ಎನ್.ಎಸ್ ಬೋಸರಾಜುಗೆ ಸಚಿವ ಸ್ಥಾನದ ಜೊತೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ನೀಡಬೇಕೆಂದು – ಕಾಂಗ್ರೆಸ್ ಮುಖಂಡರ ಆಗ್ರಹ.

ಮಾನ್ವಿ ಜೂ.19

ಪಟ್ಟಣದ ಬಸವ ವೃತ್ತದಲ್ಲಿ ಎನ್.ಎಸ್ ಬೋಸರಾಜು ಅಭಿಮಾನಿ ಬಳಗದ ವತಿಯಿಂದ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಎನ್.ಎಸ್ ಬೋಸರಾಜು ಅವರನ್ನು ರಾಜ್ಯ ಸಚಿವ ಸಂಪುಟದಲ್ಲಿ ಮುಂದುವರಿಸ ಬೇಕು ಹಾಗೂ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಸಾವಿರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಸೈಯದ್ ಖಾಲಿದ್ ಖಾದ್ರಿ ಅವರು, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಎನ್.ಎಸ್ ಬೋಸರಾಜು ಅವರು ರಾಯಚೂರು ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ರಾಯಚೂರು-ಸಿಂಧನೂರು ಚತುಷ್ಪಥ ರಸ್ತೆ, ವಿಮಾನ ನಿಲ್ದಾಣ ನಿರ್ಮಾಣ, ಕೃಷ್ಣಾ ನದಿಗೆ ಹೊಸ ಸೇತುವೆ, ಚಿಕ್ಕಪಂಚಲಿ ಬ್ರಿಡ್ಜ್-ಕಮ್-ಬ್ಯಾರೇಜ್ ಹಾಗೂ ಜಿಲ್ಲೆಯಾದ್ಯಂತ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ರಾಜಾ ಸುಭಾಷ್ ಚಂದ್ರ ನಾಯಕ ಮಾತನಾಡಿ, ಮಾನ್ವಿಯಲ್ಲಿ ಅಮೃತ್ 2.0 ಯೋಜನೆಯಡಿ 7.5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು, ಸುಮಾರು 87 ರಿಂದ 90 ಕೋಟಿ ರೂ. ವೆಚ್ಚದಲ್ಲಿ ಮಾನ್ವಿ ಕೆರೆಯ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾರ್ಯ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿ ಹಾಗೂ ಕಾಲುವೆಗಳ ಗೇಟ್‌ಗಳ ದುರಸ್ತಿ ಕಾರ್ಯದ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿರುವ ಬೋಸರಾಜು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಮುತ್ಸದ್ದಿ ನಾಯಕರು ಎಂದು ಹೇಳಿದರು.

ಎನ್.ಎಸ್ ಬೋಸರಾಜು ಅಭಿಮಾನಿ ಬಳಗದ ಸಂಚಾಲಕರಾದ ಮಾಜಿ ಎಪಿಎಂಸಿ ಸದಸ್ಯ ಶಿವರಾಜ್ ನಾಯಕ ಮಾತನಾಡಿ, ಎನ್.ಎಸ್ ಬೋಸರಾಜು ಅವರು ಶಾಸಕರಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತೆಲಂಗಾಣ ಮತ್ತು ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಕಾರ್ಯನಿರ್ವಹಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಾಲಸ್ವಾಮಿ ಕೋಡ್ಲಿ ಮಾತನಾಡಿ, ಎನ್.ಎಸ್ ಬೋಸರಾಜು ಅವರು ಜಿಲ್ಲೆಗೆ ಬಹುಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. 2028 ರ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರ ನಾಯಕತ್ವ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ ಅಮರೇಶಪ್ಪ ವಕೀಲರು, ಶರಣಪ್ಪ ನಾಯಕ ಗುಡದಿನ್ನಿ, ಕುರ್ಡಿ ಚಂದ್ರಶೇಖರ್, ಕೆ.ಬಸವಂತಪ್ಪ, ತಿಪ್ಪಣ್ಣ ಬಾಗಲವಾಡ, ಮಹಾಂತೇಶ ಸ್ವಾಮಿ ರೌಡೂರು, ಅಮ್ಜದ್ ಖಾನ್, ಸುಖಮುನಿ, ಶರಣೆಗೌಡ, ಸೂರ್ಯ ನಾರಾಯಣ ಯಾದವ್, ಸತ್ತಾರ್ ಬಂಗ್ಲೆವಾಲೆ ಸೇರಿದಂತೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button