ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ರೈತರ ಪಾಲಿಗೆ ಸಿಹಿ ಸುದ್ದಿ – ತೀವ್ರ ಬರ ಬಾಧಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ.
ಕೂಡ್ಲಿಗಿ ಸೆ.22

ಮತ್ತು ಕೊಟ್ಟೂರು ತಾಲೂಕಿನ ರೈತರಿಗೆ ದೊಡ್ಡ ಪರಿಹಾರದ ಸುದ್ದಿ ಬಂದಿದೆ. ರಾಜ್ಯ ಸರ್ಕಾರವು ಇಂದು ಪ್ರಕಟಿಸಿದ ಮೂರನೇ ಪಟ್ಟಿಯಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ತೀವ್ರ ಬರಬಾಧಿತ ಪ್ರದೇಶಗಳ ಪಟ್ಟಿಗೆ ಸೇರಿಸಿದೆ. ಈ ಮೂಲಕ ಸಾವಿರಾರು ರೈತರಿಗೆ ಬರ ಪರಿಹಾರದ ಭಾಗ್ಯ ದೊರೆತಿದೆ.
ಶಾಸಕರ ನಿರಂತರ ಪ್ರಯತ್ನದ ಫಲ:-
ಮೊದಲ ಪಟ್ಟಿಯಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ಕೈಬಿಡಲಾಗಿತ್ತು. ನಂತರದ ಎರಡನೇ ಪಟ್ಟಿಯಲ್ಲಿ ಈ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ನಮೂದಿಸಲಾಗಿದ್ದರೂ, ಅವುಗಳನ್ನು ತೀವ್ರ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಈ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರಾದ ಡಾ, ಶ್ರೀನಿವಾಸ್ ಎನ್.ಟಿ ಅವರು ನಿರಂತರವಾಗಿ ಸರ್ಕಾರದ ಗಮನ ಸೆಳೆದರು.
ಕ್ಷೇತ್ರದ ವಾಸ್ತವ ಸ್ಥಿತಿಯನ್ನು ಸರ್ಕಾರದ ಮುಂದೆ ಇಟ್ಟು, ಮರು ಸಮೀಕ್ಷೆ ಮಾಡಿಸಿದರು. ಅವರ ನಿರಂತರ ಪ್ರಯತ್ನ ಮತ್ತು ಹೋರಾಟದ ಫಲವಾಗಿ ಇಂದು ಪ್ರಕಟ ಗೊಂಡ ಮೂರನೇ ಪಟ್ಟಿಯಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ತೀವ್ರ ಬರ ಬಾಧಿತ ಪ್ರದೇಶಗಳೆಂದು ಸೇರಿಸಲಾಗಿದೆ.
ಈ ಸಂದರ್ಭದಲ್ಲಿ ರಜೆ ದಿನಗಳಲ್ಲಿಯೂ ನಿರಂತರ ಕಾರ್ಯನಿರ್ವಹಿಸಿ ಸಹಕರಿಸಿದ ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಶಾಸಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದರಿಂದ ವಿಶೇಷವಾಗಿ ರೈತರಿಗೆ ಸಿಗಲಿರುವ ಅನುಕೂಲಗಳು:-
1. ಬೆಳೆ ಪರಿಹಾರ:-
ಬರದಿಂದ ಹಾನಿಯಾದ ಬೆಳೆಗಳಿಗೆ ಪ್ರತಿ ಎಕರೆಗೆ ಪರಿಹಾರ ಧನ ನೀಡಲಾಗುತ್ತದೆ.
2. ಸಾಲ ಮುಂದೂಡಿಕೆ:-
ರೈತರ ಬ್ಯಾಂಕ್ ಸಾಲಗಳ ವಸೂಲಾತಿಯನ್ನು ಮುಂದೂಡಲಾಗುವುದು.
3. ಉದ್ಯೋಗ ಖಾತರಿ:-
ನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ ಖಾತರಿ ನೀಡಲಾಗುವುದು.
4. ಜಾನುವಾರು ಮೇವು ಮತ್ತು ನೀರು:-
ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.
5. ನೇರ ನಗದು ವರ್ಗಾವಣೆ:-
ಪರಿಹಾರ ಧನವನ್ನು ಡಿಬಿಟಿ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.
6. ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ:-
ಬೆಳೆ ವಿಮೆ ಮಂಜೂರಾತಿಗೆ ಆದ್ಯತೆ ನೀಡಲಾಗುತ್ತದೆ.
ಸರ್ಕಾರದ ಬದ್ಧತೆ:-
ರಾಜ್ಯ ಸರ್ಕಾರವು ರೈತರಿಗೆ ಎಲ್ಲಾ ರೀತಿಯ ಪರಿಹಾರ ಒದಗಿಸಲು ಬದ್ಧವಾಗಿದೆ. ಬರ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಲಾಗುವುದು. ಈ ಘೋಷಣೆ ಯಿಂದ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ರೈತರು ಸಂಕಷ್ಟದಿಂದ ಪಾರಾಗಲಿದ್ದಾರೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ

