ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರಿ ಆವರಣದಲ್ಲಿ – ಅವಕಾಶ ನೀಡುವಂತೆ ಒತ್ತಾಯಿಸಿ ಮನವಿ.
ನಾಲವಾರ ಆ.25

ಚಿತ್ತಾಪೂರ ತಾಲೂಕಿನ ನಾಲವಾರ ವಲಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯದಾದ್ಯಂತ ಹಾಗೂ ಗ್ರಾಮೀಣ ಭಾಗಗಳಲ್ಲಿ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕನ್ನಡಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಮಹಾನ್ ಕವಿಗಳು ಮತ್ತು ಸಾಹಿತಿಗಳ ಬದುಕು ಬರಹಗಳನ್ನು ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ದೇಶಗಳು ಹಾಗೂ ವಿವಿಧ ರಾಜಕೀಯ ಬೆಳವಣಿಗೆಗಳ ಕಾರಣದಿಂದ ಸರ್ಕಾರಿ ಆವರಣಗಳಲ್ಲಿ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಒಳ ಗೊಂಡಂತೆ ಕಾರ್ಯಕ್ರಮಗಳನ್ನು ನಡೆಸುವ ಕುರಿತು ನಿರ್ಬಂಧ ಹೇರಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಒಂದು ಕಡೆ ಸರ್ಕಾರವೇ ಶಾಲಾ ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆದ ಕವಿಗಳು, ಸಾಹಿತಿಗಳು ಮತ್ತು ಅವರ ಜೀವನ ಚರಿತ್ರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದೆ.
ಹಾಗಾದರೆ, ಶಾಲಾ ಅವಧಿ ಮುಗಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಇನ್ನಷ್ಟು ಸಾಹಿತ್ಯದ ಅರಿವು ಪಡೆಯುವುದಕ್ಕೆ ಏಕೆ ಅವಕಾಶ ನೀಡಬಾರದು?ಕನ್ನಡದ ಪುಸ್ತಕಗಳು ಏಕೆ ಬೇಕು? ಕನ್ನಡ ಸಾಹಿತ್ಯ ಏಕೆ ಬೇಕು? ಕನ್ನಡದ ಮಹಾನ್ ಕವಿಗಳು ಮತ್ತು ಸಾಹಿತಿಗಳ ಬದುಕು ವಿದ್ಯಾರ್ಥಿಗಳಿಗೆ ಏಕೆ ತಿಳಿಯಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದ ಪರಿಸ್ಥಿತಿ ಇಂದು ಎದುರಾಗ ಬಾರದು.
ಕನ್ನಡ ಪುಸ್ತಕಗಳ ಬಗ್ಗೆ ಒಲವಿಲ್ಲದೆ, ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸದೆ, ಗ್ರಾಮೀಣ ಭಾಗದಲ್ಲಿ ಕನ್ನಡ ಹೇಗೆ ಬೆಳೆಯಲು ಸಾಧ್ಯ? ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಲ್ಲಿಯೇ ಕನ್ನಡ ಸಾಹಿತ್ಯದ ಬಗ್ಗೆ ಅರಿವು, ಅಭಿಮಾನ ಮತ್ತು ಆಸಕ್ತಿ ಬೆಳೆಸ ಬೇಕಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸರ್ಕಾರಿ ಆವರಣದಲ್ಲಿ ನಡೆಸಲು ಅವಕಾಶವಿಲ್ಲ ಎಂದರೆ, ಕನ್ನಡದ ಬೆಳವಣಿಗೆಗೆ ಹೇಗೆ ಬಲ ಸಿಗುತ್ತದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಅದರಲ್ಲೂ ಈ ಕನ್ನಡ ನಾಡಿನಲ್ಲಿ ನೆಲ, ಜಲ ಮತ್ತು ಕನ್ನಡ ಭಾಷೆಗೆ ಧಕ್ಕೆ ಉಂಟಾದಾಗ ಕರುನಾಡಿನ ಜನತೆ ಧ್ವನಿ ಎತ್ತುವುದು ಶತಸಿದ್ಧ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಕನ್ನಡಿಗರು ಸಹಿಸುವುದಿಲ್ಲ.
ರಾಜ್ಯ ಸರ್ಕಾರವು ಕೂಡಲೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವ ಮೂಲಕ ಪರಿಷತ್ತಿನ ಸಂಘಟನೆಗೆ ಮತ್ತಷ್ಟು ಬಲ ಮತ್ತು ಶಕ್ತಿ ತುಂಬುವ ಕೆಲಸ ಮಾಡಬೇಕು.

ಯಾವುದೇ ರಾಜಕೀಯ ಪಕ್ಷಗಳ ನಡುವಿನ ಗುದ್ದಾಟ, ವೈಯಕ್ತಿಕ ರಾಜಕೀಯ ಭಿನ್ನಾಭಿಪ್ರಾಯಗಳು ಅಥವಾ ಕೆಸರು ಎರಚಾಟದ ಕಾರಣದಿಂದ ಕನ್ನಡ ಸಾಹಿತ್ಯದ ಕೆಲಸ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಮೊಟಕು ಗೊಳಿಸುವುದು ಸರಿಯಲ್ಲ. ರಾಜಕೀಯವನ್ನು ರಾಜಕೀಯದ ಮಟ್ಟಿಗೆ ಸೀಮಿತ ಗೊಳಿಸಿ, ಕನ್ನಡ ಸಾಹಿತ್ಯ ಮತ್ತು ಕನ್ನಡಪರ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೂಡಲೇ ಈ ನಿಯಮ ಮತ್ತು ನಿರ್ಬಂಧಗಳನ್ನು ಮರು ಪರಿಶೀಲಿಸಿ, ಶಾಲಾ ಅವಧಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೂಕ್ತ ಅವಕಾಶ ಮತ್ತು ಮಾರ್ಗ ಸೂಚಿಯನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಮಾನ್ಯ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಸರ್ಕಾರಿ ಶಾಲಾ ಹಾಗೂ ಸರ್ಕಾರಿ ಆವರಣಗಳಲ್ಲಿ ನಡೆಸಲು ಅಗತ್ಯ ಅನುಮತಿ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಬಲ ತುಂಬಿದರೆ ಮಾತ್ರ ಕನ್ನಡ ಸಾಹಿತ್ಯ ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತಷ್ಟು ತಲುಪಲು ಸಾಧ್ಯ. ಕನ್ನಡ ಉಳಿಯಬೇಕು, ಬೆಳೆಯಬೇಕು ಮತ್ತು ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆ ತಲುಪಬೇಕು.
ಜಂಟಿಯಾಗಿ ಮನವಿ ಮಾಡಿದವರು ಶಿವಕುಮಾರ್ ಸುಣಗಾರ ನಾಲವಾರ ವಲಯ ಕಸಾಪ ಗೌರವ ಸಲಹೆಗಾರರು ಅಂಜುನಾಥ ಎಸ್. ನಾಯ್ಕಲ್ಅಧ್ಯಕ್ಷರು, ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತುಸಿದ್ದುಗೌಡ ಕುರಾಳ, ಸುಗೂರ ಎನ್. ನಾಲವಾರ ವಲಯ ಕಸಾಪ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮೇಲ್ಕಂಡ ಪದಾಧಿಕಾರಿಗಳು ಜಂಟಿಯಾಗಿ ರಾಜ್ಯ ಸರ್ಕಾರಕ್ಕೆ ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು ಎಂದು ವರದಿಯಾಗಿದೆ.

