“ಬಿಳಿ ಹಾಳೆಯ ಗತ್ತು ಕೆಂಪು ಶಾಹಿಯ ಕರಾಮತ್ತು”…..

ಬಿಳಿಯ ಹಾಳೆಯ ಮೇಲೆ ಅರಳಿದಕೆಂಪು ಶಾಹಿಯ ಕರಾಮತ್ತುಆಂತರ್ಯದಿ ಮೂಡುವ ಪ್ರಶ್ನೆಗಳಿಗೆಚಂದಿದೆ ಉಸುರಿಸೊ ಗಮ್ಮತ್ತು….

ಸ್ವಚ್ಛಂದ ಮನವೆಂಬ ಬಿಳಿ ಹಾಳೆಯ ಮೇಲೆ ನಮೂದಿಸಿರುವ ಆಸೆ, ಅಪೇಕ್ಷೆ, ಸಮೀಕ್ಷೆ,ನಿರೀಕ್ಷೆ, ಪರೀಕ್ಷೆ ,ನಿವೇದನೆ ,ಸಂವೇದನೆಗಳೆಂಬ ಪ್ರಶ್ನೆಗಳ ಮೌಲ್ಯಾಂಕವನ್ನು ಸಾಕಲ್ಯವೆಂಬ ಕೆಂಪು ಶಾಹಿಯ ಅಳತೆಗೋಲಿನ ಮೂಲಕ ಪಕ್ವತೆಯುಳ್ಳ ಸ್ಪಷ್ಟ ಹಾಗು ಉತ್ತರ ನೀಡಿರುವುದನ್ನು ಶ್ರೀಮತಿ ಡಿ ಶಬ್ರಿನಾ ಅಹಮದ್ ಅಲಿ ಕವಯತ್ರಿಯವರ ಕವನ ಸಂಕಲನದ ತುಂಬೆಲ್ಲ ನೋಡಬಹುದಾಗಿದೆ ಹಾಗೆಯೆ ಓದಿ ಅರ್ಥೈಸಿ ಕೊಳ್ಳಬಹುದಾಗಿದೆ. ನಾ ಕಂಡಂತೆ ಇವರೊಬ್ಬ ಅದ್ಭುತ ವಾಕ್ಚತುರ್ಯವುಳ್ಳ ದಿಟ್ಟ ಮಹಿಳೆ. ಪುಸ್ತಕ ಪ್ರೇಮಿ, ಬರೆಯುವುದಕ್ಕಿಂತ ಓದು ಇವರ ಪ್ರಿಯ ಹವ್ಯಾಸವೆಂದರೆ ತಪ್ಪಾಗಲಾರದು.ಅಪ್ಪಟ ಕನ್ನಡದ ಕೂಸು ನಿರರ್ಗಳ ಮಾತುಗಾರ್ತಿ.ನಾನು ಕೂಡ ಅವರ ಮಾತಿಗೆ ಚಕಿತಗೊಂಡಿರುವುದುಂಟು.ಈ ಕವಯತ್ರಿಗೆ ವಿಚಾರಗಳ ಸ್ಪಷ್ಟತೆಯ ಬಗ್ಗೆ ಅರಿವಿದ್ದು; ಇವರ ಮಾತಿನಲ್ಲಿ ನಿರರ್ಗಳತೆಯಿದೆ.ಮಾತಿನಲ್ಲಷ್ಟೆಯಲ್ಲದೆ ಬರೆಹದಲ್ಲೂ ಕೂಡ ತಮ್ಮ ಅದ್ಭುತವಾದ ಛಾಪನ್ನು ಮೂಡಿಸಿರುವುದನ್ನು ನಾ ನೋಡುತ್ತಲೆ ಬಂದಿರುವೆ.ಇವರಂತು ಪಾದರಸದಂತೆ ಚುರುಕು,ಒಳಿತಾಗಲಿ ಇವರ ಭವಿಷ್ಯದ ಬದುಕು.ಈ ಕವನಸಂಕಲನದ ಹೆಸರೆ ಒಂಥರ ವಿಶೇಷ ಹಾಗು ಪರಿಪೂರ್ಣತೆಯಿಂದ ಕೂಡಿದೆ.ಈ ಶೀರ್ಷಿಕೆಯ ಒಳಹೊಕ್ಕಿದಾಗಷ್ಟೆ ಕವನಗಳ ಸಾರ ಅನಾವರಣಗೊಳ್ಳುವುದು.ಈ ನಿಟ್ಟಿನಲ್ಲಿ ನೋಡುವುದಾದರೆ ಯಾವುದೆ ಒಬ್ಬ ಬರೆಹಗಾರನಿಗೆ ತನ್ನ ಸುತ್ತಮುತ್ತಲಿನ ಘಟನೆಗಳು, ಸಂಗತಿಗಳ ಬಗ್ಗೆ ನೈಜತೆಯ ಅರಿವಿರಬೇಕಾದುದ್ದು ಅವಶ್ಯಕ.ಕಾರಣ ‘ಸುಳ್ಳೆಂಬ ದರ್ಪ ಸತ್ಯದ ಮೇಲೆ ಸವಾರಿ ಮಾಡುತ್ತಲೆ ಇರುತ್ತದೆ’.ಇದನ್ನು ಅಡಗಿಸಬೇಕಾದರೆ ಮೈಯೆಲ್ಲ ಕಣ್ಣಾಗಿರಬೇಕು.ಆಗಾಗಬೇಕಾದರೆ ನಮ್ಮ ಲೇಖನಿ ಹರಿತಗೊಳ್ಳಬೇಕು.ಹೀಗಿದ್ದರಷ್ಟೆ ಸಮಾಜದ ಅಂಕುಡೊಂಕುಗಳ ಬಗ್ಗೆ ದನಿಯೆತ್ತಬಹುದು. ಇಂತಹ ಒಂದು ಉತ್ತಮ ಕೆಲಸವನ್ನು ಕವಯತ್ರಿ ಶಬ್ರಿನಾ ರವರು ತಮ್ಮ ಬರೆಹಗಳ ಮೂಲಕ ದನಿ ಎತ್ತಿರುವುದು ಖುಷಿಯಾಗಿದೆ.

ಬರೆಹ ಎನ್ನುವುದು ಎಲ್ಲರನ್ನು ಅಪ್ಪಿಕೊಳ್ಳುವುದಲ್ಲ.ಅಪ್ಪಿಕೊಂಡರಂತು ಹೂ ಅರಳಿದಂತೆ ,ಪಕಳೆಗಳು ನಲಿದು ವಾಲಿ ಕೈಬೀಸಿ ಸೆಳೆಯುವಂತೆ ಲೇಖನಿಯೊಳಗೆ ಮೈದಳೆದು ಬಿಡುತ್ತವೆ.ಇಂತಹ ಬರೆಹಗಳನ್ನು ನಾನು ಶ್ರೀಮತಿ ಶಬ್ರಿನಾ ಮಹಮದ್ ಅಲಿಯವರ ‘ಬಿಳಿ ಹಾಳೆಯ ಮೇಲೆ ಕೆಂಪು ಶಾಹಿ’ ಕವನ ಸಂಕಲನದೊಳಗಿನ ಕವನಗಳನ್ನ ಓದುವಾಗ ಗಮನಿಸಿದ್ದು ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿಯಾಯಿತು.ಏಕೆಂದರೆ ಅಲ್ಲಿನ ಬರೆಹಗಳನ್ನು ಓದುತ್ತಿದ್ದರೆ ಅವು ಮಲ್ಲಿಗೆ ಬಳ್ಳಿಯಂತೆ ಹಬ್ಬುತ್ತಿರುವ ಹಾಗೆ ಭಾಸವಾಗುತ್ತದೆ.ಅಂದರೆ ಒಂದೊಂದು ಕವನಗಳನ್ನು ಓದುತ್ತಿದ್ದರೆ ಅರ್ಥಗರ್ಭಿತ ಹಾಗು ಸೊಗಸಾಗಿ ಮೂಡಿಬಂದಿದ್ದಲ್ಲದೆ; ಪದೇ ಪದೆ ಓದಬೇಕಿನಿಸಿದಂತು ಸತ್ಯ.ಇಲ್ಲಿ ಕವಯತ್ರಿ ಆರಿಸಿಕೊಂಡಿರುವ ಕವನಗಳ ವಿಷಯವಸ್ತುಗಳು ಒಂದಷ್ಟು ದಿನ ಬಿಟ್ಟು ಓದಿದರು ಕೂಡ ಮನಸ್ಸಿನಲ್ಲಿ ಮನೆಮಾಡುವಂತಿವೆ.

ಸಂಸ್ಕೃತ ಕವಿಯೊಬ್ಬನ ಪ್ರಕಾರ: ಕಾವ್ಯವಾಗಲಿ, ಬಾಣವಾಗಲಿ ಓದುಗನ ಹೃದಯವನ್ನು ಕಂಪಿಸುತ್ತ ನಾಟದಿದ್ದರೆ ಅದೆಂಥ ಬಾಣ, ಅದೆಂಥ ಕಾವ್ಯ? ಎಂದಿರುವುದು ನನಗಂತು ಹೌದೆನಿಸುತದೆ.ಅಂದರೆ ಕವನಗಳು ಓದುಗನ ಮನಸೂರೆಗೊಂಡರಷ್ಟೆ ಬರೆಹಗಳಿಗೂ ಶೋಭೆ.ಬರೆದವರಿಗೂ ಶೋಭೆ.ಇಲ್ಲಿ ಕವಯತ್ರಿ ಶಬ್ರಿನಾರವರು ತಮ್ಮ ಬರೆಹಗಳಿಂದಲೆ ಶೋಭಿಸುತ್ತಿರುವುದು ತುಂಬಾ ಸಂತಸ ತಂದಿದೆ.

ಒಂದೊಂದು ಕವನಗಳು ಶೀರ್ಷಿಕೆಗೆ ತಕ್ಕಂತೆ ಅರ್ಥಪೂರ್ಣವಾಗಿ ರಾರಾಜಿಸುತ್ತ,ಉದಧಿಯೊಳಗಿನ ಮುತ್ತು, ರತ್ನ ,ಹವಳದಂತೆ ಹೊಳೆಯುತ್ತ ಬೀಗುತ್ತಿವೆ.ಹಾಗೆಯೆ ಅವುಗಳಲ್ಲೆವನ್ನು ಗಮನಿಸುತ್ತಿದ್ದರಂತು ಅದ್ಬುತ ಪದಗಳ ಹೂರಣವೇ ಸರಿ.!ಎಂಬಂತೆ ಭಾಸವಾಗುತಿದೆ.ಕವಯತ್ರಿಯವರು ಈ ಕವನಸಂಕಲನದಲ್ಲಿ ಸುಮಾರು ೪೦ ಕವನಗಳಿದ್ದು ಅವುಗಳೆಲ್ಲವು ;ವಿಶೇಷ, ವಿಭಿನ್ನ ,ವಿಶಿಷ್ಟತೆಯನ್ನು ಕಾಯ್ದುಕೊಂಡಿರುವುದನ್ನು ನೋಡಬಹುದಾಗಿದೆ.ಹಾಗೆಯೆ ಇವರು ಲೇಖಕಿಯಾಗಿ ,ಬರಹಗಾರರಾಗಿ ನಿತ್ಯವೂ ಕನ್ನಡಮ್ಮನ ಸೇವೆಯನ್ನು ಮಾಡುತ್ತ ಕನ್ನಡ ಸಾಹಿತ್ಯ ಕೃಷಿಯನ್ನು ಹೆಚ್ಚುಚ್ಚು ಮಾಡುತ್ತಿರುವುದನ್ನು ಕಂಡರೆ ಮನಸ್ಸಿಗೊಂತರ ಖುಷಿಯಾಗುವುದು. ಬಹುಮುಖ ಪ್ರತಿಭೆಯಾಗಿರುವ ಕವಯತ್ರಿ ಶ್ರೀಮತಿ ಶಬ್ರಿನ ಮಹಮದ್ ಅಲಿ ಮೇಡಮ್ ರವರ ಸಾಹಿತ್ಯ ಸಂಗತ ನಿರಂತರವಾಗಿರಲಿ.

