ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ – ಉಮರ ಬಿಳವಾರ ಅವಿರೋಧ ಆಯ್ಕೆ.

ಆಲಮೇಲ ಆ.28

ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚಿಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಉಮರ ಮೆಹಬೂಬ ಬಿಳವಾರ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಇದರಿಂದ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಳವಾರ ಅವರು ಅಧಿಕಾರ ಸ್ವೀಕರಿಸಿದರು.

ಆಲಮೇಲ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ತಹಶೀಲ್ದಾರ  ಮಲ್ಲಣ್ಣ ಯಲಗೋಡ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರ ಬಲವಿದ್ದು, ಪಕ್ಷೇತರ ಸದಸ್ಯರೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸದಸ್ಯರ ಸಂಖ್ಯೆ 18 ಕ್ಕೆ ಇಳಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮೂವರು ಸದಸ್ಯರು ಗೈರು ಹಾಜರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಉಮರ ಮೆಹಬೂಬ ಬಿಳವಾರ ಅವರು ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮಲ್ಲಣ್ಣ ಯಲಗೋಡ ಅವರು ಉಮರ ಮೆಹಬೂಬ ಬಿಳವಾರ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ನೂತನ ಅಧ್ಯಕ್ಷರಾದ ಉಮರ ಮೆಹಬೂಬ ಬಿಳವಾರ ಅವರನ್ನು ಪಟ್ಟಣ ಪಂಚಾಯಿತಿ ಸದಸ್ಯರು, ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ವಿದ್ಯಾಧರ ರಸ್ತಾಪುರ ಮಠ ಅಳ್ಳೊಳ್ಳಿ ಪೂಜ್ಯರು ಗ್ರಾಮದ ಗಣ್ಯರು ಹಾಗೂ ವಿವಿಧ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಉಮರ ಮೆಹಬೂಬ ಬಿಳವಾರ “ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಹಕರಿಸಿದ ಪಟ್ಟಣ ಪಂಚಾಯಿತಿಯ ಎಲ್ಲ ಸರ್ವ ಸದಸ್ಯರಿಗೆ ಹಾಗೂ ಪಟ್ಟಣದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮೆಲ್ಲರ ಸಹಕಾರದೊಂದಿಗೆ ಹಾಗೂ ಶಾಸಕರ ಸಹಕಾರ ಪಡೆದುಕೊಂಡು ಆಲಮೇಲ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಯಾವುದೇ ಜಾತಿ, ಧರ್ಮ ಅಥವಾ ಪಕ್ಷಭೇದವಿಲ್ಲದೆ ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷರ ಆಯ್ಕೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿತು. ಪಟಾಕಿ ಸಿಡಿಸಿ, ವಾದ್ಯವೈಭವದೊಂದಿಗೆ ಸಂಭ್ರಮಾಚರಣೆ ನಡೆಸಿ ನೂತನ ಅಧ್ಯಕ್ಷರಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಚುನಾವಣಾ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಆಲಮೇಲ , ಸಿಂದಗಿ ಹಾಗೂ ಕಲಕೇರಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ, ಗ್ರಾಮದ ಗಣ್ಯರಾದ ಬಸವರಾಜ ಧನಶ್ರೀ, ಡಾ. ರಾಜೇಶ್ ಪಾಟೀಲ್, ಎಲ್ಲಪ್ಪ ಬುರುಡೆ, ಅಯುಬ ದೇವರಮನಿ, ಅಶೋಕ್ ಕೋಳ್ಳಾರಿ,ಡಾ!! ಸಂಜು ಯಂಟಮಾನ ಸಿದ್ದು ಜೋಶಿ ದಯಾನಂದ ನಾರಾಯಣಕರ , ಭಗವಂತರಾಯ ಆಲಮೇಲಕರ್, ಹಣಮಂತ ಹೂಗಾರ ಸೇರಿದಂತೆ ಅನೇಕ ಮುಖಂಡರು, ಸದಸ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಅಭಿವೃದ್ಧಿಯೇ ಗುರಿ, ಎಲ್ಲರ ಸಹಕಾರವೇ ಶಕ್ತಿ:ನೂತನ ಅಧ್ಯಕ್ಷರಾಗಿ ಉಮರ ಮೆಹಬೂಬ ಬಿಳವಾರ ಅವರು ಪಕ್ಷಾತೀತವಾಗಿ ಎಲ್ಲರನ್ನು ಒಗ್ಗೂಡಿಸಿ ಕೊಂಡು ಪಟ್ಟಣದ ಮೂಲಭೂತ ಸೌಕರ್ಯ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ವೇಗ ನೀಡಬೇಕು ಎಂಬುದು ಪಟ್ಟಣದ ಜನರ ನಿರೀಕ್ಷೆಯಾಗಿದೆ. ನೂತನ ಅಧ್ಯಕ್ಷರ ಕಾರ್ಯಾವಧಿಯಲ್ಲಿ ಆಲಮೇಲ ಪಟ್ಟಣವು ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿ ಎಂಬ ಆಶಯ ಸಾರ್ವಜನಿಕರಲ್ಲಿ ಮೂಡಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button