ದಲಿತ ಮುಖಂಡ ಭೀಮಾನಂದ ಅವರ ಬರ್ಬರ ಹತ್ಯೆ ಖಂಡನೀಯ – ಆರೋಪಿಗಳ ತಕ್ಷಣ ಬಂಧನಕ್ಕೆ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ.

ಗದಗ ಆ.07

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ ಹದ್ದಿನಾಳ ಗ್ರಾಮದ ಬಿಎಸ್‌ಪಿ ಕಾರ್ಯಕರ್ತ ಹಾಗೂ ದಲಿತ ಯುವ ಮುಖಂಡ ಭೂಮಾನಂದ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನ ಗದಗ ಜಿಲ್ಲಾಧ್ಯಕ್ಷರಾದ ಸುರೇಶ್.ವೈ ಚಲವಾದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು, ಯಾದಗಿರಿ, ಕೊಪ್ಪಳ ಇತ್ತೀಚಿನ ದಿನಗಳಲ್ಲಿ ದಲಿತರು ಹಾಗೂ ಮಾದಿಗ ಸಮುದಾಯದ ಯುವಕರ ಮೇಲೆ ಸರಣಿ ಹಲ್ಲೆ ಮತ್ತು ಕೊಲೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕವಾಗಿ, ಹಗಲು ಹೊತ್ತಿನಲ್ಲೇ ಒಬ್ಬ ಹೋರಾಟಗಾರನನ್ನು ಬಲಿ ತೆಗೆದುಕೊಂಡಿರುವುದು ನೋಡಿದರೆ ಅಪರಾಧಿಗಳಿಗೆ ಕಾನೂನು ಮತ್ತು ಸಮಾಜದ ಭಯವೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭೀಮಾನಂದ ಅವರ ಕೊಲೆಗೆ ಕಾರಣರಾದ ಎಲ್ಲಾ ದುಷ್ಕರ್ಮಿಗಳನ್ನು ಪೊಲೀಸರು ಯಾವುದೇ ರಾಜಕೀಯ ಅಥವಾ ಸಾಮಾಜಿಕ ಪ್ರಭಾವಕ್ಕೆ ಒಳಗಾಗದೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಹತ್ಯೆ ಗೊಳಗಾದ ಭೀಮಾನಂದ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ತಕ್ಷಣವೇ ಪರಿಹಾರ ಧನ ಮಂಜೂರು ಮಾಡಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು.

ಸಮಾಜದ ವಿವಿಧ ಸಂಘಟನೆಗಳ ನಾಯಕರು, ವಕೀಲರು ಹಾಗೂ ಹಿರಿಯ ಹೋರಾಟಗಾರರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೊಲೆಯಾದ ಕುಟುಂಬಕ್ಕೆ ಸಂವಿಧಾನಾತ್ಮಕ ನ್ಯಾಯ ದೊರಕಿಸುವ ವರೆಗೆ ಒಂದಾಗಿ ಹೋರಾಟ ನಡೆಸಬೇಕು.

ಡಾ, ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಯುವಕರನ್ನು ಈ ರೀತಿ ಹಿಂಸೆಯಿಂದ ಮೌನ ಗೊಳಿಸಲು ಸಾಧ್ಯವಿಲ್ಲ.

ಈ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾಲ ಮಿತಿಯೊಳಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸದಿದ್ದರೆ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸುರೇಶ್.ವೈ ಚಲವಾದಿ ಎಚ್ಚರಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button