ಕವಯತ್ರಿಯವರ ಕವನಸಂಕಲನದ ಒಳಹೊಕ್ಕಾಗ ಅದ್ಭುತ ,ಅರ್ಥಪೂರ್ಣ ಹಾಗು ಸೊಗಸಾದ ವಿಷಯವಸ್ತುವುಳ್ಳ ಕವನಗಳು ರಾರಾಜಿಸುತಿದ್ದವು.ಬದುಕೆಂದರೆ ಭರವಸೆ ಎನ್ನುವ ಶೀರ್ಷಿಕೆಯಲ್ಲಿ ತುಂಬ ಚನ್ನಾಗಿ ಹೇಳಿರುವರು.ಬದುಕು ಭಯವಲ್ಲ ಅದೊಂದು ಭರವಸೆಗಳ ಹುರುಪು ಎಂದಿರುವರು.ಆಧುನಿಕತೆಯ ಪರಾಕಾಷ್ಟೆಗೆ ಸಿಲುಕಿ ಹಳತುಗಳನ್ನು ಮರೆತು ಹೊಸತುಗಳ ಬೆನ್ನತ್ತಿರುವ ಜನರು ಹಾಗು ಅವಲ್ಲಾಗುತ್ತಿರುವ ಬದಲಾವಣೆಗಳಿಗೆ ಉತ್ತಮ ನಿದರ್ಶನಗಳನ್ನು ನೀಡುವುದರ ವರ್ಣನೆ ಚನ್ನಾಗಿದೆ.ಬುವಿಯ ಒಡಲನ್ನು ಬರಿದು ಮಾಡಿ ಬರಡಾಗಿಸುತ್ತಿರುವ ಮನಜನಿಗೊಂದು ಮಸಣಭೇರಿಯೆಂಬ ಕವನದ ಮೂಲಕ ಚಂದದ ಸಂದೇಶ ನೀಡಿರುವರು.ಮೌನವೆಂಬುದು ಕತ್ತಿಗಿಂತಲು ಹರಿತವೆಂದು ಮಾರ್ಮಿಕ ಸತ್ಯ ಅರುಹಿಹರು.ಗುರುಗಳ ಮಹತ್ವವ ಸಾರುವ ಅಭಿಮಾನದ ಅಭಿನುಡಿಗಳಂತು ಚಂದ. ಇವರ ಕವನಗಳಲ್ಲಿ ನೋವು ,ನಲಿವು, ಬೇಡಿಕೆ, ಪರಾಕಾಷ್ಟೆ ,ಪ್ರೀತಿಯ ಬಂಧ, ಅಮ್ಮ ಮಗುವಿನ ಅವಿಚ್ಛಿನ್ನತೆ ಬಹಳ ಸೊಗಸಾಗಿ ಮೂಡಿಬಂದಿವೆ.ಹಾಗೆಯೇ ನಾಡು, ನುಡಿ,ರಾಷ್ರ್ಟಭಕ್ತಿ ,ರಾಷ್ಟ್ರಲಾಂಛನಕ್ಕೆ ಅಭಿಮಾನದ ಅಭಿನಂದನೆ .ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಗ್ಧಚೇತನ ಸ್ವಾತಂತ್ರ್ಯ ಹೋರಾಟಗಾರರು ಹಾಗು ವೀರ ಸೇನಾನಿಗಳ ಹೋರಾಟ, ಛಲ ,ಸಂಕಟಗಳು, ಹುಮ್ಮಸ್ಸು ಇತ್ಯಾದಿಗಳ ಸುಂದರ ವರ್ಣನೆ ಹಾಗೆಯೆ ನಿರಾಸೆ, ಅಸಮಧಾನ ,ಧಿಕ್ಕಾರದ ಕೂಗುಗಳ ಆರ್ಭಟ ಅಲ್ಲಲ್ಲಿ ಬಿಂಬಿಸಿವೆ.ಮುಂದುವರಿದಂತೆ ಸಾಮಾಜಿಕ ಅನಿಷ್ಟಗಳಿಗೂ ಎದೆಯಾಳದಿಂದ ಸ್ಪಂದಿಸುವ ಕವಯತ್ರಿಯವರ ಕಾರ್ಯ ಹೃದಯಸ್ಪರ್ಶಿಯಾಗಿದೆ.

ಈ ಕವನ ಸಂಕಲನದೊಳಗಿರುವ ಎಲ್ಲಾ ಕವನಗಳು ಒಂದಲ್ಲ ಒಂದು ರೀತಿಯಲ್ಲಿ ಸೊಗಸಾಗಿ ಮೂಡಿ ಬಂದಿವೆ ಅದರೊಳಗೊಂದಷ್ಟು ಕವನಗಳ ಬಗ್ಗೆ ಹೇಳಬಯಸುವೆ…

ನೇಗಿಲ ಮರೆತವರು…..

ಗತ್ತಿನ ದನಿಯಲಿ ತಂದೆಯ ತೆಗಳುತತುತ್ತನು ತಿನಿಸಿದ ಮಾತೆಯ ಮರೆಯುತನೆತ್ತಿಯ ಮೇಲಿನ ಕತ್ತಿಯ ತಿಳಿಯದೆ ಬೀಗುತ ನಡೆವವರುಹೊತ್ತಿಗೆ ತಿರುಳನು ಗಾಳಿಗೆ ತೂರುತಮತ್ತಿನ ಸೊಕ್ಕಲಿ ಕಾಲವ ಕಳೆಯುತಬಿತ್ತದೆ ಬೆಳೆಯುವ ಹಾದಿಯ ಹುಡುಕುತ ನೇಗಿಲ ಮರೆತವರು…

