ಎಂ.ರಾಮಲದಿನ್ನಿ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್ ಮಂಜುನಾಥ ಭೋಗಾವತಿ ಸ್ಥಳೀಯರೊಂದಿಗೆ ಚರ್ಚಿಸಿದರು – ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.
ಕವಿತಾಳ ಜೂ.19

ಮಸ್ಕಿ ತಾಲ್ಲೂಕಿನ ಎಂ.ರಾಮಲದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಹಶೀಲ್ದಾರ್ ಮಂಜುನಾಥ ಭೋಗಾವತಿ, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಕಾನನಪ್ರಭು ಮತ್ತು ತಾಲ್ಲೂಕು ಅಧಿಕಾರಿ ಕುಬೇರಪ್ಪ ಅವರು ಬುಧವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು.
ಬಿಸಿಯೂಟ ಅಡುಗೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವಿನ ವೈಯಕ್ತಿಕ ಕಲಹದ ಹಿನ್ನೆಲೆ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಈ ಬಗ್ಗೆ ‘ವೈಯಕ್ತಿಕ ಕಲಹ ಮಕ್ಕಳನ್ನು ಶಾಲೆಗೆ ಕಳುಹಿಸದ ಗ್ರಾಮಸ್ಥರು’ ಎಂಬ ಶೀರ್ಷಿಕೆಯಡಿ ವಿವಿಧ ಪತ್ರಿಕಾ ವರದಿಗಳು ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿ ಮಾನ್ವಿ ಬಿ.ಇ.ಓ ಚಂದ್ರಶೇಖರ ದೊಡ್ಡಮನಿ ಮಂಗಳವಾರ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚಿಸಿ ಹಾಲಾಪುರ ಸರ್ಕಾರಿ ಶಾಲೆಯಿಂದ ಬಿಸಿಯೂಟ ತರಿಸಲು ವ್ಯವಸ್ಥೆ ಮಾಡಿದ್ದರು. ಗ್ರಾಮಸ್ಥರೊಂದಿಗೆ ಚರ್ಚಿಸಿದ ತಹಶೀಲ್ದಾರ್ ಮಂಜುನಾಥ ಭೋಗಾವತಿ ಅವರು ವೈಯಕ್ತಿಕ ಜಗಳವನ್ನು ಶಾಲೆಯವರೆಗೆ ತರುವುದು ಸರಿಯಲ್ಲ.
ಬಿಸಿಯೂಟ ತಯಾರಿಸಿದ ನಂತರ ಮುಖ್ಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಸೇರಿದಂತೆ ಅಧಿಕಾರಿಗಳು ಸೇವಿಸಿದ ಬಳಿಕವಷ್ಟೆ ಮಕ್ಕಳಿಗೆ ನೀಡಲಾಗುವುದು ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸ ಬೇಕು ಮತ್ತು ಅಡುಗೆ ಸಿಬ್ಬಂದಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅದನ್ನು ಒಪ್ಪದ ಗ್ರಾಮಸ್ಥರು ಅಡುಗೆ ಸಿಬ್ಬಂದಿಯನ್ನು ಮುಂದುವರಿಸಿದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಈ ಬಗ್ಗೆ ಸ್ಥಳೀಯರು ಮತ್ತು ಬಿಸಿಯೂಟ ಸಿಬ್ಬಂದಿ ಜೊತೆಗೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ, ಶೀಘ್ರ ಸರಿ ಹೋಗುವ ಭರವಸೆ ಇದೆ ಎಂದು ತಹಶೀಲ್ದಾರ್ ತಿಳಿಸಿದರು.ಮಸ್ಕಿ ತಾಲ್ಲೂಕು ಪಂಚಾಯಿತಿ ಪ್ರಭಾರಿ ಇ.ಓ ಶಿವಾನಂದ, ಸಿ.ಆರ್.ಪಿ ಪ್ರಶಾಂತ್, ಮುಖ್ಯ ಶಿಕ್ಷಕ ನಿಂಗಪ್ಪ, ಶಿಕ್ಷಕ ಮಂಜುನಾಥ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

