ಮಹಾರಾಷ್ಟ್ರದಿಂದ 1.43 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಜನರು ನದಿಗೆ ಇಳಿಯದಂತೆ ಮನವಿ.

ಆಲಮೇಲ ಆ.01

ಮಹಾರಾಷ್ಟ್ರದ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಜನಿ ಹಾಗೂ ವೀರ್ ಜಲಾಶಯಗಳಿಂದ ಒಟ್ಟು 1.43 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ಮುಂದಿನ 24 ಗಂಟೆಗಳಲ್ಲಿ ಆಲಮೇಲ ತಾಲೂಕಿನ ದೇವಣಗಾಂವ- ಸೊನ್ನ ಗ್ರಾಮಗಳ ಸಮೀಪದ ನಿರ್ಮಿಸಲಾಗಿರುವ ಸೊನ್ನ ಬ್ಯಾರೇಜ್ ತಲುಪುವ ಸಾಧ್ಯತೆ ಇದೆ.

ಇದರಿಂದ ಭೀಮಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ನದಿ ತೀರದ ಗ್ರಾಮಗಳು ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಫಜಲಪುರ ಕೆಎನ್‌ಎನ್‌ಎಲ್‌ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ತಿಳಿಸಿದ್ದಾರೆ.

ಉಜನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಹಾಗೂ ವೀರ್ ಜಲಾಶಯದಿಂದ 63 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮೇಲ್ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ನೀರಿನ ಬಿಡುಗಡೆಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಭೀಮಾ ಏತ ನೀರಾವರಿ ಯೋಜನೆಯ ಸೊನ್ನ ಬ್ಯಾರೇಜ್ ನಲ್ಲಿ ಶುಕ್ರವಾರ 44 ಸಾವಿರ ಕ್ಯೂಸೆಕ್ ಒಳ ಹರಿವು ಮತ್ತು 43 ಸಾವಿರ ಕ್ಯೂಸೆಕ್ ಹೊರ ಹರಿವು ದಾಖಲಾಗಿದ್ದು, ನಾಳೆಯಿಂದ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭೀಮಾ ನದಿ ಪಾತ್ರದ ಜನರು ಅನಗತ್ಯವಾಗಿ ನದಿ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.

ವಿಶೇಷವಾಗಿ ಪುಣ್ಯ ಕ್ಷೇತ್ರಗಳಾದ ಮಣೂರ, ಘತ್ತರಗಿ ಹಾಗೂ ದೇವಲ ಗಾಣಗಾಪೂರ ಪುಣ್ಯ ಕ್ಷೇತ್ರಗಳಿಗೆ ಆಗಮಿಸುವ ಭಕ್ತರು ಪುಣ್ಯ ಸ್ನಾನಕ್ಕಾಗಿ ನದಿಗೆ ಇಳಿಯಬಾರದು. ನದಿ ತೀರದಲ್ಲಿ ಸೆಲ್ಫಿ, ಈಜು ಅಥವಾ ಇತರೆ ಅಪಾಯಕಾರಿ ಚಟುವಟಿಕೆಗಳಿಂದ ದೂರವಿರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ನದಿಯ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ವಹಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನದಿ ತೀರದ ಗ್ರಾಮಗಳ ನಿವಾಸಿಗಳು ಮತ್ತು ಭಕ್ತರು ಎಚ್ಚರಿಕೆಯಿಂದ ವರ್ತಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button