ಅದೆಷ್ಟು ಚಂದದ ಕವಿತೆ.ಆಧುನಿಕತೆಯ ಭರಾಟೆಯಿಂದಾಗಿ ಬದಲಾವಣೆ ಪರ್ವ ಎಲ್ಲೆಲ್ಲು ಹಾಗೆ ಎಲ್ಲದರಲ್ಲೂ ನೋಡ್ತಾ ಇದ್ದೇವೆ.ಅದಕ್ಕೆ ತಕ್ಕಂತೆ ನಮ್ಮ ಜನ ಮೋಜು ,ಮಸ್ತು ಅದರ ಜೊತೆಗೆ ಸೋಮಾರಿತನ ಬೇರೆ.ನಗರಗಳಿಗೆ ವಲಸೆ ಹೋಗುವ ಹಠಚಟದಿಂದಾಗಿ ಎಲ್ಲರೂ ಹಳ್ಳಿ ಬಿಟ್ಟು ಪಟ್ಟಣ ಸೇರ್ತಾ ಇದ್ದಾರೆ. ಹೀಗೆ ಆದ್ರೆ ಬೇಸಾಯ ಮಾಡೋರು ಯಾರು.? ಅಲ್ವಾ.! ಈ ಒಂದು ನಿಟ್ಟಿನಲ್ಲಿ ಕವಯತ್ರಿಯವರ ನೇಗಿಲ ಮರೆತವರು ಪದ್ಯದ ಸಾಲುಗಳು ತುಂಬ ಅರ್ಥಪೂರ್ಣವಾಗಿವೆ.ಇತ್ತೀಚೆಗಂತು ತಾತ ,ಮುತ್ತಾಂದಿರ ಕಾಲದ ಎಲ್ಲಾ ವಸ್ತುಗಳು ಮೂಲೆ ಸೇರುತ್ತಿವೆ.ಈಗೆಲ್ಲ ಎಲೆಕ್ರ್ಟಾನಿಕ್ ವಸ್ತುಗಳು, ಟ್ರ್ಯಾಕ್ಟರ್ ಗಳು ಬಂದಿವೆ.ವ್ಯವಸಾಯ ಮಾಡೋಕೆ ಹಿಂದಿನ ಕಾಲದ ನೇಗಿಲು, ಕುಂಟೆ, ನೊಗ ಮಾಯವೋ ಮಾಯ.ಅಪ್ಪ, ಅಮ್ಮ ಸಂಪಾದನೆ ಮಾಡಿರೊದನ್ನು ಉಳಿಸಿಕೊಳ್ಳದೆ ದುಂದುವೆಚ್ಚ ಮಾಡುತ್ತ ಜೀವನ ಮಾಡ್ತಿದಾರೆ.ಜಮೀನು ಇದ್ರೂ ಕೂಡ ವ್ಯವಸಾಯ ಮಾಡದೆ ನಗರಗಳ ಕಡೆ ಮುಖ ಮಾಡಿ ನಿಂತಿದ್ದಾರೆ.ಇಂತವರಿಗೆ ಅಪ್ಪ, ಅಮ್ಮನ ಬೆವರ ಹನಿಗಳ ಬೆಲೆ ಗೊತ್ತಿಲ್ಲ.ಅವರಿಗೆ ದಿಮಾಕಿನ ಮಾತುಗಳನ್ನಾಡಿ ಕಾಲ ಕಳೆಯೊರೆ ಹೆಚ್ಚಾಗಿದ್ದಾರೆ.ಹಿಂಗಾಗಿ ವ್ಯವಸಾಯದ ಉಪಕರಣಗಳನ್ನೆಲ್ಲ ಮರೆತೆ ಹೋಗಿದ್ದಾರೆ ಎಂಬ ಈ ಸಾಲುಗಳು ನೇಗಿಲ ಮರೆತವರು ಪದ್ಯದಲ್ಲಿ ತುಂಬಾ ಚನ್ನಾಗಿ ಮೂಡಿ ಬಂದಿವೆ.

*ನಾ ಕೇಳದ ಹುಟ್ಟಿಗೇಕೆ ಶಿಕ್ಷೆ*..?…..

ನಾ ಕಣ್ಣು ಬಿಡುವ ಮೊದಲೇಹೆತ್ತವರಿಂದ ತಿರಸ್ಕಾರವಂತೆನಡೆದಾಡುವ ಮೊದಲೇನಾ ಹೊರೆಯಾದನಂತೆಮಾತನಾಡುವ ಮೊದಲೇನಾ ಅಪ್ರಯೋಜಕಿಯಂತೆಅಕ್ಷರ ಕಲಿಯುವ ಮೊದಲೇನಾ ಅಬಲೆಯಂತೆನಾ ಕೇಳದ ಹುಟ್ಟಿಗೆನಮಗ್ಯಾಕೆ ಇಂಥ ಶಿಕ್ಷೆ.?

