ಮಕ್ಕಳಲ್ಲಿ ಕಾನೂನು ಹಾಗೂ ರಸ್ತೆ ಸುರಕ್ಷತೆ ಅರಿವು ಅಗತ್ಯ – ಪಿಎಸ್‌ಐ ಅರವಿಂದ್ರ ಅಂಗಡಿ ಅವರು ಕರೆ ಕೊಟ್ಟರು.
ಆಲಮೇಲ ಆ.06


ಮಕ್ಕಳಿಗೆ ಬಾಲ್ಯದಲ್ಲಿಯೇ ಕಾನೂನು ಅರಿವು, ರಸ್ತೆ ಸುರಕ್ಷತೆ ಹಾಗೂ ವೈಯಕ್ತಿಕ ಭದ್ರತೆ ಕುರಿತು ಶಿಕ್ಷಣ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಆಲಮೇಲ ಪೊಲೀಸ್ ಠಾಣೆಯ ಪಿಎಸ್‌ಐ ಅರವಿಂದ ಅಂಗಡಿ ಕರೆ ಕೊಟ್ಟರು.
ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ಪ್ರಜೆಗಳಾಗಲಿದ್ದು, ರಸ್ತೆ ಸಂಚಾರ ನಿಯಮಗಳು, ಮಕ್ಕಳ ಹಕ್ಕುಗಳು ಹಾಗೂ ವಿವಿಧ ಕಾನೂನುಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿವು ಹೊಂದಬೇಕು ಎಂದು ಹೇಳಿದರು.
ಮನೆಯಿಂದ ಹೊರಗಡೆ ಬಂದಾಗ ಎಚ್ಚರಿಕೆಯಿಂದ ವರ್ತಿಸುವುದು, ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕುರಿತು ತಿಳಿದು ಕೊಳ್ಳುವುದು ಅಗತ್ಯ. ಯಾವುದೇ ರೀತಿಯ ಅಹಿತಕರ ಅನುಭವ ಎದುರಾದರೆ ಅದನ್ನು ಪಾಲಕರು ಅಥವಾ ಶಿಕ್ಷಕರ ಗಮನಕ್ಕೆ ತಕ್ಷಣ ತರಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಬಳಕೆಯಲ್ಲಿ ಮಕ್ಕಳು ಹೆಚ್ಚಿನ ಜಾಗರೂಕತೆ ವಹಿಸ ಬೇಕು. ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಮೊಬೈಲ್ ಬಳಸಬೇಕು. ಸೈಬರ್ ಅಪರಾಧಗಳು ಹಾಗೂ ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣ ದೊರೆಯಬೇಕು. ಶಾಲೆಯಿಂದ ಹೊರಗುಳಿಸಿ ಬಾಲ ಕಾರ್ಮಿಕರನ್ನಾಗಿ ದುಡಿಸಿ ಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಅದೇ ರೀತಿ ಬಾಲ್ಯ ವಿವಾಹ ಸಂಪೂರ್ಣ ನಿಷೇಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡು ಶಾಲಾ ಆವರಣ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಂಜೆ ವೇಳೆಯಲ್ಲಿ ಪೊಲೀಸ್ ಇಲಾಖೆಯಿಂದ ನಿಯಮಿತ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಆರೂಢ ಮಠದ ಪೂಜ್ಯ ಬಸವಲಿಂಗ ಶರಣರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್.ಐ. ಜೋಗೂರ ಅಧ್ಯಕ್ಷತೆ ವಹಿಸಿದ್ದರು.
ಆಲಮೇಲ ಗೆಳೆಯರ ಬಳಗದ ಮುಖ್ಯಸ್ಥ ಪ್ರಕಾಶ ಮಾಡ್ಯಾಳ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗಾರ, ಸುನೀತಾ ಗುಂಡದ, ಐಶ್ವರ್ಯ ಬೇಪಾರಿ, ಅಂಜಲಿ ಕನ್ನೊಳ್ಳಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪಯ್ಯ ಹಿರೇಮಠ ಆಲಮೇಲ
