ಮಕ್ಕಳಲ್ಲಿ ದೇಶ ಭಕ್ತಿ, ಸೈನಿಕರ ಬಗ್ಗೆ ಗೌರವ ಮೂಡಿಸಿದ – ವಿಶಿಷ್ಟ ಸ್ವಾತಂತ್ರ್ಯೋತ್ಸವ ಆಚರಣೆ.
ಮುದ್ದೇಬಿಹಾಳ ಆ.15



ದೇಶಾದ್ಯಂತ 80 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ತಾಲ್ಲೂಕಿನ ಹುಲ್ಲೂರಿನ ಎಸ್.ಎನ್.ಡಿ ಶಾಲೆಯಲ್ಲಿ ಸೈನಿಕರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಮಕ್ಕಳಲ್ಲಿ ದೇಶ ಭಕ್ತಿ ಹಾಗೂ ‘ನಾನೂ ಸೈನಿಕನಾಗಬೇಕು’ ಎಂಬ ಸ್ಫೂರ್ತಿ ಮೂಡಿಸುವ ಉದ್ದೇಶದಿಂದ ಜಟ್ಟಗಿ ಗ್ರಾಮದ ಸೈನಿಕ ಬಾಪುಗೌಡ ಗೌಡರ ಹಾಗೂ ಹುಲ್ಲೂರು ಗ್ರಾಮದ ಸೈನಿಕ ಶ್ರೀಶೈಲ ಜಾಲಾಪೂರ ಅವರನ್ನು ವಿಶೇಷವಾಗಿ ಆಹ್ವಾನಿಸಲಾಯಿತು. ಸೈನಿಕರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತಂದು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಸೈನಿಕರಿಗೆ ನೀಡಿದ ಗೌರವವನ್ನು ಕಂಡ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಸೈನಿಕರ ಸಮ್ಮುಖದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶ ಸೇವೆ ಹಾಗೂ ದೇಶ ಭಕ್ತಿಯ ಭಾವನೆಯನ್ನು ಮತ್ತಷ್ಟು ಗಟ್ಟಿ ಗೊಳಿಸಿತು.
ನಂತರ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹಾಗೂ ದೇಶ ಭಕ್ತಿಯ ಕುರಿತು ತಮ್ಮ ಮುಗ್ಧ ಮಾತುಗಳಲ್ಲಿ ಭಾಷಣ ಮಾಡಿದರು. ಪುಟ್ಟ ಮಕ್ಕಳಿಂದ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಮಕ್ಕಳ ಪ್ರತಿಭೆ ಹಾಗೂ ದೇಶ ಭಕ್ತಿಯ ಅಭಿವ್ಯಕ್ತಿ ನೆರೆದವರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೈನಿಕ ಬಾಪುಗೌಡ ಗೌಡರ, “ನಾನು ಸೈನ್ಯಕ್ಕೆ ಸೇರಿದ್ದು ಕೇವಲ ನೌಕರಿಗಾಗಿ ಅಲ್ಲ ದೇಶ ಸೇವೆ ಮಾಡುವ ಉದ್ದೇಶದಿಂದ. ಪರಮ ವೀರ ಪ್ರಶಸ್ತಿ ಪಡೆಯುವ ಗುರಿಯೊಂದಿಗೆ ಹಾಗೂ ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಸಂಕಲ್ಪದಿಂದ ಸೈನ್ಯ ಸೇರಿದ್ದೇನೆ. ದೇಶದ ಮಾತೆಯ ಸೇವೆಯಲ್ಲಿ ಇಬ್ಬರು ದೇಶ ದ್ರೋಹಿಗಳನ್ನು ಮಟ್ಟ ಹಾಕಿದ್ದೇನೆ” ಎಂದು ತಮ್ಮ ಅನುಭವ ಹಂಚಿ ಕೊಂಡರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್ ಕೊಪ್ಪ ಮಾತನಾಡಿ, “ಪವಿತ್ರವಾದ ರಾಷ್ಟ್ರಧ್ವಜವನ್ನು ಕಳೆದ 14 ವರ್ಷಗಳಿಂದ ಸೈನಿಕರ ಅಮೃತ ಹಸ್ತದಿಂದಲೇ ಧ್ವಜಾರೋಹಣ ಮಾಡಿಸುತ್ತಿದ್ದೇನೆ.
ನಾವು ನೆಮ್ಮದಿಯಿಂದ ಬದುಕ ಬೇಕಾದರೆ, ತಮ್ಮ ನೆಮ್ಮದಿಯನ್ನು ದೇಶಕ್ಕಾಗಿ ಅರ್ಪಿಸುವ ಸೈನಿಕರೇ ನಿಜವಾದ ದೊಡ್ಡವರು” ಎಂದು ಹೇಳಿದರು. ಅವರ ಮಾತುಗಳನ್ನು ಕೇಳುತ್ತಿದ್ದ ವೇಳೆ ನೆರೆದವರ ಕಣ್ಣಾಲಿಗಳಲ್ಲಿ ನೀರು ತುಂಬಿ ಕೊಂಡಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿ ಯಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಚೈತ್ರಾ ನೆರವೇರಿಸಿದರು. ನಿರೂಪಣೆಯನ್ನು ಭಾಗ್ಯಶ್ರೀ ಕಂಬಾರ ನಿರ್ವಹಿಸಿದರು. ವಂದನಾರ್ಪಣೆಯನ್ನು ದಶರಥ ನೆರವೇರಿಸಿದರು.
ಸೈನಿಕರ ಸಮ್ಮುಖದಲ್ಲಿ ನಡೆದ ಈ ವಿಶಿಷ್ಟ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ದೇಶ ಸೇವೆ ಹಾಗೂ ಸೈನಿಕರ ಬಗ್ಗೆ ಗೌರವವನ್ನು ಮೂಡಿಸುವಲ್ಲಿ ಯಶಸ್ವಿ ಯಾಯಿತು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