ಈ ಮೇಲಿನ ಸಾಲುಗಳು ನಿಜಕ್ಕೂ ಸತ್ಯ.ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೂ ಬದುಕುವ ಹಕ್ಕಿದೆ ಪುರುಷರಂತೆ ಸಾಮರ್ಥ್ಯವುಳ್ಳವಳಾಗಿದ್ದರು.ಕೆಲವು ಮೂಢಾತ್ಮರಂತು ಹೆಣ್ಣು ಹೆಣ್ಣೆಂದು ಜರಿಯುತ್ತಿದ್ದಾರೆ.ಗರ್ಭಾವಸ್ಥೆಯಲ್ಲಿರುವಾಗಲೆ ಕೆಲವೊಂದಷ್ಟು ಹೆಣ್ಣು ಮಕ್ಕಳು ತಿರಸ್ಕಾರಕೆ ಒಳಗಾಗುತ್ತಿರುವುದನ್ನ ಗಮನಿಸುತ್ತಿದ್ದೇವೆ.ಹೆಣ್ಣು ಮಕ್ಕಳನ್ನು ತಿರಸ್ಕರಿಸುವವರು ನಿಜ ಅವಿವೇಕಿಗಳು.ಹೆಣ್ಣು ಯಾವ ಗಂಡಿಗೂ ಕಮ್ಮಿಯಿಲ್ಲ. ಯಾವ ಕಾರ್ಯಸಾಧನೆಯಲ್ಲು ಮುಂದಿರುವರು. ಅಂಥದರಲ್ಲಿ ಹೆಣ್ಣನ್ನು ತೆಗಳುವವರಿಗೇನು ಕಡಿಮೆಯಿಲ್ಲ.”ಜಗದ ಸೊಬಗು ಹೆಣ್ಣು ,ಮನೆಯ ಬೆಡುಗು ,ಬೆರಗು ಹೆಣ್ಣು, ತಿಳಿದಿರಲಿ ಜಗಕ್ಕೆ ಕಣ್ಣು ಕೂಡ ಹೆಣ್ಣೆ”..! ಈ ಸತ್ಯವನ್ನೇಕೆ ಅರಿಯರೋ ಆ ದೇವರೆ ಬಲ್ಲ.!ಪುರುಷನಂತೆ ಹೆಣ್ಣು ಕೂಡ ಗಟ್ಟಿಗಿತ್ತಿ, ಛಲವಾದಿ, ಧೈರ್ಯವಂತಳು ,ಬಲಶಾಲಿ, ಜ್ಞಾನಿ,ವಿಮಾನವನ್ನು ಚಲಿಸಬಲ್ಲಳು ಚಂದ್ರಲೋಕಕೆ ಹೋಗ ಬಲ್ಲಳು ಪರ್ವತವನ್ನು ಹತ್ತ ಬಲ್ಲಳು, ಐಎಎಸ್ ,ಐಪಿಎಸ್, ಆಗಿರುವಳು. ಮುಳುಗಲೂ ಬಲ್ಲಳು, ತೇಲಳು ಬಲ್ಲಳು, ಹಾರಲು ಬಲ್ಲಳು.ಹೀಗಿರುವಾಗ ಆಕೆಯನ್ನೇಕೆ ತಿರಸ್ಕರಿಸುವಿರಿ..? ಹೀಗೆ ಹೆಣ್ಣಿನ ಅಳಲನ್ನು ಸೂಕ್ಷ್ಮವಾಗಿ ತೆರೆದಿಟ್ಟಿರುವ ರೀತಿ ತುಂಬಾ ಚನ್ನಾಗಿದೆ.

ಪದಗಳಲ್ಲಿ ಹಿಡಿದಿಡಲಾರೆ……

ನೊಂದ ಅಸ್ಪೃಶ್ಯರ ಗತ್ತಿನ ದನಿಯಾಗಿಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿದಮಹನೀಯರುಸಮಾನತೆಗಾಗಿ ಪಣತೊಟ್ಟ ಧೀರ ಬಾಬಾಸಾಹೇಬರುಭಾರತಾಂಬೆಯ ಹೆಮ್ಮೆಯ ಪುತ್ರರು

