ಸಾವಿರ ಕಾವ್ಯಗೋಷ್ಟಿಯ ಸಂಭ್ರಮದಲ್ಲಿ “ಕಾವ್ಯಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪಡೆದ ಮುತ್ತು.ಯ.ವಡ್ಡರ …….
ಬಾಗಲಕೋಟೆ(ಮಾರ್ಚ್.5) :
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ವಾಯ್.ವಡ್ಡರ ಇವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವಿಜಯನಗರ ಇವರ ಸಹಯೋಗದೊಂದಿಗೆ ಸಾವಿರ ಕಾವ್ಯ ಗೋಷ್ಠಿಯ ಸಂಭ್ರಮದಲ್ಲಿ ” ಕಾವ್ಯ ಶ್ರೀ ” ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲಾಯಿತು.
ಕೆ .ಶಿವರಾಮ ಅವಧೂದರ ಆಶ್ರಮ ಹಂಪಿಯಲ್ಲಿ ಫೆಬ್ರವರಿ 26 ರವಿವಾರದoದು ಸಾವಿರ ಕಾವ್ಯ ಗೋಷ್ಠಿಯ ಸಂಭ್ರಮದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿಗಳು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ:ಕೆ ರವೀಂದ್ರನಾಥ್,ಪ್ರಾಧ್ಯಾಪಕರು ಹಂಪಿ ವಿಶ್ವವಿದ್ಯಾಲಯ ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿದರು. ಕರ್ನಾಟಕ ರಾಜ್ಯ ಬರಹಗಾರ ಸಂಘದ ರಾಜ್ಯಾಧ್ಯಕ್ಷರು ಆಗಿರುವ ಶ್ರೀ ಮಧು ನಾಯಕ್ ಲಂಬಾಣಿಯವರು ಪ್ರಶಸ್ತಿಯನ್ನು ನೀಡಿದರು.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಹಿರೇಮಾಗಿ ಗ್ರಾಮದ ಶ್ರೀ ಮುತ್ತು ವಡ್ಡರ ರವರು ಪ್ರವೃತ್ತಿಯಲ್ಲಿ ಪ್ರತಿನಿತ್ಯ ಹಲವಾರು ಪತ್ರಿಕೆಗಳಿಗೆ ಅತ್ಯುತ್ತಮವಾದ ಕವನಗಳನ್ನು ಬರೆಯುತ್ತಾರೆ. ಹಾಗೂ ‘ಸವಿ ಮುಂಜಾನೆಯ ಸಿಹಿಮಾತು ‘ಎಂಬ ತಲೆ ಬರಹದಡಿಯಲಿ ನುಡಿಮುತ್ತುಗಳನ್ನು ಬರೆಯುತ್ತಿದ್ದರು . ತಾಲೂಕು ಮತ್ತು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನಗಳನ್ನು ವ್ಯಕ್ತಪಡಿಸಿದ್ದಾರೆ. ಸಾವಿರ ಕವಿಗೋಷ್ಠಿಯಲ್ಲಿ ಹೊರತರಲಾದ ಹುಡುಕಾಟ ಎಂಬ ಮಧು ನಾಯಕರವರ ಪುಸ್ತಕದಲ್ಲಿ ಶ್ರೀ ಮುತ್ತು ವಡ್ಡರವರ ” ಕ್ಷಮಿಸು ಕಂದ ” ಎಂಬ ಕವನವು ಸೇರ್ಪಡೆಯಾಗಿದೆ. ಸಾಹಿತ್ಯ ವಿಭಾಗದಲ್ಲಿ ಉದಯೋನ್ಮುಖವಾಗಿ ಬೆಳೆಯುತ್ತಿರುವ ಶ್ರೀ ಮುತ್ತು ವಡ್ಡರ ರವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ “ಕಾವ್ಯಶ್ರೀ ” ಪ್ರಶಸ್ತಿಯನ್ನು ಕೊಡಮಾಡಲಾಗಿದೆ.
ಮನೆಯ ಭಾಗ್ಯವಂತೆ ಹಡೆದವ್ವ..
ನವ ಮಾಸವ ಖುಷಿ ನೋವನು ಹೊತ್ತು
ಉದರದಿ ಹೊರ ಬಂದಾಗ ನೀಡಿ ಪ್ರೀತಿಯ ಮುತ್ತು
ಅತ್ತಾಗ ಕಂದನಿಗೆ ಹೃದಯದಿ ನೀಡಿ ಸಿಹಿಮುತ್ತು
ಹಸಿದಾಗ ಅಮೃತದಂತೆ ತಿನಿಸಿ ಕೈ ತುತ್ತು…
ಮುಕ್ಕೋಟಿ ದೇವರಿಗೂ ಮಿಗಿಲು ಹೆತ್ತವ್ವ
ಕರುಳ ಬಳ್ಳಿಯ ಉಸಿರಿನ ಗೆಳತಿ ಹಡೆದವ್ವ
ಕಂದನ ನಗುವಲಿ ನೋವ ಮರೆತೆ ನನ್ನವ್ವ
ಮಡಿಲಲಿ ಸ್ವರ್ಗ,ನಯನದಿ ದೇವರ ತೋರಿಸಿದೆ ತಾಯವ್ವ..
ಮೊದಲ ಗುರುವಾಗಿ ಮಮತೆಯ ವಿಶ್ವವಿದ್ಯಾಲಯವಾದಳು
ಎಷ್ಟೇ ಹಸಿವಾದರು ಮಕ್ಕಳಿಗೆ ಉಣಿಸಿ ಕಾಮಧೇನುವಾದಳು
ತನಗಾಗಿ ಬದುಕದೆ ಕುಟುಂಬಕ್ಕೆ ನೆರಳಾಗಿ ಕಲ್ಪವೃಕ್ಷವಾದಳು
ವರ್ಣಿಸುವ ಪದಗಳಿಗೂ ಸಿಗದೆ ತ್ಯಾಗಮಯಿಯಾದಳು..
ಗುಡಿ ಇರದ ದೇವರೇ ಬೆಳಸಿದೆ ನನ್ನ ರಾಜನಂತೆ
ಜೋಗುಳ ಹಾಡಿದ ತಾಯಿಗೆ ಮನದಿ ನಿತ್ಯ ಪೂಜ್ಯವಂತೆ
ನಮಿಸಿದರೆ ನಿನ್ನ ಪಾದಕ್ಕೆ ಉಜ್ವಲ ಭವಿಷ್ಯವಂತೆ
ಕಷ್ಟ ಸುಖಗಳಿಗೆ ಬೆನ್ನೆಲುಬಾದ ಮನೆಯ ಭಾಗ್ಯವಂತೆ..
ರಚನೆ-ಶ್ರೀ ಮುತ್ತು.ಯ.ವಡ್ದರ (ಶಿಕ್ಷಕರು)