ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ – ಕೃಷಿ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ.

ರಾಯಚೂರು ಜು.16

ಕೃಷಿ ಇಲಾಖೆ ನೇಮಕಾತಿಯಲ್ಲಿ ಸಿ&ಆರ್ (ವೃಂದ ಮತ್ತು ನೇಮಕಾತಿ) ನಿಯಮಗಳನ್ನು ಉಲ್ಲಂಘಿಸಿ ಬಿಇ ಬಯೋಟೆಕ್ ಹಾಗೂ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿ ಕೃಷಿ ವಿದ್ಯಾರ್ಥಿಗಳು ಸೋಮವಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಗೊಂಡಿರುವ ಕ್ರಮವನ್ನು ಖಂಡಿಸಿದ ವಿದ್ಯಾರ್ಥಿಗಳು, ಮೂಲ ಸಿ&ಆರ್ ನಿಯಮಗಳನ್ನು ಉಲ್ಲಂಘಿಸಿ ಅರ್ಹತೆಯ ಮಾನದಂಡಗಳಲ್ಲಿ ಬದಲಾವಣೆ ಮಾಡಿರುವುದು ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು, ಕೃಷಿ ಪದವೀಧರರ ಹಕ್ಕುಗಳನ್ನು ಕಡೆಗಣಿಸಲಾಗುತ್ತಿದ್ದು, ಅವೈಜ್ಞಾನಿಕ ‘ದೇಸಿ ಪ್ರೋಗ್ರಾಂ’ ಜಾರಿಯಿಂದ ರೈತರು ಕೂಡ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆರೋಪಿಸಿದರು. ಕೃಷಿ ಇಲಾಖೆಯ ನೇಮಕಾತಿಯಲ್ಲಿ ಕೃಷಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ, “ನಿಯಮ ಬಾಹಿರ ನೇಮಕಾತಿ ರದ್ದಾಗಬೇಕು”, “ಕೃಷಿ ವಿದ್ಯಾರ್ಥಿಗಳ ಭವಿಷ್ಯ ಕಸಿದು ಕೊಳ್ಳುತ್ತಿರುವ ಕೆ.ಇ.ಎ ಗೆ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನೂರಾರು ವಿದ್ಯಾರ್ಥಿಗಳು ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು, 2025 ರ ಏಪ್ರಿಲ್ 10 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ, ಹೊಸ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅರ್ಹತಾ ಮಾನದಂಡಗಳನ್ನು ನೇಮಕಾತಿ ಪ್ರಕ್ರಿಯೆ ಮಧ್ಯದಲ್ಲಿ ಬದಲಾಯಿಸಲು ಅವಕಾಶವಿಲ್ಲ ಎಂದು ತಿಳಿಸಿದರು. ಆದರೂ ಕೃಷಿ ಇಲಾಖೆ ಹಾಗೂ ಕೆಇಎ ಕೊನೆ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ‘ರೈಟೆಕ್’ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಿರುವುದು ಕಾನೂನು ಉಲ್ಲಂಘನೆ ಯಾಗಿದೆ ಎಂದು ಆರೋಪಿಸಿದರು.

ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಇ ಬಯೋಟೆಕ್ ಪದವೀಧರರಿಗೆ ಅವಕಾಶ ಕಲ್ಪಿಸಿರುವ ಕ್ರಮವನ್ನು ಕೃಷಿ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಕೃಷಿ ಶಿಕ್ಷಣದ ಹಿನ್ನೆಲೆ ಇಲ್ಲದ ಅಭ್ಯರ್ಥಿಗಳಿಗೆ ಕೃಷಿ ಇಲಾಖೆಯ ತಾಂತ್ರಿಕ ಹುದ್ದೆಗಳಲ್ಲಿ ಅವಕಾಶ ನೀಡುವುದು ಇಲಾಖೆಯ ಉದ್ದೇಶ ಹಾಗೂ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೃಷಿ ಕ್ಷೇತ್ರದ ತಾಂತ್ರಿಕ ಜ್ಞಾನ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಹಾಗೂ ರೋಗ ನಿಯಂತ್ರಣ ಸೇರಿದಂತೆ ಕೃಷಿ ಸಂಬಂಧಿತ ವಿಷಯಗಳಲ್ಲಿ ಪರಿಣತಿ ಹೊಂದಿರುವ ಕೃಷಿ ಪದವೀಧರರಿಗೆ ಆದ್ಯತೆ ನೀಡಬೇಕಾಗಿದ್ದು, ಬಿ.ಇ ಬಯೋಟೆಕ್ ಪದವೀಧರರನ್ನು ಈ ಹುದ್ದೆಗಳಿಗೆ ಪರಿಗಣಿಸುವ ನಿರ್ಧಾರವನ್ನು ಸರ್ಕಾರ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಆದ್ದರಿಂದ, ಕೃಷಿ ಇಲಾಖೆಯ ಎ.ಓ ಮತ್ತು ಎ.ಎ.ಓ ಹುದ್ದೆಗಳ ನೇಮಕಾತಿಯಿಂದ ಬಿ.ಇ ಬಯೋಟೆಕ್ ಪದವೀಧರರಿಗೆ ನೀಡಿರುವ ಅವಕಾಶವನ್ನು ತಕ್ಷಣವೇ ಹಿಂಪಡೆದು, ಮೂಲ ಸಿ&ಆರ್ (ವೃಂದ ಮತ್ತು ನೇಮಕಾತಿ) ನಿಯಮಗಳ ಅನ್ವಯ ಕೃಷಿ ಪದವೀಧರರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಸಂವಿಧಾನದ 309 ನೇ. ವಿಧಿಯಡಿ ರೂಪಿಸಲಾದ ಮೂಲ ಸಿ&ಆರ್ ನಿಯಮಗಳನ್ನು ಯಾವುದೇ ಸಾಮಾನ್ಯ ಸರ್ಕಾರಿ ಆದೇಶಗಳು ಮೀರುವಂತಿಲ್ಲ. ಹೀಗಾಗಿ ಕೃಷಿ ಇಲಾಖೆ ಹಾಗೂ ಕೆಇಎ ಕೈಗೊಂಡಿರುವ ಕ್ರಮದಿಂದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದ್ದು, ರೈಟೆಕ್ ವಿಶ್ವವಿದ್ಯಾಲಯಕ್ಕೆ ನೀಡಿರುವ ಅವಕಾಶವನ್ನು ತಕ್ಷಣವೇ ರದ್ದು ಪಡಿಸಿ ಮೂಲ ನಿಯಮಗಳ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button