“ಸಾಧಿಸುವ ಕನಸಿಗೆ ತಾಯಿಯೇ ಸ್ಫೂರ್ತಿ”…..

ಕನಸುಗಳು ಕಣ್ಣುಗಳಿಗೆ ಮಾತ್ರ ಸೀಮಿತವಲ್ಲ. ಅವು ನಮ್ಮ ಬದುಕಿನ ದಾರಿ ದೀಪಗಳು. ಆ ದಾರಿ ದೀಪಕ್ಕೆ ಪ್ರೀತಿಯ ತೈಲವೆರೆದು ಭರವಸೆಯ ಜ್ಯೋತಿ ಬೆಳಗುವ ಪ್ರಥಮ ಗುರು ಪ್ರತ್ಯಕ್ಷ ದೈವ ತಾಯಿ. ಪ್ರತಿಯೊಬ್ಬ ಸಾಧಕನ ಯಶೋಗಾಥೆಯ ಹಿಂದೆಯೂ ತಾಯಿಯ ನಿರಂತರ ತ್ಯಾಗ ಮತ್ತು ಮೌನ ಪ್ರಾರ್ಥನೆಯ ಶಕ್ತಿಯಿರುತ್ತದೆ. ನಮ್ಮ ಸಾಧನೆಯ ಶಿಖರ ಎಷ್ಟೇ ಎತ್ತರದ್ದೇ ಇರಲಿ ಅದರ ಭದ್ರವಾದ ಬುನಾದಿ ತಾಯಿಯ ಪ್ರೀತಿ ಮತ್ತು ಸ್ಫೂರ್ತಿ. ನಮ್ಮ ಕನಸುಗಳು ನನಸಾದಾಗ ಸಿಗುವ ಕೀರ್ತಿಗಿಂತ ಅದನ್ನು ಕಂಡು ತಾಯಿಯ ಕಣ್ಣುಗಳಲ್ಲಿ ಮೂಡುವ ಆನಂದ ಭಾಷ್ಪವೇ ನಮ್ಮ ಬದುಕಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ. ತಾಯಿಯೇ ನಮ್ಮ ಬದುಕಿನ ಶಾಶ್ವತ ಪ್ರೇರಣೆ, ಸಾಧನೆಯ ತೇರಿಗೆ ಚಾಲಕ ಶಕ್ತಿ.

ತಾಯಿಯಿಂದ ಪ್ರೇರಣೆ ಪಡೆದು ಸಾಧಕರಾದ ವ್ಯಕ್ತಿಗಳ ಪರಿಚಯ ಹೇಳುವುದಾದರೆ, ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರ ಬೇಕಾದರೆ ತಾಯಿಯ ಪ್ರೋತ್ಸಾಹವೇ ಮುಖ್ಯ ಅಡಿಪಾಯ. ತಾಯಿಯ ನಿಸ್ವಾರ್ಥ ಪ್ರೇರಣೆಯು ಸಾಮಾನ್ಯ ಬಾಲಕರನ್ನು ಜಗತ್ತು ನೆನೆಯುವಂತಹ ಅಸಾಧಾರಣ ಸಾಧಕರನ್ನಾಗಿ ಮಾಡುತ್ತದೆ. ಅಂತಹ ಸಾಧಕರ ಬಗ್ಗೆ ಕೆಲವು ಉದಾಹರಣೆಗಳು ನೋಡುವುದಾದರೆ ತಾಯಿಯ ಮಡಿಲಲ್ಲೇ ಬೆಳೆದ ವಿಶ್ವಗುರು ಸ್ವಾಮಿ ವಿವೇಕಾನಂದರು. ಜಗತ್ತನ್ನು ಬೆಳಗುವ ದೀಪಕ್ಕೆ ಮೊದಲು ತಾಯಿಯ ಮಡಿಲೇ ಎಣ್ಣೆ. ಸ್ವಾಮಿ ವಿವೇಕಾನಂದರು ಎಂದರೆ ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಭಾರತದ ಆತ್ಮದ ಘೋಷಣೆ, ಯುವಕರ ಪ್ರೇರಣೆಯ ಜ್ವಾಲೆ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಶ್ರೀ ವಿವೇಕಾನಂದರು. ಆ ಮಹಾನ್ ವ್ಯಕ್ತಿತ್ವದ ಅಡಿಪಾಯಕ್ಕೆ ಮೊದಲ ಇಟ್ಟಿಗೆ ಇಟ್ಟವರು ಯಾರು ಅಂದರೆ ತಾಯಿ ಭುವನೇಶ್ವರಿದೇವಿ. ಚಿಕ್ಕಂದಿನಿಂದಲೂ ನರೇಂದ್ರನ ಕಿವಿಗೆ ರಾಮಾಯಣದ ಧೈರ್ಯ, ಮಹಾಭಾರತದ ನೀತಿ, ಪುರಾಣಗಳ ಕಥೆಗಳನ್ನು ಹೇಳಿ ಹೇಳಿ ಆಧ್ಯಾತ್ಮದ ಬೀಜವನ್ನು ತಾಯಿ ಬಿತ್ತಿದರು. ಮಗನ ಕಣ್ಣಲ್ಲಿ ಜಗತ್ತನ್ನು ಬದಲಿಸುವ ಕನಸು ಕಂಡಾಗ, “ನನ್ನ ಮಗ ನರೇಂದ್ರ ಜಗತ್ತನ್ನೇ ಬೆಳಗುತ್ತಾನೆ” ಎಂದು ಹೃದಯ ತುಂಬಿ ನಂಬಿದರು. ತಾಯಿಯ ಆಶೀರ್ವಾದ ಎಂದರೆ ಅದು ಬರೀ ಆಶೀರ್ವಾದವಲ್ಲ, ಅದು ಮಂತ್ರ. ಆ ಮಂತ್ರವೇ ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿತು. ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ “ಸಹೋದರ ಸಹೋದರಿಯರೇ” ಎಂದು ಅವರು ಕೂಗಿದಾಗ ಅದರಲ್ಲಿ ಭುವನೇಶ್ವರಿದೇವಿಯ ಲಾಲನೆಯ ಸಿಹಿ ಇತ್ತು. ತಾಯಿ ಕೊಟ್ಟ ಕಥೆಗಳು ಅವರಿಗೆ ಶಕ್ತಿಯಾದವು. ತಾಯಿ ತುಂಬಿದ ನಂಬಿಕೆ ಅವರಿಗೆ ಧೈರ್ಯವಾಯಿತು. ತಾಯಿ ಹಚ್ಚಿದ ಆ ದೀಪವೇ ಇಂದು ಇಡೀ ಜಗತ್ತನ್ನು ಬೆಳಗುತ್ತಿದೆ.
ರಾಮೇಶ್ವರದ ಸಮುದ್ರದ ಅಲೆಗಳ ನಡುವೆ ಬಡತನದ ಅಲೆಯನ್ನು ದಾಟಿ ಬೆಳೆದ ಹೆಸರೇ ಡಾ, ಎ.ಪಿ.ಜೆ. ಅಬ್ದುಲ್ ಕಲಾಂ. ಅವರನ್ನು “ಮಿಸೈಲ್ ಮ್ಯಾನ್”, “ಜನರ ರಾಷ್ಟ್ರಪತಿ” ಎಂದು ಇಡೀ ಜಗತ್ತು ಕೊಂಡಾಡಿದರೆ ಆ ಕೀರ್ತಿಯ ಬುನಾದಿಯಲ್ಲಿ ಇದ್ದದ್ದು ಒಬ್ಬ ತಾಯಿಯ ಕೈಯ ಊಟ ಮತ್ತು ಆಶೀರ್ವಾದ. ಅವರ ತಾಯಿ ಆಶಿಯಮ್ಮ ಅವರಿಗೆ ಶ್ರೀಮಂತಿಕೆ ಇರಲಿಲ್ಲ, ಆದರೆ ಕನಸಿಗೆ ಬೆಲೆ ಕೊಡುವ ಶ್ರೀಮಂತ ಮನಸ್ಸಿತ್ತು. ಮಗ ತಡರಾತ್ರಿ ಓದಿ ಮನೆಗೆ ಬಂದರೂ, “ಹಸಿವಾಗಿದೆಯಾ ನನ್ನ ಕಂದ” ಎಂದು ಪ್ರೀತಿಯಿಂದ ಊಟ ಬಡಿಸುತ್ತಿದ್ದರು. “ಮಗನೇ ಪ್ರಾಮಾಣಿಕವಾಗಿ ದುಡಿ, ದೊಡ್ಡ ಕನಸು ಕಾಣು” ಎಂಬ ಈ ಎರಡು ಮಾತುಗಳೇ ಕಲಾಂರಿಗೆ ಗೀತೋಪದೇಶವಾದವು. ಮಗ ವಿಜ್ಞಾನಿಯಾಗುವ ಕನಸು ಹೇಳಿದಾಗ “ನೀನು ದೊಡ್ಡ ವಿಜ್ಞಾನಿ ಆಗುವೆ” ಎಂದು ತಾಯಿ ಎದೆತಟ್ಟಿ ಹೇಳಿದ ಮಾತು ಅವರಿಗೆ ಬ್ರಹ್ಮಾಸ್ತ್ರವಾಯಿತು. ತಾಯಿ ಆಶಿಯಮ್ಮ ಬಡಿಸಿದ ಅನ್ನದಲ್ಲಿ ತ್ಯಾಗವಿತ್ತು. ಅವರು ಹೇಳಿದ ಮಾತಿನಲ್ಲಿ ನಂಬಿಕೆಯಿತ್ತು. ಆ ಎರಡೂ ಸೇರಿದ್ದರಿಂದಲೇ ರಾಮೇಶ್ವರದ ಒಂದು ಪುಟ್ಟ ಹುಡುಗ, ಭಾರತದ ಕ್ಷಿಪಣಿಗೆ ರೆಕ್ಕೆ ಕೊಟ್ಟರು. ದೇಶದ ರಾಷ್ಟ್ರಪತಿ ಭವನದವರೆಗೆ ಏರಿದರು. ತಾಯಿ ತಟ್ಟೆಯಲ್ಲಿ ಬಡಿಸಿದ್ದು ಅನ್ನವಲ್ಲ, ಅದು ಆತ್ಮವಿಶ್ವಾಸ. ಅದನ್ನು ಮಮತೆಯಿಂದ ಉಂಡು ಬೆಳೆದವರೇ ಜನರ ಪ್ರೀತಿಯ ಕಲಾಂ.
ಮಹಾರಾಷ್ಟ್ರದ ಮಣ್ಣಿನಲ್ಲಿ ಹಿಂದವಿ ಸ್ವರಾಜ್ಯದ ಬೀಜ ಬಿತ್ತಿದ ಹೆಸರೇ ಛತ್ರಪತಿ ಶಿವಾಜಿ ಮಹಾರಾಜರು. ಶೌರ್ಯದ ಕತ್ತಿಯಿಂದ ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ ಆ ಕತ್ತಿಗೆ ಮೊದಲು ಮೆರುಗು ಕೊಟ್ಟ ಕೈ ಯಾರದ್ದು? ಅದು ಜೀಜಾಮಾತೆ ಜೀಜಾಬಾಯಿಯವರದು. “ಮಗನೇ ಅನ್ಯಾಯದ ವಿರುದ್ಧ ಹೋರಾಡು. ಸ್ವಾಭಿಮಾನದಿಂದ ಬದುಕು” – ಆ ಒಂದು ಮಾತು ಬೀಜವಾಗಿ ಮಗನ ಎದೆಯಲ್ಲಿ ಸದಾ ಉಳಿಯಿತು. ಅದು ಬೆಳೆದು ಸ್ವರಾಜ್ಯದ ಮಹಾವೃಕ್ಷವಾಯಿತು. ತಾಯಿ ಹೇಳಿದ ಶೌರ್ಯದ ಪಾಠವೇ ಶಿವಾಜಿಯನ್ನು ಮೊಘಲರ ವಿರುದ್ಧ ನಿಲ್ಲುವಂತೆ ಮಾಡಿತು. ತಾಯಿ ತುಂಬಿದ ಸ್ವಾಭಿಮಾನವೇ ಅವರನ್ನು ರಾಜ್ಯ ಸ್ಥಾಪನೆಗೆ ಪ್ರೇರೇಪಿಸಿತು. ಜೀಜಾಮಾತೆ ಕೊಟ್ಟದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಧೈರ್ಯ ಮತ್ತು ಧ್ಯೇಯ. ಅದಕ್ಕಾಗಿಯೇ ಛತ್ರಪತಿ ಶಿವಾಜಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜೀಜಾಮಾತೆಯ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಜೀಜಾಮಾತೆಯ ಮಡಿಲೇ ಮೊದಲ ದರ್ಬಾರ್. ಅಲ್ಲಿಂದ ಹೊರಟ ಕಂದನೇ ಛತ್ರಪತಿ. ತಾಯಿ ಕಲಿಸಿದ ಸ್ವಾಭಿಮಾನವೇ ಇಂದು ಕೋಟಿ ಕೋಟಿ ಹೃದಯದಲ್ಲಿ ಮಿನುಗುತ್ತಿರುವವರು ಶ್ರೀ ಶಿವಾಜಿ ಮಹಾರಾಜರು.
