🚨ಬ್ರೇಕಿಂಗ್ ನ್ಯೂಸ್, ಕುಂದಾಪುರ KSRTC ಬಸ್ ನಿಲ್ದಾಣ ನರಕ ಸದೃಶ, ಅಧಿಕಾರಿಗಳ ಭಂಡ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹೈರಾಣು! – ಹೋಟೆಲ್‌ನಲ್ಲೂ ಗಬ್ಬು ವಾಸನೆ: ನಿದ್ದೆಗೆ ಜಾರಿದರೇ ಆಹಾರ ಅಧಿಕಾರಿಗಳು..?🚨

ಕುಂದಾಪುರ ಮೇ.27

ಉಡುಪಿ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಂದಾಪುರದ KSRTC ಬಸ್ ನಿಲ್ದಾಣವು ಸದ್ಯ ಸಾರ್ವಜನಿಕರ ಪಾಲಿಗೆ ನರಕದ ದರ್ಶನ ಮಾಡಿಸುತ್ತಿದೆ. ಅಧಿಕಾರಿಗಳ ಹಾಗೂ ಪುರ ಸಭೆಯ ಘೋರ ನಿರ್ಲಕ್ಷ್ಯದಿಂದಾಗಿ ಇಡೀ ಬಸ್ ನಿಲ್ದಾಣದ ಆವರಣ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಜ್ಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಕುಂದಾಪುರ ಬಸ್ ನಿಲ್ದಾಣದ ದುಸ್ಥಿತಿಯ ಕಣ್ಣೀರಿನ ಕಥೆ ಇಲ್ಲಿದೆ.

🛑 ಕಸದ ರಾಶಿ, ಗಿಡಗಂಟಿಗಳ ಹಾವಳಿ..!

ಬಸ್ ನಿಲ್ದಾಣದ ಕಾಂಪೌಂಡ್ ಸುತ್ತಮುತ್ತ ಕಾಡಿನಂತೆ ಗಿಡ ಗಂಟೆಗಳು ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಪ್ಲಾಸ್ಟಿಕ್ ಹಾಗೂ ಸಾರ್ವಜನಿಕರು ಎಸೆದ ತ್ಯಾಜ್ಯಗಳು ಕೊಳೆತು ನಾರುತ್ತಿವೆ. ಬಸ್ಸಿಗಾಗಿ ಗಂಟೆ ಗಟ್ಟಲೆ ಕಾಯುವ ಸಾರ್ವಜನಿಕರು ಈ ತೀವ್ರ ದುರ್ವಾಸನೆಯನ್ನು ನುಂಗಿಕೊಂಡೇ ಕುಳಿತು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

🤢 ಪಕ್ಕದಲ್ಲೇ ಇರುವ ಹೋಟೆಲ್ ಕೂಡ ಕೊಳಕು:-

ಆಹಾರ ಅಧಿಕಾರಿಗಳು ನಿದ್ದೆಯಲ್ಲಿದ್ದಾರಾ?ನಿಲ್ದಾಣದ ಆವರಣದ ಪಕ್ಕದಲ್ಲೇ ಹೋಟೆಲ್ ಇದ್ದು, ಅದರ ಸುತ್ತಮುತ್ತಲೂ ಕೊಳಚೆ ನೀರು ಹಾಗೂ ಗಬ್ಬು ವಾಸನೆ ಆವರಿಸಿದೆ. ಇಂತಹ ಕಸದ ರಾಶಿ ಮತ್ತು ನರಕದ ಮಧ್ಯೆಯೇ ಸಾರ್ವಜನಿಕರು ಆಹಾರ ಸೇವಿಸ ಬೇಕಾದ ದುಸ್ಥಿತಿ ಬಂದೊದಗಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಹೋಟೆಲ್ ಮತ್ತು ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸ ಬೇಕಾದ “ಆಹಾರ ಸುರಕ್ಷತಾ ಅಧಿಕಾರಿಗಳು ತಾವೇ ನಿರ್ಲಕ್ಷ್ಯದ ನಿದ್ದೆಗೆ ಜಾರಿದ್ದಾರಾ?” ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

🦟 ಡೆಂಗ್ಯೂ, ಮಲೇರಿಯಾ ಭೀತಿ..!

