🚨ಬ್ರೇಕಿಂಗ್ ನ್ಯೂಸ್🚨ಕುಂದಾಪುರದಲ್ಲಿ ಡ್ರಗ್ಸ್ ಭೂತದ ವಿರುದ್ಧ ಸಮರ – ಯುವ ಸಮೂಹಕ್ಕೆ ಎಚ್ಚರಿಕೆಯ ಘಂಟೆ..!

ಉಡುಪಿ/ಕುಂದಾಪುರದ ಜು.24

ಹದಿ ಹರೆಯದ ಎಳಚೆಗೂರು ಪ್ರಾಯ… ರೆಕ್ಕೆಬಿಚ್ಚಿ ಹಾರಬೇಕಾದ ಕನಸುಗಳ ಲೋಕ… ಕಣ್ಣುತುಂಬಾ ಸಾವಿರಾರು ಆಸೆಗಳು… ಆದರೆ, ಅದೇ ಕಣ್ಣುಗಳಲ್ಲಿ ಈಗ ನಶೆಯ ಕತ್ತಲು ಕವಿಯುತ್ತಿದೆಯಾ? ಯೋಚಿಸಿ! ಒಂದು ಕ್ಷಣ ನಿಂತು ಯೋಚಿಸಿ ಸ್ನೇಹಿತರೆ. ಇದು ಕೇವಲ ಒಂದು ಸಮಾರಂಭದ ಸುದ್ದಿಯಲ್ಲ, ನಮ್ಮ ನಿಮ್ಮೆಲ್ಲರ ಕಣ್ಣು ಮುಂದೆಯೇ ಜರುಗುತ್ತಿರುವ ಒಂದು ಮಾರಣ ಹೋಮದ ವಿರುದ್ಧದ ಎಚ್ಚರಿಕೆ.

ಉಡುಪಿ ಜಿಲ್ಲೆಯ ಸಾಂಸ್ಕೃತಿಕ ನಗರಿ ಕುಂದಾಪುರದಲ್ಲಿ ಇಂದು ರಕ್ಕಸ ರೂಪ ತಾಳಿ ಬಂದಿರುವ ಮಾದಕ ದ್ರವ್ಯ (Drugs) ಸಂಸ್ಕೃತಿಯ ವಿರುದ್ಧ ಪೊಲೀಸರು ಮತ್ತು ಶಿಕ್ಷಣ ಸಂಸ್ಥೆಗಳು ಕಹಳೆ ಮೊಳಗಿಸಿವೆ. “ಡ್ರಗ್ಸ್ ಬೇಡ ಬ್ರೋ! ಮಾದಕ ವಸ್ತುಗಳಿಗೆ NO – ಜೀವನಕ್ಕೆ YES” ಎಂಬ ದಿಟ್ಟ ಘೋಷಣೆಯೊಂದಿಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಕ್ರಮಕ್ಕೆ ಕುಂದಾಪುರದ ಪ್ರಸಿದ್ಧ ಭಂಡಾರಕಾಸ್ ಕಾಲೇಜು ರಂಗ ವೇದಿಕೆಯಾಗಿದೆ.

ನಶೆಯ ನಶೆಯಲ್ಲಿ ಕರಗುತ್ತಿದೆಯಾ ತಂಗಾಳಿಯೂರು..?

ಇವತ್ತು ಊರಿನಲ್ಲಿ ಬಾಯಿಗೆ ಬಂದಷ್ಟು ಹಣವಿದೆಯೋ, ಅಥವಾ ದಾರಿ ತಪ್ಪಿಸುವ ಕೆಟ್ಟ ಸಂಗವಿದೆಯೋ ಗೊತ್ತಿಲ್ಲ, ಆದರೆ ನಮ್ಮೂರಿನ ಎಳೇ ಹರೆಯದ ಹುಡುಗರು ಬಿಳಿಪುಡಿಯ ಸುಳಿಗೆ ಸಿಲುಕಿ ನುಜ್ಜುಗುಜ್ಜಾಗುತ್ತಿದ್ದಾರೆ. ಇದನ್ನು ತಡೆಯದಿದ್ದರೆ ನಾಳೆ ನಮ್ಮ ನಾಡಿನ ಭವಿಷ್ಯವೇ ಬೀದಿಗೆ ಬೀಳುತ್ತದೆ ಎನ್ನುವುದರಲ್ಲಿ ಎರಡ ಮಾತಿಲ್ಲ. ಇದೇ ಸತ್ಯವನ್ನು ಅರಿತುಕೊಂಡೇ ಕುಂದಾಪುರ ಪೊಲೀಸ್ ಠಾಣೆಯ ಹೆಮ್ಮೆಯ ಸಿಬ್ಬಂದಿ ಇಂದು ಖಾಕಿ ದಿರಿಸಿನಾಚೆಗೂ ಮಾನವೀಯ ಮುಖ ತೋರಿಸಿ, ಯುವಕರಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ.

ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಆರಂಭವಾದ ಈ ಮಹಾ ಜಾಗೃತಿ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ದೀಪ ಬೆಳಗಿತು. ಕುಂದಾಪುರ ಠಾಣೆಯ ಉಪನಿರೀಕ್ಷಕ ನಂಜಾನಾಯ್ಕ ಎನ್. ಅವರು ನೆರೆದಿದ್ದ ಹದಿ ಹರೆಯದವರಿಗೆ ಸ್ವಾಗತ ಕೋರುತ್ತಿದ್ದಂತೆ ಸಭೆಯಲ್ಲಿ ಒಂದು ರೀತಿಯ ಗಂಭೀರ ವಾತಾವರಣ ಆವರಿಸಿತ್ತು. ಪೊಲೀಸ್ ನಿರೀಕ್ಷಕ ಜಯರಾಮ್ ಡಿ ಗೌಡ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಆಡಿದ ಪ್ರತಿಯೊಂದು ಮಾತೂ ಯುವಕರ ಎದೆಗೆ ಚುಚ್ಚುವಂತಿತ್ತು. “ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ನಶೆಗೆ ದಾಸರಾಗಿ ಅದನ್ನು ಸುಟ್ಟು ಕೊಳ್ಳಬೇಡಿ” ಎಂಬ ಸಂದೇಶ ಅಲ್ಲಿ ಮಾರ್ದವಿಸಿತು.

ಖಾಕಿ ಪಡೆ ಮತ್ತು ವೈದ್ಯರ ಎಚ್ಚರಿಕೆ:-

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ IPS ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾನೂನಿನ ಕಠಿಣ ಹಸ್ತಕ್ಕೆ ಸಿಲುಕಿದರೆ ಭವಿಷ್ಯ ಅಂಧಕಾರವಾಗಲಿದೆ ಎಂಬ ಸತ್ಯವನ್ನು ಯುವ ಜನರ ಎದುರು ಬಿಚ್ಚಿಟ್ಟಿದ್ದಾರೆ. ಇನ್ನು ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ, ಪ್ರೇಮಾನಂದ ಹಾಗೂ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ, ಶ್ರೀ ಪ್ರಕಾಶ ತೋಳಾರ್ ಅವರು ನೀಡಿದ ವೈದ್ಯಕೀಯ ಮಾಹಿತಿಗಳು ಮೈ ಜುಮ್ಮೆನಿಸುವಂತಿತ್ತು. ಡ್ರಗ್ಸ್ ಹೇಗೆ ಮೆದುಳನ್ನು, ನರಮಂಡಲವನ್ನು ಕೊರೆದು ತಿನ್ನುತ್ತದೆ, ಮನುಷ್ಯನನ್ನು ಹೇಗೆ ಮಾನಸಿಕ ರೋಗಿಯನ್ನಾಗಿ ಮಾಡುತ್ತದೆ ಎಂಬುದನ್ನು ಅವರು ಅಂಕಿ ಅಂಶಗಳ ಸಮೇತ ವಿವರಿಸಿದಾಗ ಸಭಿಕರು ಮೌನವಾಗಿ ಬೆಚ್ಚಿ ಬಿದ್ದರು.

ಭಂಡಾರಕಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ, ಶುಭಕರ ಆಚಾರಿ ಹಾಗೂ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, “ನಮ್ಮೂರಿನ ಮಕ್ಕಳನ್ನು ಈ ಪಿಡುಗಿನಿಂದ ರಕ್ಷಿಸಲು ನಾವೆಲ್ಲರೂ ಒಂದಾಗಬೇಕು” ಎಂದು ಕಳಕಳಿಯ ಮನವಿ ಮಾಡಿದರು.

ಕುಂದಾಪುರ ಠಾಣೆಯ ಪಿಎಸ್‌ಐ ಪುಷ್ಪ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮಾದಕ ವಸ್ತುಗಳನ್ನು ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಿಸಿದರು. ಶಂಕರನಾರಾಯಣ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಧುಸೂದನ ಅವರ ಚುರುಕಿನ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು.

ಬದುಕು ಒಂದೇ, ಅದನ್ನು ಬಲಿ ಕೊಡಬೇಡಿ!

ಕೊನೆಗೊಂದು ಮಾತು… ಬದುಕು ನಮಗೆ ಸಿಕ್ಕಿರುವುದು ಒಂದೇ ಅವಕಾಶ. ಅದು ಯಾರೋ ನೀಡುವ ನಶೆಯ ಹೊಗೆಯಲ್ಲಿ ಕರಗಿ ಹೋಗಲು ಅಲ್ಲ. “ಡ್ರಗ್ಸ್ ನಿಮ್ಮ ಭವಿಷ್ಯ ಕದ್ದು ಕೊಳ್ಳುತ್ತದೆ, ನಿಮ್ಮ ಬದುಕು – ನಿಮ್ಮ ಆಯ್ಕೆ, ಆರೋಗ್ಯಕರ ಜೀವನಕ್ಕೆ ಹೆಜ್ಜೆ ಹಾಕಿ” ಎಂಬ ಎಚ್ಚರಿಕೆಯ ನುಡಿಗಳು ಇಂದಿನ ಈ ಕಾರ್ಯಕ್ರಮದಿಂದ ಹೊರ ಬಂದಿವೆ.

ಡ್ರಗ್ಸ್ ಬೇಡ, ಜೀವನ ಗೆಲ್ಲಿರಿ! ಇದು ಕೇವಲ ಘೋಷಣೆ ಯಾಗಬಾರದು, ಪ್ರತಿಯೊಬ್ಬ ಯುವ ಜನರ ಹೃದಯದ ಮಂತ್ರವಾಗಬೇಕು. ಆಗ ಮಾತ್ರ ಈ ಮಣ್ಣಿನ ಮಕ್ಕಳು ಉಳಿಯಲು ಸಾಧ್ಯ.

ವರದಿ:ಆರತಿ.ಗಿಳಿಯಾರು,ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button