ನೇತಾಜಿ ಶಾಲೆಯಿಂದ ಜ್ಞಾನ ಜ್ಯೋತಿ ಶಾಲೆಯ ವರೆಗೆ – ರಸ್ತೆ, ಚರಂಡಿ ನಿರ್ಮಿಸಲು ಆಗ್ರಹ.

ಮಾನ್ವಿ ಜು.16

ಪಟ್ಟಣದ ವಾರ್ಡ್ ನಂ.2ರ ನೇತಾಜಿ ಶಾಲೆಯ ಹಿಂಭಾಗದಿಂದ ವಾರ್ಡ್ ನಂ.3 ರ ಜ್ಞಾನ ಜ್ಯೋತಿ ಶಾಲೆಯ ವರೆಗೆ ಚರಂಡಿ ಹಾಗೂ ರಸ್ತೆ ನಿರ್ಮಿಸಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಪುರಸಭೆ ಕಚೇರಿಯಲ್ಲಿ ವ್ಯವಸ್ಥಾಪಕ ನರಸಿಂಹಲು ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕನ್ನಡಸೇನೆ ಕರ್ನಾಟಕದ ತಾಲೂಕು ಅಧ್ಯಕ್ಷ ಬಸವರಾಜ ಮೈಲಾರಿ, ವಾರ್ಡ್ ನಂ.2 ರ ನೇತಾಜಿ ಶಾಲೆಯ ಹಿಂಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕಲುಷಿತ ನೀರು ರಸ್ತೆ ಬದಿಯಲ್ಲಿ ನಿಂತು ಕೊಳಚೆ ವಾತಾವರಣ ನಿರ್ಮಾಣವಾಗಿದೆ.

ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಮಲೇರಿಯಾ, ಕಾಲರಾ, ಅತಿಸಾರ, ವಾಂತಿ-ಭೇದಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕನ್ನಡದ ಕಟ್ಟಾಳು ದೊಡ್ಡಪ್ಪ ಹೂಗಾರ ಮಾತನಾಡಿ, ವಾರ್ಡ್ ನಿವಾಸಿಗಳು ನಿಯಮಿತವಾಗಿ ಪುರಸಭೆಗೆ ಕಂದಾಯ ಪಾವತಿಸುತ್ತಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಜನ ಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳು ಈ ಭಾಗದ ಸಮಸ್ಯೆಗಳತ್ತ ನಿರ್ಲಕ್ಷ್ಯ ವಹಿಸಿರುವುದರಿಂದ ವಾರ್ಡ್ ನಂ.2 ಮತ್ತು 3 ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ ಮಾತನಾಡಿ, ಮಳೆಗಾಲದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಮುಂಭಾಗ ಹಾಗೂ ಒಳ ಭಾಗಕ್ಕೂ ನೀರು ನುಗ್ಗಿ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ನೇತಾಜಿ ಶಾಲೆಯ ಹಿಂಭಾಗದಿಂದ ಜ್ಞಾನ ಜ್ಯೋತಿ ಶಾಲೆಯ ವರೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು. ಇಲ್ಲವಾದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ವತಿಯಿಂದ ಪುರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ವೀರೇಶ ವಿಶ್ವಕರ್ಮ, ನಗರ ಘಟಕದ ಅಧ್ಯಕ್ಷ ಶೇಖ್ ಮುಸ್ತಫಾ, ಸದಸ್ಯರಾದ ಸಿದ್ದಪ್ಪ, ಸಾಜೀದ್, ಸುದರ್ಶನ ಪೂಜಾರಿ, ಮಂಜುನಾಥ ಬಂಡಿ, ಶ್ರೀಶೈಲಾ ಮಂಜುನಾಥ, ಕೃಷ್ಣ ನಾಯಕ, ಭೀಮೇಶ ನಾಯಕ, ಹನುಮಂತ ನಾಯಕ, ನೂರ ಮಹ್ಮದ್, ಅಝರುದ್ದೀನ್, ಸಂಜೀವ ನಾಯಕ, ಗೋಪಾಲ ನಾಯಕ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button