ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದರೂ ನಿಲ್ಲದ ದಲಿತರ ಮೇಲಿನ ದೌರ್ಜನ್ಯ ವಿರುದ್ಧ – ಡಿ.ಎಸ್.ಎಸ್ ತಾಲೂಕ ಸಮಿತಿ ತೀವ್ರವಾಗಿ ಆಕ್ರೋಶಿಸಿ, ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ರೋಣ ಆ.08

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದರೂ ದಲಿತ ಸಮುದಾಯದ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ತೀವ್ರ ಖಂಡನೀಯ. ದಲಿತರಿಗೆ ಇಂದಿಗೂ ಸಂವಿಧಾನಾತ್ಮಕ ಸ್ವಾತಂತ್ರ್ಯ ಮತ್ತು ಸಮಾನತೆಯ ಬದುಕು ಸಿಗದಿರುವುದು ಅತ್ಯಂತ ದುರದೃಷ್ಟಕರ ಎಂದು ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರೋಣ ತಾಲೂಕು ಸಂಚಾಲಕರಾದ ಶ್ರೀ ಸೋಮು ನಾಗರಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶತ ಶತಮಾನಗಳಿಂದ ಶೋಷಣೆ ಮತ್ತು ನೋವುಗಳನ್ನು ಅನುಭವಿಸುತ್ತಾ ಬಂದಿರುವ ದಲಿತರನ್ನು ೨೧ ನೇ. ಶತಮಾನದಲ್ಲೂ ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ. ದೇವಸ್ಥಾನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದು, ನಮ್ಮ ಹಕ್ಕನ್ನು ನಾವು ಕೇಳಿದರೆ ಕೊಲೆ ಮಾಡುವುದು ಹಾಗೂ ಅಸ್ಪೃಶ್ಯತೆಯನ್ನು ಆಚರಿಸುವುದು ರಾಜ್ಯಾದ್ಯಂತ ಇಂದಿಗೂ ಜೀವಂತವಾಗಿದೆ. ದಲಿತರ ಮೀಸಲಾತಿಯ ಕುರಿತು ಹಗುರವಾಗಿ ಮಾತನಾಡುವ ಕೆಲ ಮೂರ್ಖರು ಸಮಾಜದ ವಾಸ್ತವತೆಯನ್ನು ಗ್ರಹಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ದೇವಸ್ಥಾನ ಪ್ರವೇಶಿಸಿದರು ಎನ್ನುವ ಕಾರಣಕ್ಕೆ ದಲಿತರನ್ನು ಕಂಬಕ್ಕೆ ಕಟ್ಟಿ ಹಾಕಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಹದ್ದಿನಾಳ ಗ್ರಾಮದ ದಲಿತ ಯುವಕ, ಬಿಎಸ್‌ಪಿ ಕಾರ್ಯಕರ್ತ ಭೂಮಾನಂದ ಅವರ ಬರ್ಬರ ಹತ್ಯೆ ಮಾಡಲಾಗಿದೆ. ಮಾದಿಗ ಸಮುದಾಯದ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ದಲಿತ ಬುದ್ಧಿಮಾಂದ್ಯ ಯುವತಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಲಾಗಿದೆ.

ದಲಿತರ ಮೇಲೆ ದೌರ್ಜನ್ಯ ಹತ್ಯೆ ಹಾಗೂ ಅತ್ಯಾಚಾರ ಎಸಗಿರುವ ಎಲ್ಲಾ ಪ್ರಕರಣಗಳ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಇಂತಹ ಪಾತಕಿಗಳಿಗೆ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ವಿಧಿಸುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಶೀಘ್ರ ನ್ಯಾಯಾಲಯಕ್ಕೆ ದೋಷಾ ರೋಪಣೆ ಪಟ್ಟಿ ಸಲ್ಲಿಸಬೇಕು.

ಕಾನೂನುಗಳು ಎಷ್ಟೇ ಬಲವಾಗಿದ್ದರೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಎಲ್ಲಾ ಪ್ರಕರಣಗಳಲ್ಲಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಉಗ್ರ ರೀತಿಯಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸೋಮು ನಾಗರಾಜ ಎಚ್ಚರಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button