ಅಂಬೇಡ್ಕರ್ ರವರ ಸಾಧನೆಗಳು ಅವರ ಹೋರಾಟಗಳು ಕುರಿತಂತೆ ಅವರ ಬಗೆಗಿನ ಈ ಮೇಲಿನ ಸಾಲುಗಳು ತುಂಬಾ ಚನ್ನಾಗಿ ಮೂಡಿಬಂದಿವೆ.ಸ್ತೀ ಶಿಕ್ಷಣಕ್ಕೆ ಒತ್ತು ನೀಡಿದ ಅವರ ನಿಲುವು ಸಮಾನತೆಗಾಗಿ ಹೋರಾಡಿದ ಅವರ ದಿಟ್ಟತನ.ಹಾಗು ಅಸ್ಪೃಶ್ಯತೆಯನ್ನು ತೊಲಗಿಸಲು ಅವರು ಪಟ್ಟ ಶ್ರಮ ಅದ್ವಿತೀಯ, ಅಮೋಘ.ಅಂಬೇಡ್ಕರ್ ರವರು ಜಾತಿ ಮತ್ತು ಅಸ್ಪೃಶ್ಯತೆ ಆಚರಣೆಯ ವಿರುದ್ಧದ ಹೋರಾಟಕ್ಕೆ ಹೆಸರುವಾಸಿಯಾಗಿದ್ದರೂ ಅವರ ಆಲೋಚನೆಗಳು ರಾಷ್ಟ್ರೀಯತೆಯ ಬಗ್ಗೆಯೆ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ.ಸಮಾನತೆಗಾಗಿ ಶ್ರಮಿಸಿದ ಅಂಬೇಡ್ಕರ್ ರವರು ಜಾತಿ, ಧರ್ಮ, ಅಥವಾ ಲಿಂಗವನ್ನು ಲೆಕ್ಕಿಸದೆ ಸಮಾನತೆಗಾಗಿ ಹೋರಾಟ ಮಾಡಿದ ಬಾಬಾಸಾಹೇಬರು ನಿಜಕ್ಕೂ ಭಾರತಾಂಬೆಯ ಪುತ್ರರೆ ಆಗಿದ್ದರು.

ತ್ರಿವರ್ಣ ಧ್ವಜ….

ಕೇಸರಿ ಬಿಳಿ ಹಸಿರುನಮ್ಮ ಧ್ವಜದ ಉಸಿರುಸಾಟಿಯಿಲ್ಲದ ಆಕರ್ಷಕ ಹೊಳಪುಪಿಂಗಳ ವೆಂಕಯ್ಯರಿಂದ ಪಡೆದ ರೂಪು..

ನಮ್ಮ ರಾಷ್ಟ್ರಧ್ವಜದ ಹೆಮ್ಮೆಯ ಮಾತುಗಳನ್ನಾಡಿರುವ ಕವಯತ್ರಿಯವರು ಕೇಸರಿ ಬಿಳಿ ಹಸಿರು ಬಣ್ಣಗಳು ಧ್ವಜದ ಉಸಿರಾಗಿವೆ ಎಂದು ಉಸುರಿಸಿರುವರು.ಆ ತ್ರಿವರ್ಣಗಳಲ್ಲಿ ಕೇಸರಿ ಧೈರ್ಯ, ನಿಸ್ವಾರ್ಥತೆ ಮತ್ತು ಶಕ್ತಿಯ ಸಂಕೇತ.ಬಿಳಿ ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತ.ಹಸಿರು ಅಶ್ವದಳ, ಬೆಳವಣಿಗೆ ಮತ್ತು ಫಲವತ್ತತೆಯ ಸಂಕೇತವಾಗಿದೆ. ಜೊತೆಗೆ ಸಮೃದ್ಧಿಯನ್ನು ಬಿಂಬಿಸುವ ಸಾಲುಗಳಿವೆ ಹಾಗೆಯೆ ಭಾರತದ ರಾಷ್ಟ್ರೀಯ ಧ್ವಜ ಅಥವಾ ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ತ್ರಿವರ್ಣ ಧ್ವಜವು ಭಾರತದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ.ಸಾಟಿಯಿಲ್ಲದ ತಿರಂಗ ಪಿಂಗಳ ವೆಂಕಯ್ಯರವರಿಂದ ಉತ್ತಮವಾದ ರೂಪು ಪಡೆದ ಬಗೆಯನ್ನು ಚನ್ನಾಗಿ ವಿವರಿಸಿರುವರು.

