ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಉದ್ಯೋಗ ಗಿಟ್ಟಿಸಿದ ನಾಲ್ವರು..!?
ಚಿತ್ರದುರ್ಗ:-
ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಉದ್ಯೋಗ ಗಿಟ್ಟಿಸಿದ ನಾಲ್ವರು, ಇದಕ್ಕೆ ಸಹಾಯ ಮಾಡಿದ ಮೂವರು ಕಾಯಂ ನೌಕರರು ಹಾಗೂ ನಕಲಿ ದಾಖಲೆ ನೀಡಿ ಕೆಲಸಕ್ಕೆ ಪ್ರಯತ್ನಿಸಿದ ಒಬ್ಬ ಸೇರಿ ಎಂಟು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ತನ್ನ ಅಣ್ಣ ಸಿ.ಕೆ.ಮಹಮದ್ ಷೇಕ್ ಬೆಸ್ಕಾಂನಲ್ಲಿ ಸಹಾಯಕ ಮಾರ್ಗದಾಳುವಾಗಿ ಕೆಲಸ ಮಾಡುತ್ತಿದ್ದರು. ಅವರು ಮೃತಪಟ್ಟಿದ್ದರಿಂದ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಸಿ.ಕೆ.ಫೈಜಾನ್ ಮುಜಾಹಿದ್ ಎಂಬಾತ ಅರ್ಜಿ ಸಲ್ಲಿಸಿದ್ದ. ದಾಖಲಾತಿ ಪರಿಶೀಲನೆ ವೇಳೆ ಮಹಮದ್ ಷೇಕ್ ಹೆಸರಿನವರು ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಅಪಘಾತದಿಂದ ಮೃತಪಟ್ಟಿಲ್ಲ. ಇದು ನಕಲಿ ದಾಖಲೆ ಎಂದು ಬೆಸ್ಕಾಂ ಚಿತ್ರದುರ್ಗ ಉಪವಿಭಾಗದ ಎಇಇ ನಾಗರಾಜ್ ಡಿ. 11 ರಂದು ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು 10 ಮಂದಿ ಆರೋಪಿತರಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಕೊಡಿಸುವುದರಲ್ಲಿ ಮೂವರು ಕಾಯಂ ನೌಕರರಿದ್ದಾರೆ.
ಅದರಲ್ಲಿ ಸಹಾಯಕ ಬೆಸ್ಕಾಂ ಅಧಿಕಾರಿ ಎಲ್.ರವಿ ಮಾಸ್ಟರ್ ಮೈಂಡ್ ಆಗಿದ್ದಾರೆ. ಇವರೊಟ್ಟಿಗೆ ಅಧೀಕ್ಷಕ ಇಂಜಿನಿಯರ್ ಎಸ್.ಟಿ.ಶಾಂತಮಲ್ಲಪ್ಪ, ಸಹಾಯಕ ಎಚ್.ಸಿ.ಪ್ರೇಮ್‌ಕುಮಾರ್ ಕೈಜೋಡಿಸಿದ್ದು, ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ನಕಲಿ ಅನುಕಂಪ ಆಧಾರಿತ ಮಾರ್ಗದಾಳು ಹುದ್ದೆಗೆ ಅರ್ಜಿ ಸಲ್ಲಿಸಿದ ಫೈಜಾನ್ ಮುಜಾಹಿದ್, ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದ ಕಿರಿಯ ಸಹಾಯಕರಾದ ವಿ.ವೀರೇಶ್, ಹರೀಶ್, ಕಿರಿಯ ಇಂಜಿನಿಯರ್ ಎಂ.ಆರ್.ಶಿವಪ್ರಸಾದ್, ಸಹಾಯಕ ಸಿ.ರಘುಕಿರಣ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನಿಬ್ಬರು ಸಹಾಯಕರಾದ ಜೆ.ರಕ್ಷಿತ್, ಓ.ಕಾರ್ತಿಕ್ ತಲೆಮರೆಸಿಕೊಂಡಿದ್ದು, ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು.
ಸಿಪಿಐ ಎಂ.ಎಸ್.ರಮೇಶ್‌ರಾವ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಮಂಜುನಾಥ ಲಿಂಗಾರೆಡ್ಡಿ, ಸಚಿನ್ ಬಿರಾದಾರ್, ಚಂದ್ರಶೇಖರ್ ಹಾಗೂ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದರು.