“ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ..
ಬೆಂಗಳೂರು:
ಕೆಲ ದಿನಗಳಿಂದ ರಾಜಕೀಯ ಮರು ಪ್ರವೇಶದ ಬಗ್ಗೆ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಎಂಬ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ.
ಇದಲ್ಲದೇ ಅವರು ಬಸವಣ್ಣನವರನ್ನು ನೆನಸಿ ಅವರು ಹೇಳಿದ ಹಾಗೆ ಯಾವುದೇ ಜಾತಿ ಮತ ಭೇದ ಇಲ್ಲದ ಹಾಗೆ, ಮೇಲು ಕೀಳು ಇಲ್ಲದ ಹಾಗೆ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡುವ ಸಲುವಾಗಿ, ವಾಜಪೇಯಿ ಅವರನ್ನ ಸ್ಮರಿಸುತ್ತಾ ಸಾರ್ವಜನಿಕ ಬದುಕಿಗೆ ಬರಬೇಕು ಅಂತ ತೀರ್ಮಾನಿಸಿದ್ದೇನೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕಟ್ಟಿ ಮುಂದೆ ಹೆಜ್ಜೆ ಹಾಕುತ್ತೇನೆ. ಹೊಸ ಪಕ್ಷದೊಂದಿಗೆ ರಾಜ್ಯಾದ್ಯಂತ ಮನೆ ಮನೆಗೆ ಹೋಗುತ್ತೇನೆ, ರಾಜ್ಯದ ಅಭಿವೃದ್ಧಿ ಗುರಿ ಇಟ್ಟುಕೊಂಡು ಪಕ್ಷ ಸ್ಥಾಪನೆ ಮಾಡುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಘೋಷಿಸಿದರು.
ಬೆಂಗಳೂರಿನ ಪಾರಿಜಾತ ನಿವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜನಾರ್ದನ ರೆಡ್ಡಿ ತಮ್ಮ ಜೀವನದ ಪ್ರಮುಖ ಘಟನೆಗಳ ಮೆಲುಕು ಹಾಕಿಕೊಂಡರು.
ಗಣಿಗಾರಿಕೆ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದರು. ಅಕ್ರಮ ಗಣಿಗಾರಿಕೆಯೆಂದು ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡಿದರು. ಸತ್ಯವಾಗಿ ಹೇಳುತ್ತೇನೆ, ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನಾನು ಮಾಡಿದ್ದು ಸಕ್ರಮ ಗಣಿಗಾರಿಕೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನಾನು ನಿರ್ದೋಷಿಯಾಗಿ ಬರುತ್ತೇನೆ. ಅಕ್ರಮವಾಗಿ ನನ್ನನ್ನು ಬಂದನ ಮಾಡಲೇಬೇಕು ಅಂತ ಬಂಧನ ಮಾಡಿದರು. ಸುಷ್ಮಾ ಸ್ವರಾಜ್ ಗೆ ಸಹಾಯ ಮಾಡಿದ್ದಕ್ಕೆ 2011 ರಲ್ಲಿ ನನಗೆ ಬಂಧನ ಮಾಡಿದರು. ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ. ಅವರು ಇಬ್ಬರು ಮಾತ್ರ ನನಗೆ ಧೈರ್ಯ ತುಂಬಿದ್ದರು. ಅವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ ಎಂದರು.