ಹೀಗೆ ಕವಯತ್ರಿಯವರ ಕವನಗಳು ಒಂದೊಂದು ವಿಭಿನ್ನವಾಗಿದ್ದು ಅರ್ಥಪೂರ್ಣವಾಗಿ ಮೂಡಿಬಂದಿರುವುದನ್ನು ಕಾಣಬಹುದಾಗಿದೆ.ದೇಶಪ್ರೇಮ, ದೇಶಭಕ್ತಿಯ ಬಗ್ಗೆಗಿನ ಸಾಲುಗಳ ಮೈನವಿರೇಳುವಂತ ಅನುಭವವಾಗುವುದಂತು ಸತ್ಯ.ರಾಜಕೀಯ ಮುತ್ಸದ್ಧಿ ,ಸ್ವತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರ ಬಗ್ಗೆ ಬರೆದಿರುವ ಇವರ ಸಾಲುಗಳು ಮನದಾಳದಲ್ಲಿ ನೆಲೆನಿಂತಂತಿವೆ.ಅಮ್ಮ ಮಗುವಿನ ಪ್ರೀತಿ, ವಾತ್ಸಲ್ಯ ,ಕರುಣಾಭರಿತ ಸಾಲುಗಳು ಹಾಗೆಯೆ ಸೈನಿಕರ ಸಾಧನೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಸಂಗತಿಗಳು ಘಟನೆಗಳನ್ನಾಧರಿಸಿದ ಕವನಗಳು ತುಂಬಾ ಚನ್ನಾಗಿ ಮೂಡಿಬಂದಿವೆ.ವೇದನೆ ನಿವೇದನೆಯ ಬಗ್ಗೆ ಬಿಂಬ ಪ್ರತಿಬಿಂಬದ ಕಲ್ಪನೆ ಅತ್ಯಾಕರ್ಷಣೆಯಾಗಿದೆ.

ಹೀಗೆಯೆ ನಿಮ್ಮ ಸಾಹಿತ್ಯ ಕೃಷಿ ನಿರಂತರ ಮುಂದುವರಿಯುತ್ತಿರಲಿ ಮೇಡಮ್.ನಿಮ್ಮ ಸೃಜನಶೀಲ ಗುಣ, ಕ್ರಿಯಾಶೀಲತೆ ನಿಜಕ್ಕೂ ಮೆಚ್ಚತಕ್ಕದ್ದು.ಕನ್ನಡದ ಬಗೆಗಿನ ನಿಮ್ಮ ಆಸ್ಥೆ ಹಾಗು ಆಸಕ್ತಿಗೆ ಹೆಮ್ಮೆ ಎನಿಸುತಿದೆ.ತಮ್ಮ ಅನುಭವಗಳ ರಾಶಿಯನ್ನ ಬರೆಹರೂಪದಲ್ಲಿ ತಂದಿರುವುದು ನಿಜಕ್ಕೂ ಖುಷಿಯೆನಿಸುತಿದೆ.ಅಕ್ಷರ ರೂಪದ ಮೂಲಕ ಸೃಜನಶೀಲ ಕವಿತೆಗಳನ್ನು ರಚಿಸಿರುವ ನಿಮ್ಮ ಚಾಕ್ಯತೆ ತುಂಬಾ ಚನ್ನಾಗಿದೆ. ಹಾಗೆಯೇ ನಿಮ್ಮೀ ಕವನಸಂಕಲನದೊಳಗೆ ಷಟ್ಪದಿಯ ಕವನಗಳನ್ನು ಓದಿ ಮನಸ್ಸಿಗೆ ಸಾನಂದವಾಯಿತು.ಅವೆಲ್ಲವೂ ಅರ್ಥಪೂರ್ಣ ಹಾಗು ಉತ್ತಮ ವಸ್ತುವಿಷಯ ಕೂಡ ಅತ್ಯುತ್ತಮವಾಗಿವೆ.ನಿಮ್ಮ ಮುಂದಿನ ಕವನಗಳು ಮತ್ತಷ್ಟು ಸುಂದರವಾಗಿ ಮೂಡಿಬರಲೆಂದು ಆಶಿಸುವೆ. ಈ ಮುಖೇನ ಮುಂದೆಯೂ ಕೂಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತಮ್ಮದೆ ಆದ ಮಗದಷ್ಟು ವಿಶೇಷ ಸಂಕಲನಗಳ ಕೊಡುಗೆಯಾಗಲಿ.ಜಗನ್ಮಾತೆಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಇರಲೆಂದು ಹಾರೈಸುತ್ತ.

ಧನ್ಯವಾದಗಳೊಂದಿಗೆ….

ಅಭಿಜ್ಞಾ ಪಿ.ಎಮ್.ಗೌಡ

ಶಿಕ್ಷಕಿ ಮತ್ತು ಬರಹಗಾರ್ತಿ..✍️

ಮಂಡ್ಯ..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button