ಶ್ರೀರಾಮಕೃಷ್ಣ- ಶಾರದಾ-ವಿವೇಕಾನಂದ ಸಾಹಿತ್ಯಕ್ಕೆ ಸ್ವಾಮಿ ಪುರುಷೋತ್ತಮಾನಂದರ ಕೊಡುಗೆ ಅಪಾರ – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಜೂ.20

ಶ್ರೀರಾಮಕೃಷ್ಣ ಪರಮಹಂಸರು, ಶ್ರೀಶಾರದಾದೇವಿ, ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳನ್ನು ಒಳಗೊಂಡ ಮಹತ್ವದ ಸದ್ಗ್ರಂಥಗಳನ್ನು ಬರೆದ ಸ್ವಾಮಿ ಪುರುಷೋತ್ತಮಾನಂದರ ಸಾಹಿತ್ಯಿಕ ಕೊಡುಗೆ ಸ್ಮರಣೀಯವಾದದ್ದು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ ಪಟ್ಟರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಸ್ವಾಮಿ ಪುರುಷೋತ್ತಮಾನಂದಜೀ ಅವರ 95 ನೇ. ವರ್ಷದ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಜೀವನ-ವ್ಯಕ್ತಿತ್ವ- ಬರವಣಿಗೆ- ಸಾಧನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕದ ಮೂಲೆ-ಮೂಲೆಗಳಲ್ಲಿಯೂ ರಾಮಕೃಷ್ಣ-ಶಾರದಾ-ವಿವೇಕಾನಂದರ ಚಿಂತನೆಗಳನ್ನು ಭಜನೆ ಮತ್ತು ಪ್ರವಚನಗಳ ಮೂಲಕ ಪಸರಿಸಿದ ಕೀರ್ತಿ ಸ್ವಾಮಿ ಪುರುಷೋತ್ತಮಾನಂದರಿಗೆ ಸಲ್ಲುತ್ತದೆ.

ಅವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದ ನೂರಕ್ಕೂ ಹೆಚ್ಚು ಪುಸ್ತಕಗಳು ತನ್ನ ಸರಳ ಭಾಷೆ, ಆಕರ್ಷಕ ಶೈಲಿ, ಶಬ್ದಗಳ ಲಾಲಿತ್ಯದಿಂದ ಓದುಗರ ಗಮನ ಸೆಳೆದು ಸರಾಗವಾಗಿ ಓದಿಸಿ ಕೊಂಡು ಹೋಗುತ್ತವೆ.
ಅವರ ಶಿಸ್ತು ಬದ್ಧ ಆಧ್ಯಾತ್ಮಿಕ ಸಂನ್ಯಾಸ ಜೀವನ ಮತ್ತು ಆಯಸ್ಕಾಂತೀಯ ವ್ಯಕ್ತಿತ್ವ ಎಲ್ಲರನ್ನೂ ದಿವ್ಯತ್ರಯರತ್ತ ಕರೆ ತಂದಿತು ಎಂದು ಅವರ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ಹೇಳಿ ಭಕ್ತರನ್ನು ನಗೆಗಡಲಲ್ಲಿ ತೇಲಿಸಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ಪುರುಷೋತ್ತಮಾನಂದಜೀ ವಿರಚಿತ ಭಜನೆಗಳ ಗಾಯನ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಜಯಂತೋತ್ಸವ ಕಾರ್ಯಕ್ರಮದಲ್ಲಿ ನಂಜಮ್ಮ, ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಅನುಸೂಯ, ರಾಘವೇಂದ್ರ, ಗೀತಾ ಪ್ರಕಾಶ್, ಸರ್ವಮಂಗಳಾ ಶಿವಣ್ಣ, ಗೀತಾ ಸುಂದರೇಶ್ ದೀಕ್ಷಿತ್, ಸೌಮ್ಯ, ಸಿರಿಚಂದನ, ಪುಷ್ಪಲತಾ, ಶೋಭಾ ರಮೇಶ್, ಪ್ರಮೀಳಾ ಜಗದೀಶ್, ಪ್ರೇಮಾ, ತಿಪ್ಪಮ್ಮ, ಸರಸ್ವತಿ ನಾಗರಾಜ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

