“ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ”…..

ಇಂದಿನ ಶಿಕ್ಷಣ ಕೇವಲ ಹೊಟ್ಟೆ ಪಾಡಿನ ಶಿಕ್ಷಣವಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಬಹಳ ಇರುತ್ತದೆ. ಏಕೆಂದರೆ ಈ ಹಂತದಲ್ಲಿ ಮಕ್ಕಳು ತಪ್ಪು ತಿಳುವಳಿಕೆ ಹಾಗೂ ತಪ್ಪು ಹಾದಿ ಹಿಡಿಯುವ ಸಂಭವ ಹೆಚ್ಚು ಇರುವುದು. ಈ ಹಂತದಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಿದರೆ, ಮುಂದೆ ಮಗು ಎಂದಿಗೂ ತಪ್ಪು ಹಾದಿ ಹಿಡಿಯುವುದಿಲ್ಲ. ಆದರೆ ಈ ಪ್ರಯತ್ನ ಮಗುವಿಗೆ ಮನೆಯಲ್ಲಿಯೇ ಆರಂಭಿಸಬೇಕು. ಏಕೆಂದರೆ ಮಗುವಿಗೆ ಮನೆಯೇ ಮೊದಲ ಪಾಠಶಾಲೆ ಯಾಗಿರುತ್ತದೆ. ಇಂದು ಮನೆಯಲ್ಲಾಗಲಿ ಶಾಲೆಯಲ್ಲಿ ಆಗಲಿ ಮಗುವಿಗೆ ಉತ್ತಮ ಸಂಸ್ಕಾರ ನೀಡಲಿಲ್ಲವೆಂದರೆ. ನಾವು ನೀಡುವ ಪಠ್ಯ ಪುಸ್ತಕದ ಶಿಕ್ಷಣ ಕೇವಲ ಅಕ್ಷರ ಜ್ಞಾನವನ್ನಷ್ಟೇ ಕಲಿಸುತ್ತದೆ ಹೊರತು ಸಂಸ್ಕಾರವನ್ನು ಎಂದಿಗೂ ನೀಡಲಾರದು. ಶಾಲೆಯಲ್ಲಿ ನೀಡುವ ಪುಸ್ತಕ ಜ್ಞಾನದ ಅರಿವು ಮಕ್ಕಳಿಗೆ ಬದುಕುವ ದಾರಿಯನ್ನು ತೋರಿಸಿದರೆ, ಮೌಲ್ಯ ಶಿಕ್ಷಣ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ. ಪಠ್ಯ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಇವರೆಡಕ್ಕೂ ಹೋಲಿಸಿ ನೋಡಿದರೆ. ಮೌಲ್ಯ ಶಿಕ್ಷಣವೇ ಉನ್ನತ ಮಟ್ಟದ್ದು. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ವಿಷಯ ಹಬ್ಬಿತು. ಅದೇನೆಂದರೆ ಒಂದು ಮಗು ಅದಕ್ಕೆ ನೋಡುವುದಕ್ಕೆ ಮೊಬೈಲ್ ಕೊಡಲಿಲ್ಲವೆಂದು ಆ ಮಗು ರಾತ್ರಿ ಮಲಗಿದ್ದಾಗ ತನ್ನ ತಂದೆ ತಾಯಿ ಹಾಗೂ ತನ್ನ ಸ್ವಂತ ಸೋದರಿಯನ್ನೇ ಚಾಕುವಿನಿಂದ ತಿವಿದು ಕೊಂದಿತು ಎಂದು. ಕೇವಲ ಮೊಬೈಲ್ ಗಾಗಿ ತನ್ನ ಸ್ವಂತದವರನ್ನೇ ಕೊಲ್ಲುವಂತಹ ಹೀನ ಮನಸ್ಥಿತಿಗೆ ಆ ಮಗು ತಲುಪಿದೆಯೆಂದರೆ ನಮ್ಮಲ್ಲಿ ನೈತಿಕತೆ ಯಾವ ರೀತಿ ಕುಸಿಯುತ್ತಿದೆ ಎಂಬುದನ್ನು ಆಲೋಚಿಸ ಬೇಕು. ಅಷ್ಟೇ ಅಲ್ಲ ಇಂದು ಮನುಷ್ಯನಲ್ಲಿ ಎಷ್ಟು ಸ್ವಾರ್ಥ ಹೆಚ್ಚುತ್ತಿದೆ ಎಂದರೆ. ನಾನು ಬದುಕ ಬೇಕು ಬೇರೆಯವರು ಹೇಗಾದರೂ ಹಾಳಾಗಲಿ ಎಂಬ ಮನೋ ಧೋರಣೆ ಪ್ರತಿಯೊಬ್ಬರಲ್ಲಿ ನೋಡುತ್ತೇವೆ. ಹಿಂದೆ ಜನರಿಗೆ ಬಡತನವಿದ್ದರೂ ಆಸೆಗಳಿರಲಿಲ್ಲ. ಆದರೆ ಇಂದು ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಮನುಷ್ಯನಲ್ಲಿ ಇನ್ನಷ್ಟು ಬೇಕೆಂಬ ಆಸೆ ಹೆಚ್ಚುತ್ತಿದೆ. ಇಂದು ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ಯಾರು