ಕಾ.ನಿ.ಪ ಸಂಘದಿಂದ – ಪತ್ರಿಕಾ ದಿನಾಚರಣೆ.
ಆಲಮೇಲ ಆ.01

ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢ ಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಆಲಮೇಲ ತಾಲ್ಲೂಕು ಕಾ.ನಿ.ಪ ಸಂಘದ ಅಧ್ಯಕ್ಷ ಅವಧೂತ ಬಂಡಗಾರ ಹೇಳಿದರು.
ಗುರುವಾರ ಸಂಜೆ ಆಲಮೇಲ ಪಟ್ಟಣದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ (ಓಂ ಶಾಂತಿ) ಕೇಂದ್ರದಲ್ಲಿ ಆಲಮೇಲ ತಾಲ್ಲೂಕು ಕಾ.ನಿ.ಪ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ಡಾ, ರಮೇಶ ಕತ್ತಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡುವ ಮಾಧ್ಯಮವಲ್ಲ, ಸಮಾಜದ ಸಮಸ್ಯೆಗಳನ್ನು ಜನ ಪ್ರತಿನಿಧಿಗಳ ಮತ್ತು ಆಡಳಿತದ ಗಮನಕ್ಕೆ ತರುವ ಸೇತುವೆ ಯಾಗಿವೆ. ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸುವ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ತನ್ನ ಗೌರವವನ್ನು ಉಳಿಸಿ ಕೊಂಡಿದೆ ಎಂದು ಹೇಳಿದರು.

ಬ್ರ.ಕು ರೇಣುಕಾ ಅಕ್ಕನವರು ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆ ಹೆಚ್ಚಾಗಿರುವುದರಿಂದ, ಪರಿಶೀಲಿತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಿಕಾ ದಿನಾಚರಣೆ ಪತ್ರಕರ್ತರ ಸೇವೆಯನ್ನು ಸ್ಮರಿಸುವ ಮತ್ತು ಅವರ ಸಮಾಜ ಮುಖಿ ಕಾರ್ಯವನ್ನು ಗೌರವಿಸುವ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಿ ರೇಣುಕಾ ಅಕ್ಕನವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಉಪಾಧ್ಯಕ್ಷ ಸಿದ್ದು ಬಿರಾದಾರ, ಗಾಂಧಿಗೌಡ ಪಾಟೀಲ, ಸಿದ್ದು ಹಿರೇಮಠ. (ಮುಗುಳಿ) ಉಮೇಶ ಕ್ಷತ್ರಿ ಅಮರ ನಾರಾಯಣಕರ, ದತ್ತು ಸೊನ್ನ, ಮಲ್ಲು ತಳವಾರ, ಶಿವು ಕಾಟಕರ ಮೊದಲಾದವರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪಯ್ಯ ಹಿರೇಮಠ ಆಲಮೇಲ