ಹಿರೇಮಗಳೂರಿನ ಹಸಿರು ಹೊಲಗಳ ನಡುವೆ ಸಾಹಿತ್ಯದ ಮೊದಲ ಪಾಠಶಾಲೆ ತೆರೆದದ್ದು ಒಂದು ತಾಯಿಯ ಮಡಿಲಲ್ಲಿ. ಆ ತಾಯಿಯೇ ವೆಂಕಟಲಕ್ಷಮ್ಮ. ಚಿಕ್ಕಂದಿನ ಕುವೆಂಪು ಅವರಿಗೆ ತಾಯಿಯು ರಾತ್ರಿಯ ಹೊತ್ತು ಲಾವಣಿ ಹಾಡಿ, ಜನಪದ ಕಥೆ ಹೇಳಿ ಕನ್ನಡದ ಮಮತೆಯನ್ನು ಕಲಿಸಿದರು. ಪ್ರತಿ ಕಥೆಯ ಕೊನೆಯಲ್ಲಿ ಒಂದೇ ಹಂಬಲ ಇಡುತ್ತಿದ್ದರು – “ನನ್ನ ಮಗ ಕನ್ನಡಕ್ಕೆ ಕೀರ್ತಿ ತರಬೇಕು” ಎಂದು. ಆ ತಾಯಿಯ ಹಂಬಲವೇ ಬೀಜವಾಯಿತು. ಅದು ಬೆಳೆದು ಕಾವ್ಯದ ಮಹಾ ವೃಕ್ಷವಾಯಿತು. ತಾಯಿ ಕಿವಿಯಲ್ಲಿ ಹಾಡಿದ ಲಾವಣಿಯೇ ಮುಂದೆ “ಜಯ ಭಾರತ ಜನನಿಯ ತನುಜಾತೆ” ಎಂಬ ನಾಡಗೀತೆಯಾಗಿ ಕೋಟಿ ಕಂಠಗಳಲ್ಲಿ ಮೊಳಗಿತು. ವೆಂಕಟಲಕ್ಷಮ್ಮ ಕೊಟ್ಟಿದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಭಾಷಾಭಿಮಾನ, ಮಾನವೀಯತೆ ಮತ್ತು ವಿಶ್ವ ಪ್ರೀತಿ. ಅದೇ ಆಸ್ತಿಯನ್ನು ತೆಗೆದುಕೊಂಡು ಹೋದ ಕುವೆಂಪು ಅವರು ರಾಷ್ಟ್ರಕವಿ ಎಂಬ ಬಿರುದು ಪಡೆದು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದ ಎತ್ತರಕ್ಕೆ ಹಾರಿಸಿದರು.
ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ತಾಯಿಯ ಭಾವನೆಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಆಕೆಯ ಮುನಿಸಿನಲ್ಲಿ ಪ್ರೀತಿಯಿರುತ್ತದೆ, ಹರಕೆಯಲ್ಲಿ ಭವಿಷ್ಯವಿರುತ್ತದೆ, ಕಣ್ಣೀರಿನಲ್ಲಿ ಮಮತೆಯಿರುತ್ತದೆ. ತಾಯಿಯ ಅಂತರಾಳದ ಈ ಮೂರು ಶಕ್ತಿಗಳನ್ನು ಗೌರವಿಸಿ ಆಕೆಯ ಮಾರ್ಗದರ್ಶನದಲ್ಲಿ ನಡೆಯುವ ಮಗುವಿನ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ. ತಾಯಿಯೇ ಪ್ರತ್ಯಕ್ಷ ದೈವ, ಆಕೆಯ ಪ್ರೀತಿಯೇ ಜೀವನ್ಮುಖಿ. ಪ್ರತಿಯೊಬ್ಬ ಸಾಧಕನ ಕನಸಿಗೆ ತಾಯಿಯೇ ಮೊದಲ ಸ್ಫೂರ್ತಿ.
ಶ್ರೀ ಮುತ್ತು.ಯ ವಡ್ಡರ ಶಿಕ್ಷಕರು,
HPS ಹಿರೇಮಳಗಾವಿ
ಹುನಗುಂದ-9845568484
