ದ್ವಿಶತಕ ಸಂಭ್ರಮದಲ್ಲಿ ಎತ್ತರಕ್ಕೆ ಜಿಗಿದು ಅರ್ಧದಲ್ಲೇ ಆಟ ಬಿಟ್ಟು ಪೆವಿಲಿಯನ್ ಸೇರಿದ ಡೇವಿಡ್ ವಾರ್ನರ್..
ದಕ್ಷಿಣ ಆಫ್ರಿಕಾ ವಿರುದ್ಧ ಡೇವಿಡ್ ವಾರ್ನರ್ 200, ಖುಷಿಯಲ್ಲಿ ಎತ್ತರಕ್ಕೆ ಜಿಗಿದು ಕಾಲಿಗೆ ಗಾಯ ಮಾಡಿಕೊಂಡು ಕುಂಟುತ್ತಲೇ ಪೆವಿಲಿಯನ್ ಸೇರಿದ ವಾರ್ನರ್
ಮೆಲ್ಬರ್ನ್ (ಆಸ್ಟ್ರೇಲಿಯಾ) :
ವೃತ್ತಿಜೀವನದ 100ನೇ ಟೆಸ್ಟ್‌ನಲ್ಲಿ ಅವಿಸ್ಮರಣೀಯ ದ್ವಿಶತಕ ಬಾರಿಸಿದರೂ ಡೇವಿಡ್ ವಾರ್ನರ್ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. ದ.ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಮಂಗಳವಾರ 200 ರನ್ ಬಾರಿಸಿದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದಾಗ ವಾರ್ನರ್ ಕಾಲಿಗೆ ಗಾಯವಾಗಿದ್ದು, ಅರ್ಧದಲ್ಲೇ ತಮ್ಮ ಆಟ ನಿಲ್ಲಿಸಿ ಹೊರಗೆ ನಡೆದರು .
ಸತತ ವೈಫಲ್ಯದಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ವಾರ್ನರ್ ಈ ಪಂದ್ಯದಲ್ಲಿ ತಮ್ಮ ಎಂದಿನಂತಿನ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಉಸ್ಮಾನ್ ಖವಾಜ(01), ಲ್ಯಾಬುಶೇನ್(14) ವಿಕೆಟ್ ಬೇಗನೇ ಕಳೆದುಕೊಂಡ ಬಳಿಕ ಸ್ಟೀವ್ ಸ್ಮಿತ್ ಜೊತೆ 239 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯದರು. ಸ್ಮಿತ್ 85 ರನ್‌ಗೆ ನಿರ್ಗಮಿಸಿದ ಬಳಿಕ ಟ್ರ್ಯಾವಿಡ್ ಹೆಡ್ ಜೊತೆಯಾದ ವಾರ್ನರ್ 77ನೇ ಓವರಲ್ಲಿ ಟೆಸ್ಟ್‌ನ ತಮ್ಮ 2ನೇ ದ್ವಿಶತಕ ಪೂರ್ಣಗೊಳಿಸಿದರು. 254 ಎಸೆತಗಳಲ್ಲಿ 16 ಬೌಂಡರಿ, 2 ಸಿಕ್ಸರ್‌ನೊಂದಿಗೆ 200 ರನ್ ಸಿಡಿಸಿದರು. ಇದೇ ಖುಷಿಯಲ್ಲಿ ಮೇಲಕ್ಕೆ ಜಿಗಿದು ಕಾಲಿಗೆ ಗಾಯ ಮಾಡಿಕೊಂಡರು , ನಂತರ ಅವರಿಗೆ ಬಳಿಕ ಬ್ಯಾಟಿಂಗ್ ಮುಂದುವರಿಸಲು ಆಗಲಿಲ್ಲ. ನೋವಿನಿಂದಲೆ ಸಹಾಯಕ ಸಿಬ್ಬಂದಿಯ ನೆರವಿನಿಂದ ಮೈದಾನ ತೊರೆದರು.
ಆಫ್ರಿಕಾದ 189 ರನ್‌ಗೆ ಉತ್ತರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಆಸೀಸ್ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 386 ರನ್ ಕಲೆ ಹಾಕಿದ್ದು, 197 ರನ್ ಮುನ್ನಡೆ ಸಾಧಿಸಿದೆ. ಕ್ಯಾಮರೂನ್ ಗ್ರೀನ್(06) ಕೈಬೆರಳ ನೋವಿನಿಂದಾಗಿ ಪೆವಿಲಿಯನ್‌ಗೆ ಮರಳಿದ್ದು, ಟ್ರ್ಯಾವಿಸ್ ಹೆಡ್(48) ಕ್ರೀಸ್ ಕಾಯ್ದುಕೊಂಡಿದ್ದಾರೆ.