ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ, ಅಧ್ಯಯನ ಪೀಠಕ್ಕೆ ₹10 ಕೋಟಿ ಅನುದಾನ ನೀಡುವಂತೆ – ಎಂ.ಬಿ. ಹಡಪದ ಸುಗೂರ ಎನ್ ಒತ್ತಾಯಿಸಿದ್ದಾರೆ.
ಕಲಬುರಗಿ ಸೆ.16

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಕಲಬುರಗಿ ಜಿಲ್ಲೆಗೆ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಡಪದ ಅಪ್ಪಣ್ಣ ಸಮಾಜದ ಪ್ರಮುಖ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸ ಬೇಕು ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಒತ್ತಾಯಿಸಿದ್ದಾರೆ.
ಹಡಪದ ಅಪ್ಪಣ್ಣ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿರುವ ಸಣ್ಣ ಸಮುದಾಯವಾಗಿದೆ. ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಘೋಷಣೆಯಾಗಿರುವ ಪ್ರತ್ಯೇಕ ಅಭಿವೃದ್ಧಿ ನಿಗಮವು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ, ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಬೇಕು. ನಿಗಮಕ್ಕೆ ತಕ್ಷಣವೇ ₹100 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅದೇ ರೀತಿ ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿರುವ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಲು ₹10 ಕೋಟಿ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ.
ಬಸವಕಲ್ಯಾಣದ ಅರಿವಿನ ಮನೆ ವಿಚಾರಕ್ಕೆ ನ್ಯಾಯ ದೊರಕಲಿ:-
ಬಸವಕಲ್ಯಾಣ ತಾಲೂಕಿನಲ್ಲಿ ಬಸವಣ್ಣನವರ ಅರಿವಿನ ಮನೆ (ಗವಿ) ಪಕ್ಕದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ಅರಿವಿನ ಮನೆಯ ಗವಿಯಲ್ಲಿ ರಾತ್ರೋರಾತ್ರಿ ಅನ್ಯ ಮೂರ್ತಿ ಸ್ಥಾಪಿಸಿರುವ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸಮಾಜದ ವತಿಯಿಂದ ಮುಖ್ಯಮಂತ್ರಿ, ಕ್ಯಾಬಿನೆಟ್ ದರ್ಜೆಯ ಸಚಿವರು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಬೀದರ್ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆಗಳನ್ನೂ ನಡೆಸಲಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಪ್ರಾಧಿಕಾರಕ್ಕೂ ಮನವಿ ನೀಡಲಾಗಿದೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸವಾದಿ ಶರಣರ ಸ್ಮಾರಕಗಳು ಹಾಗೂ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇತಿಹಾಸವನ್ನು ಅಳಿಸುವ ಯಾವುದೇ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಈ ಕುರಿತು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಎಲ್ಲಿ ಶಿವನೋ ಅಲ್ಲಿ ನಂದಿ, ಎಲ್ಲಿ ಶ್ರೀರಾಮನೋ ಅಲ್ಲಿ ಹನುಮ, ಎಲ್ಲಿ ಬಸವಣ್ಣನೋ ಅಲ್ಲಿ ಹಡಪದ ಅಪ್ಪಣ್ಣ” ಎಂಬ ಐತಿಹಾಸಿಕ ಸತ್ಯವನ್ನು ಸಮಾಜ ಹಾಗೂ ಸರ್ಕಾರ ಅರಿತು ಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
‘ಅಜಾಮ’ ಪದ ಬಳಕೆಗೆ ಅಟ್ರಾಸಿಟಿ ಕಾಯ್ದೆ ಜಾರಿ ಆಗಲಿ:-
ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಕಾಯಕ ಬಂಧುಗಳನ್ನು ಅವಮಾನಿಸುವ ಉದ್ದೇಶದಿಂದ ಬಳಸಲಾಗುತ್ತಿರುವ ಉರ್ದು ಮೂಲದ ‘ಅಜಾಮ’ ಪದದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪದ ಬಳಕೆಗೆ ಕಾನೂನು ಪ್ರಕಾರ ಅಟ್ರಾಸಿಟಿ ಕಾಯ್ದೆ ಅನ್ವಯಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಕರ್ನಾಟಕದಾದ್ಯಂತ ಇರುವ ಹಡಪದ ಅಪ್ಪಣ್ಣ ಸಮಾಜದ ಜನತೆಯ ಪ್ರಮುಖ ಬೇಡಿಕೆಯಾಗಿದೆ ಎಂದು ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ತಿಳಿಸಿದ್ದಾರೆ.
ಹಡಪದ ಅಪ್ಪಣ್ಣ ಸಮಾಜದ ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಕೂಡಲೇ ಈಡೇರಿಸ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

