ ಧ್ಯೇಯ ವಾಕ್ಯದೊಂದಿಗೆ ಬೆಳ್ಳಿ ಮಹೋತ್ಸವದ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