ಸ್ವಚ್ಛತೆಯ ಹೆಸರೇ ಇಲ್ಲದ ಈ ಆವರಣದಲ್ಲಿ ಸೊಳ್ಳೆಗಳು ಮತ್ತು ಕ್ರಿಮಿಕೀಟಗಳು ರಾಜಾರೋಷವಾಗಿ ಸಂತಾನೋತ್ಪತ್ತಿ ಮಾಡುತ್ತಿವೆ. ಕರಾವಳಿ ಭಾಗದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳ ಭಯವಿರುವಾಗ, ದಿನವಿಡೀ ಬಸ್ಸಿಗಾಗಿ ಕಾದು ಕುಳಿತು ಕೊಳ್ಳುವ ಸಾರ್ವಜನಿಕರಿಗೆ “ಡೆಂಗ್ಯೂ, ಮಲೇರಿಯಾ” ದಂತಹ ಮಾರಕ ಕಾಯಿಲೆಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

🤮 ಗಬ್ಬು ನಾರುವ ಶೌಚಾಲಯಗಳು..!

ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳತೀರದು. ಸರಿಯಾದ ನೀರಿನ ಸೌಲಭ್ಯ ಮತ್ತು ನಿರ್ವಹಣೆ ಇಲ್ಲದೆ ಶೌಚಾಲಯಗಳು ಗಬ್ಬು ನಾರುತ್ತಿದ್ದು, ಇಡೀ ನಿಲ್ದಾಣದ ಒಳಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

🛑 ಜರ್ದಾ ತಿಂದು ಉಗುಳುವ ಸಿಬ್ಬಂದಿ – ಕಣ್ಣು ಮುಚ್ಚಿದ ಅಧಿಕಾರಿಗಳು..!

ಬಸ್ ನಿಲ್ದಾಣದ ಗೋಡೆಗಳು ಮತ್ತು ಮೂಲೆಗಳು ಜರ್ದಾ, ಪಾನ್ ಮಸಾಲಾದ ಕೆಂಪು ಬಣ್ಣದಿಂದ ರಂಗಾಗಿವೆ. ಚಾಲಕರಿಂದ ಹಿಡಿದು ನಿರ್ವಾಹಕರ ವರೆಗೂ, ಕೆಲವು ಬೇಜವಾಬ್ದಾರಿ ಸಿಬ್ಬಂದಿಗಳು ಜರ್ದಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾ ನಿಲ್ದಾಣವನ್ನು ಮತ್ತಷ್ಟು ಕೊಳಕು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸ ಬೇಕಾದ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಕಚೇರಿಯ ಎಸಿ ರೂಮಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ.

“ನಮ್ಮ ಟ್ಯಾಕ್ಸ್ ಹಣಕ್ಕೆ ಬೆಲೆ ಇಲ್ಲವೇ..?”

ಸಾರ್ವಜನಿಕರ ಆಕ್ರೋಶ “ನಾವು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಆದರೆ ಉಡುಪಿ ಜಿಲ್ಲಾಡಳಿತ ಮತ್ತು ಕುಂದಾಪುರ ಪುರಸಭೆ ನಮಗೆ ನೀಡುತ್ತಿರುವ ಕೊಡುಗೆ ಇದುವೇ? ರೋಗ ತರುವ ಈ ನಿಲ್ದಾಣಕ್ಕೆ ಬರಲು ಭಯವಾಗುತ್ತಿದೆ. ಕಸದ ಪಕ್ಕದಲ್ಲೇ ಇರುವ ಹೋಟೆಲ್‌ಗಳ ಆಹಾರ ತಿಂದು ನಮ್ಮ ಆರೋಗ್ಯ ಕೆಡಬೇಕಿದೆ” ಎಂದು ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರು ಉಡುಪಿ ಜಿಲ್ಲಾಡಳಿತದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

🔔ರಾಜ್ಯ ಮಟ್ಟದ ಗಮನಕ್ಕೆ:

ಸ್ವಚ್ಛ ಭಾರತ್ ಅಭಿಯಾನದ ಭಾಷಣ ಬಿಗಿಯುವ ಅಧಿಕಾರಿಗಳೇ, ಒಮ್ಮೆ ಕುಂದಾಪುರದ ಈ ನರಕ ಸದೃಶ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಕಷ್ಟ ಆಲಿಸಿ. ಜಿಲ್ಲಾಡಳಿತ, ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ತಕ್ಷಣವೇ ಎಚ್ಚೆತ್ತು ಕೊಂಡು ಈ ನಿಲ್ದಾಣದ ಕಾಯಕಲ್ಪಕ್ಕೆ ಮುಂದಾಗುತ್ತಾರಾ? ಅಥವಾ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ವರೆಗೂ ಕಾಯುತ್ತಾರಾ? ಕಾದು ನೋಡ ಬೇಕಿದೆ.

– ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button