ಶಿಕ್ಷಕ ಶ್ರೀ ಮುತ್ತು ವಡ್ಡರ ಅವರ ನಾಲ್ಕನೇ ಕೃತಿ – ಕೊಪ್ಪಳದ ಗವಿ ಮಠದಲ್ಲಿ ಬಿಡುಗಡೆ.
ಹಿರೇಮಳಗಾವಿ ಮೇ.02

ಕೊಪ್ಪಳದ ಶ್ರೀ ಗವಿಮಠದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ನಾಲ್ಕನೇ ಕೃತಿ ಬದಲಾಗು ನೀ ಬೆಳಕಾಗು ನೀ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮ ಪೂಜ್ಯ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಯಾಯಿತು. ಪರಮ ಪೂಜ್ಯರು ಇನ್ನೂ ಹೆಚ್ಚಿನ ಕೃತಿಗಳು ನಿಮ್ಮಿಂದ ನಾಡಿಗೆ ಪರಿಚಯವಾಗಲಿ ಶುಭವಾಗಲಿ ಎಂದು ಆಶೀರ್ವಾದ ನೀಡಿದರು.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುತ್ತು ಯ. ವಡ್ಡರ ಅವರು ಮೊದಲ ಬಾರಿಗೆ ವಿದ್ಯಾರ್ಥಿಗಳಿಗಾಗಿ ಸರಳ ಗಣಿತ ಪುಸ್ತಕ, ಎರಡನೇ ಬಾರಿಗೆ ನಾಡಿನ ಉದ್ದಗಲಕ್ಕೂ ಇರುವ ಎಲೆ ಮರೆ ಕಾಯಿಯ ಹಾಗೇ ಇರುವ ಸಾಧಕರನ್ನು ಗುರುತಿಸಿ ಎಲೆ ಮರೆ ಕಾಯಿಗಳು ಎಂಬ ಪುಸ್ತಕ ಹೊರ ತಂದು ಜೊತೆಗೆ ಇದೇ ವರ್ಷದ ಜನವರಿ ತಿಂಗಳಲ್ಲಿ ಸ್ಪೂರ್ತಿದಾಯಕ ಕವನಗಳ ಸನ್ಮಾರ್ಗದ ದುಂಬಿ ಎಂಬ ಮೂರನೇ ಕೃತಿ ಬಿಡುಗಡೆ ಮಾಡಿ ನಾಡಿನ ಎಲ್ಲ ಓದುಗರಿಂದ ಮೆಚ್ಚುಗೆ ಪಡೆದು ಕೊಂಡಿದ್ದಾರೆ. ಇದೀಗ ಎಲ್ಲ ರೀತಿಯಿಂದಲೂ ಸ್ಪೂರ್ತಿದಾಯಕವಾಗಿರುವ ಬದಲಾಗು ನೀ ಬೆಳಕಾಗು ನೀ ಈ ಪುಸ್ತಕವು ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ನಿರೂಪಕರಿಗಾಗಿ ಹಾಗೂ ಭಾಷಣಕಾರರಗಾಗಿ ಹೇಳಿ ಮಾಡಿಸಿರುವ ಪುಸ್ತಕ ಇದಾಗಿದೆ. ವಿದ್ಯಾರ್ಥಿಗಳು ಹೇಗೆ ಓದಬೇಕು ಜೀವನದಲ್ಲಿ ಅನೇಕ ಅವಮಾನ ಅಪಮಾನಗಳನ್ನು ಎದುರಿಸಿ ಹೇಗೆ ಮುಂದೆ ಬರಬೇಕು, ವಿದ್ಯಾರ್ಥಿಗಳು ಒಳ್ಳೆಯ ಹುದ್ದೆ ಸೇರಿ ಆ ಶಾಲೆಯ ಕೀರ್ತಿ ಹೇಗೆ ತರಬೇಕು, ಅದೇ ರೀತಿ ತಂದೆ ತಾಯಿಗಳ ಬಗ್ಗೆ ಗುರುಗಳ ಬಗ್ಗೆ ಮತ್ತು ಮಕ್ಕಳಲ್ಲಿ ಸಾಧಿಸುವ ಛಲ ಹುಟ್ಟಿಸುವಂತಹ ಪ್ರೇರಣಾದಾಯಕ ಸ್ಪೂರ್ತಿದಾಯಕ ಲೇಖನಗಳನ್ನು ಈ ಪುಸ್ತಕ ಒಳ ಗೊಂಡಿದೆ.

ಈ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಶಿಕ್ಷಕ ಶ್ರೀ ಮುತ್ತು ಯ. ವಡ್ಡರ ಅವರು ಪರಮ ಪೂಜ್ಯರನ್ನು ಭಕ್ತಿ ಭಾವದಿಂದ ಗೌರವಿಸಿ ಸನ್ಮಾನಿಸಿ ಪರಮ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಕುರಿತು ಬರೆದಿರುವಂತಹ ಕವನದ ಸ್ಮರಣಿಕೆಯನ್ನು ಪೂಜ್ಯರಿಗೆ ಅರ್ಪಿಸಿದರು. ಮಠದ ಆಡಳಿತ ಮಂಡಳಿ, ಸ್ವಾಮೀಜಿಗಳು, ಅಧಿಕಾರಿಗಳು ಹಾಗೂ ಮಠದ ಸರ್ವ ಸಿಬ್ಬಂದಿಯವರು, ಕವಿ ಮನಸ್ಸುಗಳು, ಶಿಕ್ಷಕಿಯರಾದ ಶ್ರೀಮತಿ ಮಲ್ಲಮ್ಮ ತಿರುಪತಿ ವಡ್ಡರ ಹಾಗೂ ಶ್ರೀ ಪ್ರವೀಣ್ ವಾಲಿಕಾರ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಶ್ರೀಮತಿ ಗಂಗಾ ಎಮ್ ವಡ್ಡರ, ಯುವ ಸಾಹಿತಿ ಜ್ಯೋತಿ ಆನಂದ ಚಂದುಕರ, ತಿರುಪತಿ, ಪ್ರತೀಕ್ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು. ಅನ್ನ ಅಕ್ಷರದ ಆಶ್ರಯ ನೀಡುತ್ತಿರುವ ಪುಣ್ಯ ಸ್ಥಳದಲ್ಲಿಯೇ ಪುಸ್ತಕವನ್ನು ಪರಮ ಪೂಜ್ಯರಿಂದ ಲೋಕಾರ್ಪಣೆ ಗೊಳಿಸಿ ಶ್ರೀ ಮುತ್ತು ವಡ್ಡರ ಹಾಗೂ ಅವರ ಆತ್ಮೀಯ ಸ್ನೇಹ ಜೀವಿಗಳು, ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

