ಬದುಕಿಗೆ ಅವಶ್ಯಕ ಮೂಲ ಸೌಕರ್ಯ ಒದಗಿಸಲು – ಸ್ಥಳೀಯ ಆಡಳಿತ ಮುಂದಾಗ ಬೇಕು.
ಸಂಗಾಪೂರ ಜು.11

ಮಾನ್ವಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷದಿಂದ ಸಮಯಕ್ಕೆ ಸರಿಯಾಗಿ ನೀರಿನ ಮೋಟರ್ ಹಾಗೂ ಬೋರವೆಲಗಳನ್ನು ದುರಸ್ತಿ ಮಾಡದ ಪರಿಣಾಮ ನೀರಿಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮದಲ್ಲಿನ ಬಹುತೇಕ ಬೋರ್‌ವೆಲ್ ಗಳು ಕಾರ್ಯ ನಿರ್ವಹಿಸದ ಕಾರಣ, ಸಾರ್ವಜನಿಕರು ಒಂದೇ ಸಾರ್ವಜನಿಕ ಬಾವಿಯನ್ನು ಅವಲಂಬಿಸುವಂತಾಗಿದೆ. ಬೆಳಿಗ್ಗೆ ಹಾಗೂ ಸಂಜೆ ನೀರು ತುಂಬಿ ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಹೊಲ ಹಾಗೂ ಮನೆ ಕೆಲಸಗಳ ಅವಸರದಲ್ಲಿ ನೀರು ಪಡೆಯುವ ವೇಳೆ ಪರಸ್ಪರ ವಾಗ್ವಾದ ಮತ್ತು ಗಲಾಟೆಗಳು ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಯನ್ನು ತಕ್ಷಣವೇ ಪರಿಹರಿಸಿ, ಹಾಳಾಗಿರುವ ಬೋರ್‌ವೆಲ್ ಗಳನ್ನು ದುರಸ್ತಿ ಮಾಡಿ ಗ್ರಾಮಸ್ಥರಿಗೆ ನಿರಂತರ ನೀರು ಪೂರೈಸುವಂತೆ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಮೇಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಗಾಪೂರ ಗ್ರಾಮದ ನಿವಾಸಿ ಗಣೇಶ್ ಸಂಗಾಪೂರ ಒತ್ತಾಯಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

