“ಕಾಲೋನಿಗೆ ಭೇಟಿ ನೀಡಲು ನಿರಾಕರಣೆ ನಾಳೆ ಗದಗಿಗೆ ಬನ್ನಿ ಎಂದು ಅಲೆಮಾರಿಗಳ ನೋವಿಗೆ ಬೆಲೆ ನೀಡದ – ನಾಗಲಕ್ಷ್ಮಿ ವಿರುದ್ಧ ಆಕ್ರೋಶ”…..

ರೋಣದ ಕಲ್ಯಾಣ ನಗರದ ಅಲೆಮಾರಿ ಚನ್ನದಾಸ ಸಮುದಾಯದ ಜನರು ಮೂರು-ನಾಲ್ಕು ದಶಕಗಳಿಂದ ನೆಲೆ ಇಲ್ಲದೆ ಹರಿದ ಪ್ಲಾಸ್ಟಿಕ್ ಶೀಟ್‌ಗಳ ಜೋಪಡಿಗಳಲ್ಲೇ ಬದುಕು ತಳ್ಳುತ್ತಿದ್ದಾರೆ.
ಇಂತಹ ಕಷ್ಟದ ಸಮಯದಲ್ಲಿ ಸಮುದಾಯದ ಜನರಿಗೆ ಆಸರೆಯಾಗಬೇಕಾದ ಅಧಿಕಾರಿಗಳ ನಡೆ ಮಾತ್ರ ಅತ್ಯಂತ ಖಂಡನೀಯವಾಗಿದೆ.
ಅಲೆಮಾರಿ ಸಮುದಾಯದ ತಾಲೂಕ ಅಧ್ಯಕ್ಷ ಕನಕಪ್ಪ ಕೋತಬಾಳ ಹಾಗೂ ಕಾಲೋನಿಯ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದು ಒಮ್ಮೆ ನಮ್ಮ ಕಾಲೋನಿಗೆ ಭೇಟಿ ನೀಡಿ, ನಮ್ಮ ಕಷ್ಟಗಳನ್ನು ಕಣ್ಣಾರೆ ನೋಡಿ ಎಂದು ನಾಗಲಕ್ಷ್ಮಿ ಅವರಿಗೆ ಪರಿಪರಿಯಾಗಿ ಬೇಡಿ ಕೊಂಡರೂ ಅವರು ನೀವು ನಾಳೆ ಗದಗಿಗೆ ಬನ್ನಿ ಎಂದು ನಿರ್ದಯವಾಗಿ ಹೇಳಿ ಸ್ಥಳದಿಂದ ಜಾರಿ ಕೊಂಡಿರುವುದು ಅಲೆಮಾರಿ ಜನಾಂಗದವರ ಮನಸ್ಸಿಗೆ ತೀವ್ರ ಆಘಾತ ಉಂಟು ಮಾಡಿದೆ.
ಬಾಕ್ಸ್ ನ್ಯೂಸ್:-
ಬಡವರ ಕಣ್ಣೀರು ನಿಮಗಷ್ಟೇ ಪ್ರಚಾರದ ಸರಕೇ?
ಸಮಸ್ಯೆ ಆಲಿಸಲು ಕಾಲೋನಿಗೆ ಬರಲು ಮನಸ್ಸಿಲ್ಲವೇ?
ಮಾಧ್ಯಮಗಳ ಮುಂದೆ ಆಡಳಿತಾತ್ಮಕ ಕಾರ್ಯಕ್ರಮಗಳಲ್ಲಿ ಮತ್ತು ವೇದಿಕೆಗಳ ಮೇಲೆ ಶೋಕಿ ಕೊಡುವುದರಲ್ಲಿ ತೋರಿಸುವ ಉತ್ಸಾಹ ಆಸಕ್ತಿ ನಿಜವಾದ ಸಂಕಷ್ಟದಲ್ಲಿರುವ ಬಡವರ ಗುಡಿಸಲುಗಳಿಗೆ ಭೇಟಿ ನೀಡಿ ಅವರ ನೋವು ಆಲಿಸುವಲ್ಲಿ ಏಕಿಲ್ಲ?
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಬಡವರ ಮನೆ ಬಾಗಿಲಿಗೆ ಹೋಗಲು ಹಿಂದೇಟು ಹಾಕುತ್ತಿರುವುದು ನಿಮ್ಮ ಆಡಳಿತಾತ್ಮಕ ವೈಫಲ್ಯ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಯಾಗಿದೆ.

ವೇದಿಕೆಯ ಭಾಷಣಗಳಿಂದ ಪ್ರಚಾರದ ವರದಿಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ.
ಜನರ ನೈಜ ನೆಲದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸುವುದು ನಿಮ್ಮ ಕರ್ತವ್ಯ.
ಇನ್ಮುಂದೆಯಾದರೂ ಕ್ಯಾಮೆರಾ ಕಣ್ಣುಗಳ ಶೋಕಿ ಬಿಟ್ಟು, ಸಂಕಷ್ಟದಲ್ಲಿರುವ ಬಡವರ ಮನೆಗಳಿಗೆ ಭೇಟಿ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ.
ಕನಕಪ್ಪ ಕೋತಬಾಳ, ತಾಲೂಕು ಅಧ್ಯಕ್ಷರು, ಅಲೆಮಾರಿ ಸಮುದಾಯ.
ತಮ್ಮ ಹಕ್ಕುಗಳಿಗಾಗಿ ಅಲೆಯುತ್ತಿರುವ ಅಲೆಮಾರಿಗಳು ನಿಮ್ಮ ಕಚೇರಿ ಬಾಗಿಲಿಗೆ ಬರಬೇಕೇ ವಿನಃ, ನೀವು ಅವರಿದ್ದಲ್ಲಿಗೆ ಹೋಗಿ ಪರಿಶೀಲಿಸುವುದಿಲ್ಲವೇ?
ಪ್ರಚಾರದ ಫೋಟೋಗಳಿಗೆ ಕೊಡುವ ಪ್ರಾಮುಖ್ಯತೆ, ಬಡವರ ಬದುಕಿನ ನೆಲೆಗೆ ಏಕಿಲ್ಲ?
ಅಧಿಕಾರಿಗಳ ಈ ಕಡೆಗಣನೆ ಧೋರಣೆಯನ್ನು ಚೌಧರಿ ಮೇಡಂ ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಗಮನಿಸಿ ತರಾಟೆಗೆ ತೆಗೆದು ಕೊಳ್ಳಬೇಕಿದೆ. ಬಡ ಅಲೆಮಾರಿ ಜನಾಂಗಕ್ಕೆ ತಕ್ಷಣವೇ ಶಾಶ್ವತ ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ, ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮುದಾಯ ಎಚ್ಚರಿಸಿದೆ.

