ಕರುಣಾಮಯಿ ಅಮ್ಮ…..

ಈ ಭೂಮಿ ಮೇಲೆ ಹಲವಾರು ಸಂಬಂಧಗಳಿವೆ, ಆ ಎಲ್ಲಾ ಸಂಬಂಧಗಳಿಗೂ ಜನ್ಮ ನೀಡಿದ ಮಹಾ ತಾಯಿ ಹಡೆದವ್ವ. ಸಂಬಂಧಗಳಲ್ಲೇ ಅತಿ ಹೆಚ್ಚು ಮೌಲ್ಯಯುತವಾದ ಸಂಬಂಧ ತಾಯಿಯ ಸಂಬಂಧ. ಈ ಭೂಮಿ ಮೇಲೆ ಎಲ್ಲಾ ಮನೆಗಳಲ್ಲಿ ದೇವರು ನೆಲೆಸಲು ಆಗುವದಿಲ್ಲವೆಂದೇ ಪ್ರತಿ ಮನೆಗೆ ಒಂದೊಂದು ದೇವರನ್ನ ಭಗವಂತ ಕಲ್ಪಿಸಿದ್ದಾನೆ. ಆ ಕಣ್ಣಿಗೆ ಕಾಣುವ ದೇವರೇ ಜನ್ಮ ನೀಡಿದ ತಾಯಿ. ಮುಖದ ಕಣ್ಣಿಗೆ ಕಾಣುವ ಹಲವು ದೇವರಿಗಿಂತ ಮನದ ಕಣ್ಣಿಗೆ ಕಾಣುವ ತಾಯಿ ಎಂಬ ಒಬ್ಬ ದೇವರೇ ಶ್ರೇಷ್ಠ. ದೇವರಿಗೂ ಕೂಡ ಜನ್ಮ ನೀಡಿದವಳು ತಾಯಿ, ಅದಕ್ಕೆ ಹೇಳುವುದು ತಾಯಿಯೇ ದೇವರೆಂದು. ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಕೂಡ ತಾಯಿಯ ಬಗ್ಗೆ ಅಮೋಘವಾದ ವೈಶಿಷ್ಟ್ಯತೆಯನ್ನ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಪ್ರತಿ ಭಾಷೆಯಲ್ಲಿ ತಾಯಿಯನ್ನು ಉಚ್ಚಾರಣೆ ಮಾಡುವಾಗ ಅಮ್ಮ ಎಂಬ ಅಕ್ಷರ ಬಂದೇ ಬರುತ್ತದೆ. ಹೆತ್ತವರಿಗೆ ಕುತ್ತು ತರದ ಮಗಳಾಗಿ, ಅತ್ತೆ ಮಾವರಿಗೆ ಪ್ರೀತಿಯ ಸೊಸೆಯಾಗಿ, ಗಂಡನಿಗೆ ಪ್ರೀತಿಯ ಸತಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ಸಂಬಂಧಿಕರಿಗೆ ಸೌಜನ್ಯದ ಸಂಕೇತವಾಗಿ, ಇಡೀ ಮನುಕುಲಕ್ಕೆ ಮಾದರಿಯಾಗಿ, ಬದುಕಿನ ಸರ್ವಸ್ವವನ್ನೇ ತ್ಯಾಗ ಮಾಡಿ ಮಹಾತ್ಯಾಗಿಯಾಗಿ ದೇವರಾಗಿ ಕಾಣುವ ಒಂದೇ ಒಂದು ಜೀವವೆಂದರೆ ಅದು ಅಮ್ಮ. ಬೆಳಗಿನಿಂದ ಹಿಡಿದು ರಾತ್ರಿಯವರೆಗೂ ಕೂಡ ಪ್ರತಿ ಕೆಲಸ ಕಾರ್ಯಗಳಲ್ಲಿ ನಮಗೆ ಸಹಾಯ ಮಾಡುತ್ತಾ, ನಮ್ಮೆಲ್ಲಾ ಆಗು ಹೋಗುಗಳಿಗೆ ಕಾರಣೀಭೂತರು ಮಹಾನ ಚೇತನ ತಾಯಿ. ಮಾತೃತ್ವದ ಬಂಧ ಅಂದರೆ ತಾಯಿ ಮತ್ತು ಮಕ್ಕಳ ನಡುವೆ ವಿಶೇಷ ಬಾಂಧವ್ಯವಿದೆ. ಅವಳು ನಮ್ಮ ಬಗ್ಗೆ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾಳೆ ನಾವು ಏನನ್ನಾದರೂ ಹೇಳುವ ಮೊದಲು ತಾಯಿ ನಮ್ಮ ಮನಸ್ಸನ್ನು ಓದುತ್ತಾರೆ ಮತ್ತು ನಮ್ಮ ಅಗತ್ಯ ವಸ್ತುಗಳನ್ನು ನಮ್ಮ ಮುಂದೆ ಇಡುತ್ತಾರೆ ತಾಯಿ ಯಾಗುವುದು ಸ್ವತಃ ಒಂದು ವಿಶೇಷ ವಿಷಯ. ಆದರೆ ನಾವು ಕೂಡ ತಾಯಿಯನ್ನು ಅರ್ಥ ಮಾಡಿ ಕೊಳ್ಳಬೇಕು. ಅವಳ ನಿಸ್ವಾರ್ಥತೆಯಲ್ಲಿ ಅಡಗಿರುವ ನೋವು ದಣಿವು ಮತ್ತು ಹೋರಾಟವನ್ನು ಸಹ ಅರ್ಥ ಮಾಡಿ ಕೊಳ್ಳಬೇಕು. ಮಹಿಳೆ ತನ್ನ ಜೀವನದಲ್ಲಿ ಹೆಂಡತಿ, ಮಗಳು, ಸೊಸೆ ಹೀಗೆ ಎಷ್ಟೋ ಸಂಬಂಧಗಳನ್ನು ಆಡುತ್ತಾಳೆ ಎಂದು ತಿಳಿದಿಲ್ಲ. ಆದರೆ ಎಲ್ಲ ಸಂಬಂಧಗಳಲ್ಲಿ ಹೆಚ್ಚು ಗೌರವವನ್ನು ಪಡೆಯಲು ತಾಯಿಯ ಸಂಬಂಧವಾಗಿದೆ ಮಾತೃತ್ವವು ಪದಗಳಲ್ಲಿ ವಿವರಿಸಲಾಗದ ಬಂಧನವಾಗಿದೆ. ತಾಯಿ ಆಶೀರ್ವಾದವಿಲ್ಲದೆ ಬದುಕುವುದು ನಮ್ಮ ಕಲ್ಪನೆಗೂ ಮೀರಿದ್ದು. ತಾಯಿಯ ಪ್ರೀತಿಯನ್ನು ಬೇರೆಯವರಿಗೆ ಹೋಲಿಸುವುದು ಸೂರ್ಯನ ಮುಂದೆ ದೀಪವನ್ನು ಬೆಳಗಿಸಿದಂತೆ.ಮಕ್ಕಳು ಎಷ್ಟೇ ನೋವು ಕೊಟ್ಟರು ಕಷ್ಟ ಕೊಟ್ಟರು, ಅದನ್ನ ಮನಸ್ಸಿನಲ್ಲಿಯೇ ಸಹಿಸಿಕೊಂಡು ಮುಖದಲ್ಲಿ ಮುಗುಳ್ನಗುತ್ತ ಎಲ್ಲರೊಂದಿಗೆ ನಗು ಮುಖದಿ ಜೀವಿಸುವ ಕುಟುಂಬದ ಯಜಮಾನಿ ಅಮ್ಮ. ತಂದೆ ಇಲ್ಲದಿದ್ದರೆ ಬದುಕಬಹುದೇನೋ ಆದರೆ ತಾಯಿ ಇರದಿದ್ದರೆ ಆ ಬದುಕಿಗೆ ಅರ್ಥವೇ ಇರುವುದಿಲ್ಲ. ತಾಯಿ ಇರದಿದ್ದರೆ ಮಾತ್ರ ನಾವು ಅನಾಥರಾಗುತ್ತೇವೆ ಎಂಬ ಸತ್ಯ ಅರಿಯಬೇಕಾಗಿದೆ. ತಬ್ಬಲಿಯಾಗುವ ಮುಂಚೆ ಹೆತ್ತ ತಾಯಿಯನ್ನ ತಬ್ಬಿಕೊಂಡು, ಅವಳ ಮಡಿಲ ಮೇಲೆ ಮಲಗಿ ಸ್ವರ್ಗದ ಅನುಭವ ಪಡೆಯುವ ಮಕ್ಕಳೇ ಶ್ರೇಷ್ಠರು ಈ ಭಾಗ್ಯ ಕೆಲವು ಜನರಿಗೆ ಸಿಗುವುದೇ ಇಲ್ಲಾ. ನಾವು ಯಾರಿಗೇ ಮೋಸ ಮಾಡಿದರು ಕೂಡ ಭಗವಂತ ಕ್ಷಮಿಸಬಹುದು, ಆದರೆ ಹೆತ್ತ ತಾಯಿಗೆ ಮೋಸ ಮಾಡಿದರೆ ಭಗವಂತ ಕ್ಷಮಿಸುವುದೇ ಇಲ್ಲ.ನವಮಾಸ ಹೊತ್ತು, ನೋವಿನಲ್ಲಿ ಹೆತ್ತು, ಎರಡು ಮೂರು ವರ್ಷಗಳ ಕಾಲ ಲಾಲನೆ ಪಾಲನೆ ಮಾಡಿದ ತಾಯಿಗೆ ಚರ್ಮದಿ ಚಪ್ಪಲಿ ಮಾಡಿಸಿ ಕೊಟ್ಟರೂ ತಾಯಿಯ ಋಣ ತೀರಿಸಲಾಗದು.