ರಾಯಚೂರಿಗೆ ಏಮ್ಸ್ ಸ್ಥಾಪನೆಗೆ – ಒತ್ತಾಯಿಸಿ ಮನವಿ.
ಮಾನ್ವಿ ಜೂ.21

ಸಂವಿಧಾನದ ವಿಧಿ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯ ಹಲವಾರು ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದ್ದು, ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ತೀವ್ರ ಕೊರತೆ ಎದುರಿಸುತ್ತಿದೆ ಎಂದು ಏಮ್ಸ್ ಹೋರಾಟ ಸಮಿತಿ ಮಾನ್ವಿಯ ಸಂಚಾಲಕ ಎಚ್. ಶರ್ಪುದ್ದೀನ್ ಪೋತ್ನಾಳ್ ಹೇಳಿದರು.
ಇಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರ ಮುಖಾಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಕಳೆದ 1500 ದಿನಗಳಿಂದ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲಾಗಿದ್ದು, ಜಿಲ್ಲೆಯ ಜನರ ಬಹುಕಾಲದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆ, ತಾಯಿ ಮತ್ತು ಶಿಶು ಮರಣ ಪ್ರಮಾಣ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಬಡ ಹಾಗೂ ಗ್ರಾಮೀಣ ಭಾಗದ ಜನರು ಉತ್ತಮ ವೈದ್ಯಕೀಯ ಸೇವೆಗಳಿಗಾಗಿ ದೂರದ ನಗರಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಯಾದರೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ದೊರೆಯಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಎ.ಹೆಚ್.ಮುಖಿಂ, ರಾಜು ತಾಳಿಕೋಟೆ, ಬಿ.ವಿ.ರೆಡ್ಡಿ, ತಾಯಪ್ಪ.ಬಿ.ಹೊಸೂರು, ಅನಿಲ್ ಕುಮಾರ್, ಭೀಮರಾಯ್, ಮಹಾಂತೇಶ್ ಓಲೇಕಾರ್, ಆಲೀಂ ಖಾನ್, ರಾಜಶೇಖರ್ ಪಾಟೀಲ್ ಬೋಗಾವತಿ, ಶಂಕ್ರಪ್ಪ ನಕ್ಕುಂದಿ, ಕೆ.ಎನ್.ಸಂದೀಪ್ ಸೇರಿದಂತೆ ಏಮ್ಸ್ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

