ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ ಇಂದು ದೆಹಲಿಗೆ ಆಗಮನ…!

ನವದೆಹಲಿ : 

74ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ ಅಲ್ ಸಿಸಿ ಅವರನ್ನು ಆಹ್ವಾನಿಸಲಾಗಿದ್ದು, ಅವರು ಇಂದು ಸಂಜೆ ದೆಹಲಿಗೆ ಆಗಮಿಸಲಿದ್ದಾರೆ.ಭಾರತದ ಗಣರಾಜ್ಯೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷರನ್ನು ಆಹ್ವಾನಿಸಿರುವುದು ಇದೇ ಮೊದಲು.

ಅಬ್ದುಲ್ ಫತ್ತಾಹ ಅವರ ಅಧಿಕೃತ ಭೇಟಿಗಾಗಿ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಅವರೊಂದಿಗೆ ಬಂದಿಳಿಯಲಿದೆ.

ಅಬ್ದುಲ್ ಫತ್ತಾಹ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಇತರರನ್ನು ಭೇಟಿಯಾಗಲಿದ್ದಾರೆ.

ಅಬ್ದುಲ್ ಫತ್ತಾಹ ಅವರಿಗೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ಕೋರಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಗಣರಾಜ್ಯೋತ್ಸವದಂದು ರಾಜಪಥದಲ್ಲಿ ನಡೆಯಲಿರುವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಅಬ್ದುಲ್ ಫತ್ತಾಹ ಸಾಕ್ಷಿಯಾಗಲಿದ್ದಾರೆ. ಜತೆಗೆ ಈಜಿಪ್ಟ್ ಸೇನಾ ತುಕಡಿಯು ಪರೇಡ್‌ನಲ್ಲಿ ಭಾಗವಹಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಅಬ್ದುಲ್, ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದು, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಸಂಜೆ ವೇಳೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ಔತಣಕೂಟದಲ್ಲಿ ಅಬ್ದುಲ್ ಭಾಗಿಯಾಗಲಿದ್ದಾರೆ. ಜನವರಿ 27ರಂದು ಅಬ್ದುಲ್, ಈಜಿಪ್ಟ್‌ಗೆ ಮರಳಲಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button