ಕೆಸರು ಗದ್ದೆಯಾದ ಅಗಸರ ಹಳ್ಳ ಚವಡಿ ರಸ್ತೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ – ಗ್ರಾಮದ ರೈತರ ತೀವ್ರ ಆಕ್ರೋಶ.

ಜಕ್ಕಲಿ ಆ.10

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಗಸರ ಹಳ್ಳ ಚವಡಿ ರಸ್ತೆ ಮಳೆಯ ನಂತರ ಸಂಪೂರ್ಣ ಕೆಸರುಮಯ ಗೊಂಡಿದ್ದು, ಸಾರ್ವಜನಿಕರು ಹಾಗೂ ರೈತರ ಪಾಲಿಗೆ ನರಕ ಸದೃಶ್ಯವಾಗಿ ಪರಿಣಮಿಸಿದೆ. ಪ್ರತಿದಿನ ಹೊಲ ಗದ್ದೆಗಳಿಗೆ ತೆರಳುವ ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಃಸ್ಥಿತಿ ನಿರ್ಮಾಣವಾಗಿದೆ.

ಸ್ವಲ್ಪ ಮಳೆಯಾದರೂ ಸಾಕು ರಸ್ತೆಯ ಮೇಲೆ ಅಪಾರ ಪ್ರಮಾಣದ ಮಳೆನೀರು ನಿಂತು ದೊಡ್ಡ ದೊಡ್ಡ ಕೆಸರಿನ ಗುಂಡಿಗಳು ಸೃಷ್ಟಿಯಾಗುತ್ತಿವೆ. ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಪೊದೆಯಂತೆ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದ ಕಾರಣ ಸಂಚಾರ ಸಂಪೂರ್ಣ ದುಸ್ತರವಾಗಿದೆ. ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ಹಾಗೂ ಇತರೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ.

ರ್ಯಾರಿಗೆ ತಲುಪಬೇಕಿದೆ ಈ ಎಚ್ಚರಿಕೆ? ಗ್ರಾಮದ ವ್ಯಾಪ್ತಿಯಲ್ಲಿರುವ ಈ ಕೃಷಿ ಸಂಪರ್ಕ ರಸ್ತೆಗೆ ತಕ್ಷಣವೇ ಮುರುಮ್/ಜಲ್ಲಿ ಹಾಕಿ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಲು ಪಂಚಾಯತಿಗೆ ಏನು ಅಡಚಣೆ? 15ನೇ ಹಣಕಾಸು ನಿಧಿ ಅಥವಾ ತುರ್ತು ಅನುದಾನವನ್ನು ಯಾವುದಕ್ಕೆ ಕಾಯಿಸಲಾಗುತ್ತಿದೆ? ಈ ರಸ್ತೆಗೆ ಕಾಯಂ ಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆ ಅಥವಾ ಗ್ರಾವೆಲ್ ರಸ್ತೆ ನಿರ್ಮಾಣಕ್ಕೆ ಅಗತ್ಯ ತಾಂತ್ರಿಕ ಅಂದಾಜು ಪಟ್ಟಿ ಸಿದ್ಧಪಡಿಸಲು ಇನ್ನೆಷ್ಟು ದಿನ ಬೇಕು? ನಮ್ಮ ಹೊಲ ನಮ್ಮ ರಸ್ತೆ ಅಥವಾ ನರೇಗಾ ಯೋಜನೆಯಡಿ ಸಾಕಷ್ಟು ಅನುದಾನವಿದ್ದರೂ ಕಣ್ಣೆದುರೇ ಇರುವ ಈ ಸಮಸ್ಯೆಯನ್ನು ಪರಿಹರಿಸಲು ಆಡಳಿತ ಯಂತ್ರ ಏಕೆ ವಿಫಲವಾಗಿದೆ? ದಿನನಿತ್ಯ ಹೊಲಗಳಿಗೆ ಗೊಬ್ಬರ ಸಲಕರಣೆ ಒಯ್ಯಲು ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಸ್ಥಳೀಯ ರೈತರು ಹಾಗೂ ಜಕ್ಕಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡೆಸಿದ್ದಾರೆ.

ಬಾಕ್ಸ್ ನ್ಯೂಸ್:-

ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ತಾಲೂಕು ಆಡಳಿತವು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಮಳೆನೀರು ಸರಾಗವಾಗಿ ಹರಿದುಹೋಗಲು ಒಳಚರಂಡಿ ನಿರ್ಮಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಹಾಗೂ ರೈತರು ಒಗೂಡಿ ತಾಲೂಕು ಆಡಳಿತದ ವಿರುದ್ಧ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ.ಎಂದು ಗ್ರಾಮಸ್ಥರು ನಮ್ಮ ಮಾಧ್ಯಮದ ಮೂಲಕ ಎಚ್ಚರಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button