ತಾಯಿ ಎಂಬ ಪದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ. ಈ ಪದವು ಸ್ವತಃ ಸಂಪೂರ್ಣವಾಗಿದೆ. ತಾಯಿ ಪದವನ್ನು ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಅಸಹನೀಯ ದೈಹಿಕ ಯಾತನೆಯ ನಂತರ ಮಗುವಿಗೆ ಜನ್ಮ ನೀಡುವ ತಾಯಿಗೆ ದೇವರ ಸ್ಥಾನವನ್ನು ನೀಡಲಾಗುತ್ತದೆ ಏಕೆಂದರೆ ದೇವರು ತಾಯಿ ಮೂಲಕ ಇಡೀ ಸೃಷ್ಟಿಯನ್ನು ಸೃಷ್ಟಿಸಿದ್ದಾನೆ. ತಾಯಿ ಜಗತ್ತಿನಲ್ಲಿ ದೇವರ ಮತ್ತೊಂದು ರೂಪ, ನಮ್ಮ ದುಃಖಗಳನ್ನು ತೆಗೆದು ಕೊಂಡು ನಮ್ಮನ್ನು ಪ್ರೀತಿಸುವ ಮತ್ತು ಒಳ್ಳೆಯ ವ್ಯಕ್ತಿ ಯಾಗಿರುತ್ತಾಳೆ. ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ ಎಂದು ನಂಬಲಾಗಿದೆ, ಆದರಿಂದ ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ. ಆದರೂ ತಾಯೊಂದಿಗೆ ಕೆಲವು ಪ್ರಮುಖ ಕ್ಷಣಗಳನ್ನು ವಿವರಿಸಿಬಹುದು. ತನ್ನ ಮಕ್ಕಳ ಎಲ್ಲ ದುಃಖವನ್ನು ತೆಗೆದು ಕೊಂಡು ಅವರಿಗೆ ಪ್ರೀತಿ ಮತ್ತು ರಕ್ಷಣೆಯನ್ನು ನೀಡುವ ದೇವರ ರೂಪದಲ್ಲಿ ತಾಯಿ ಈ ಜಗತ್ತಿನಲ್ಲಿ ಅತ್ಯಂತ ವಿಭಿನ್ನ ವ್ಯಕ್ತಿ. ನಮ್ಮ ಧರ್ಮ ಗ್ರಂಥಗಳಲ್ಲಿ ತಾಯಿಯನ್ನು ನಾವು ದೇವತೆಯಂತೆ ಪೂಜಿಸುತ್ತೇವೆ. ಬದುಕಿಗೆ ಅರ್ಥ ನೀಡಿ, ಅಕ್ಷರದ ಮೊದಲ ಗುರುವಾಗಿ, ಶುದ್ಧ ನಡೆತೆಗೆ ದಾರಿ ದೀಪವಾಗಿ, ಮಾನವೀಯತೆಯ ಬದುಕಿಗೆ ಮಾರ್ಗ ದರ್ಶಕರಾಗಿ, ಪ್ರತಿ ಮಗುವಿನ ಏಳಿಗೆಗೆ ಸ್ಪೂರ್ತಿಯ ಚಿಲುಮೆಯಾಗಿ, ಸದಾಕಾಲ ಮಕ್ಕಳ ಬಗ್ಗೆ ಚಿಂತಿಸುವ ಜೀವ ಅಮ್ಮ. ತಾಯಿಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳು ಕೆಟ್ಟು ಹೋಗದಂತೆ ಬೆಳೆಸುವ ಕರುಣಾಮಯಿ ಅಮ್ಮ. ಉಸಿರು ಹೆಸರು ಬದುಕು ಕೊಡುವವಳುಹಸಿದಾಗ ಹಸಿವ ನೀಗಿಸುವವಳುಎಲ್ಲವನ್ನು ಸಹಿಸಿ ಸಲುವವಳುತಪ್ಪು ಮಾಡಿದಾಗ ತಿದ್ದಿ ತೀಡುವವಳುಬೈಗುಳದಲ್ಲೂ ಪ್ರೀತಿ ಕೊಡುವವಳುಬದುಕಿನ ನೀತಿ ನಿಯಮಗಳ ಕಲಿಸುವವಳುಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಲ್ಲುವವಳು ನಾವು ಗೆದ್ದಾಗ ತಾನೆ ಗೆದ್ದಂತೆ ಸಂಭ್ರಮಿಸುವವಳುನಾವು ಸೋತಾಗ ಆತ್ಮಸ್ಥೈರ್ಯ ತುಂಬುವವಳುನೋವಿನಲ್ಲೂ ನಗು ಹಂಚುವವಳುಅಂತರಂಗದಲ್ಲಿ ಕಲ್ಮಶವಿಲ್ಲದವಳು ಕನಸಿನಲ್ಲೂ ನಮ್ಮನ್ನು ಕಾಯುವಳು ಅವಳೇ ಅಮ್ಮ. ತಾಯಿ ನಮಗೆ ಜನ್ಮ ನೀಡುವುದು ಮಾತ್ರವಲ್ಲದೆ ನಮ್ಮನ್ನು ನೋಡಿಕೊಳ್ಳುವವಳು. ತಾಯಿಯೇ ಈ ಸಂಬಂಧಕ್ಕೆ ಪ್ರಪಂಚದಲ್ಲಿ ಅತ್ಯುನ್ನತ ಗೌರವವನ್ನು ನೀಡಲಾಗುತ್ತದೆ. ಭಾರತಮಾತೆ, ಭೂಮಾತೆ,ಮಾತೃಭೂಮಿ, ಪ್ರಕೃತಿ ಮಾತೆ,ಗೋಮಾತೆ ಇತ್ಯಾದಿ ಪ್ರಪಂಚದ ಹೆಚ್ಚಿನ ಜೀವ ನೀಡುವ ಮತ್ತು ಗೌರವಾನ್ವಿತ ವಸ್ತುಗಳಿಗೆ ತಾಯಿಯ ಹೆಸರನ್ನು ಇಡಲು ಇದು ಕಾರಣವಾಗಿದೆ. ಇದರೊಂದಿಗೆ ತಾಯಿಯನ್ನು ಪ್ರೀತಿ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾಗಿದೆ.ಹುಟ್ಟಿನಿಂದ ಚಟ್ಟದವರೆಗೆ ಮಕ್ಕಳಿಗೆ ಕೊಟ್ಟ ದುಡ್ಡಿಗೆ ಲೆಕ್ಕ ಕೇಳದ ಮಾತೃ ವಾತ್ಸಲ್ಯದ ಸಹನಾ ಮೂರ್ತಿ ಅಮ್ಮ. ಪದಗಳಿಗೆ ಸಿಗದ, ವರ್ಣಿಸಲು ಸಾಧ್ಯವಾಗದ ಹೆಮ್ಮೆಯ ಆತ್ಮೀಯ ನಲ್ಮೆಯ ಪ್ರೀತಿಯ ಗೋಪುರವಿರದ, ಗುಡಿ ಇರದ ದೇವರು ಅಮ್ಮ. ಬಿದ್ದಾಗ ಅಮ್ಮ ಎದ್ದಾಗ ಅಮ್ಮ ಪದೇ ಪದೇ ನೆನಪಾಗುವ ಪದವೇ ಅಮ್ಮ ಕಾರಣ ಅವಳಿಂದಲೇ ಸಿಕ್ಕಿದೆ ನಮಗೆ ಜನ್ಮ. ಹೆತ್ತ ತಾಯಿಗೆ ನೋವು ಕೊಡದೆ, ಅವಳನ್ನು ಪ್ರೀತಿಯಿಂದ ನೋಡಿ ಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳದಾಗಿದೆ. ಹೆತ್ತ ತಾಯಿಯು ಹತ್ತು ದೇವರಿಗೆ ಸಮಾನ. ನೆನಪಿರಲಿ ಈ ಭೂಮಿಯ ಮೇಲೆ ಬ್ರಹ್ಮ ಬರೆಯುವ ಹಣೆಬರವನ್ನ ತಾಯಿ ಏನಾದರೂ ಬರೆದಿದ್ದರೆ ಯಾವ ಪಾಪಿ ವ್ಯಕ್ತಿಯು ಕೂಡ ಈ ಭೂಮಿ ಮೇಲೆ ಇರುತ್ತಿರಲಿಲ್ಲ.

ಶ್ರೀ ಮುತ್ತು.ಯ.ವಡ್ಡರ

( ಶಿಕ್ಷಕರು, ಹಿರೆಮಾಗಿ)

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button