ನೀಡುತ್ತಿಲ್ಲ. ಹಿಂದೆಯಾದರೆ ರಾಮಾಯಣ ಮಹಾ ಭಾರತದಂತಹ ಹರಿ ಕಥೆಗಳನ್ನು ಕೇಳುತ್ತಿದ್ದರು. ಆದರೆ ಇಂದು ಮಕ್ಕಳಿಗೆ ಮೊಬೈಲ್ ಸರ್ವಸ್ವವಾಗುತ್ತಿದೆ. ಶಾಲಾ ಹಂತದಲ್ಲಿ ನೋಡಿದಾಗ ಪ್ರತಿ ಶಾಲೆಯಲ್ಲಿ ವಾರದಲ್ಲಿ ಒಮ್ಮೆ ಮೌಲ್ಯ ಶಿಕ್ಷಣಕ್ಕಾಗಿ ಒಂದು ಅವಧಿಯನ್ನು ನಿಗದಿ ಪಡಿಸ ಲಾಗಿರುತ್ತದೆ. ಆ ಅವಧಿಯಲ್ಲಿ ಯಾವ ಶಿಕ್ಷಕರೂ ಸಹ ಮೌಲ್ಯ ಶಿಕ್ಷಣವನ್ನು ನೀಡುವುದಿಲ್ಲ. ಬದಲಾಗಿ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪಾಠಗಳನ್ನು ಬೋಧಿಸುತ್ತಾರೆ. ಏಕೆಂದರೆ ಅಧಿಕ ಕಾರ್ಯಭಾರದ ಒತ್ತಡದಿಂದ. ಇನ್ನೂ ಶಾಲೆಗೆ ತಪಾಸಣೆಗೆ ಬಂದ ಅಧಿಕಾರಿಗಳು ಕೇವಲ ಫಲಿತಾಂಶ ಹೆಚ್ಚಿಸುವ ವಿಚಾರವಾಗಿ ಸಲಹೆ ಸೂಚನೆಗಳನ್ನು ನೀಡಿತ್ತಾರೆ ಹೊರತು ಉತ್ತಮ ಮೌಲ್ಯಗಳನ್ನು ಕಲಿಸಿ ಎಂದು ಯಾವ ಅಧಿಕಾರಿಗಳೂ ಹೇಳುವುದಿಲ್ಲ. ಇನ್ನೂ ಮಕ್ಕಳಿಗೆ ನೈತಿಕ ಶಿಕ್ಷಣ ಹೇಗೆ ಸಿಗಬೇಕು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ಮಕ್ಕಳಿಗೆ ಬಾಲ್ಯದಿಂದಲೇ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಬೇಕೆಂದು. ಸ್ವಾಮೀಜಿ ಹೇಳುತ್ತಾರೆ, ದೇಹಕ್ಕೆ ವರ್ಚಸ್ಸಿನ ರುಮಾಲಾದ ದೇವರು ನಮ್ಮ ಶರೀರದಲ್ಲಿ ನಿಮಿಷಕ್ಕೆ 96 ಬಾರಿ ಹಾಜರಾಗುತ್ತಾನೆ ಎಂದು. ಹೇಗೆಂದರೆ ನಿಮಿಷಕ್ಕೆ 72 ಬಾರಿ ಹೃದಯ ಬಡಿತ. ನಿಮಿಷಕ್ಕೆ 22 ಬಾರಿ ಉಸಿರಾಟ. ನಿಮಿಷಕ್ಕೆ ಒಂದು ಬಾರಿ ಎಂಜಲು ನುಂಗುವುದು. ಹಾಗೂ ನಿಮಿಷಕ್ಕೆ ಒಂದು ಬಾರಿ ಕಣ್ಣು ರೆಪ್ಪೆ ಬಡಿಯುವುದರ ಮುಖಾಂತರ. ಆದರೆ ಇಂತಹ ದೇವರು ಇಂದು ಯಾರಿಗೂ ಬೇಡವಾಗಿದೆ. ಒಟ್ಟಾರೆಯಾಗಿ ಹೇಳ ಬೇಕೆಂದರೆ ಇಂದಿನ ಜನರು ದೇವರೇ ಅಲರ್ಜಿ ಎನ್ನುವ ರೀತಿ ವರ್ತಿಸುತ್ತಾರೆ. ತರಗತಿಯಲ್ಲಿ ಮಕ್ಕಳಿಗೆ ದೇವರು ಧರ್ಮದ ವಿಚಾರವಾಗಿ ಹೇಳಿದರೆ ನಗುತ್ತಾರೆ. ಏಕೆಂದರೆ ಇಂತಹ ಶಬ್ದಗಳನ್ನು ಅವರು ಮನೆಯಲ್ಲೂ ಹೇಳಿರುವುದಿಲ್ಲ. ಮತ್ತು ಶಾಲೆಯಲ್ಲೂ ಸಹ ಯಾವ ಶಿಕ್ಷಕರೂ ಹೇಳದಿರುವುದೇ ಕಾರಣ. ಇಂತಹ ಶೋಚನೀಯ ಸ್ಥಿತಿ ನಮ್ಮದಾಗುತ್ತಿದೆ. ಇನ್ನಾದರೂ ಎಚ್ಚೆತ್ತು ಮಕ್ಕಳಿಗೆ ಶಿಕ್ಷಕರು ಮತ್ತು ತಾಯಿ-ತಂದೆಯರು ನೈತಿಕ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸ ಬೇಕು.


– ಲೇಖನ:-
ಶ್ರೀಮತಿ ಶಶಿಕಲಾ ವೈ, ಹಿಂದಿ ಭಾಷಾ ಸಹ ಶಿಕ್ಷಕರು,
ಸರ್ಕಾರಿ ಪ್ರೌಢ ಶಾಲೆ, ಜೆ.ಎನ್ ಕೋಟೆ, ಚಿತ್ರದುರ್ಗ
ತಾಲೂಕು ಮತ್ತು ಜಿಲ್ಲೆ.ದೂರವಾಣಿ:-9483770793

